ಕಾರವಾರ/ ಬಾಗಲಕೋಟೆ: ಅಪಘಾತ ಪ್ರಕರಣಗಳು (Road Accident) ಹೆಚ್ಚಾಗುತ್ತಿದ್ದು, ಇದರಿಂದ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ಶಿರಾಲಿ ಬಳಿ ಭೀಕರ ಅಪಘಾತ ನಡೆದಿದೆ. ವೇಗವಾಗಿ ಬಂದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರ್ಗಲ್ ಮೂಲದ ನಿಕಿತಾ ಮಹಾಬಲೇಶ್ವರ ಗೊಂಡ (23) ಮೃತ ದುರ್ದೈವಿ. ಬೈಕ್ ಚಲಾಯಿಸುತ್ತಿದ್ದ ಭಟ್ಕಳ ಗುಳ್ಮಿ ನಿವಾಸಿ ಗಣೇಶ ಗೊಂಡ (35)ಗೆ ಸಣ್ಣಪುಟ್ಟ ಗಾಯವಾಗಿದೆ. ಇವರೊಟ್ಟಿಗಿದ್ದ ಗಿರಿಜಾ ಗೊಂಡರಿಗೆ (45) ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ ಮಾಡಲಾಗಿದೆ.
ಸ್ಥಳಕ್ಕೆ ಭಟ್ಕಳ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಅಡ್ಡಬಂದ ಕಾರು ಅಪಘಾತ ತಪ್ಪಿಸಲು ಸಡನ್ ಬ್ರೇಕ್ ಹಾಕಿದ ಚಾಲಕ!
ಅಪಘಾತ ತಪ್ಪಿಸಲು ಹೋಗಿ ಸಡನ್ ಬ್ರೇಕ್ ಹಾಕಿದ ಪರಿಣಾಮ ಚಾಲಕ ಹಾಗೂ ಕ್ಲೀನರ್ ಲಾರಿಯಲ್ಲಿ ಸಿಲುಕಿ ಒದ್ದಾಡಿದರು. ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಘಟನೆ ನಡೆದಿದೆ. ಫೈಯದ್, ಯಾಕೂ ಖಾನ್ ಗಾಯಾಳಾಗಿದ್ದಾರೆ. ಕಬ್ಬಿಣದ ಪೈಪ್‌ಗಳನ್ನು ರಾಜಸ್ತಾನದಿಂದ ಮಹಾರಾಷ್ಟ್ರಗೆ ಲಾರಿ ಮೂಲಕ ಸಾಗಿಸಲಾಗುತ್ತಿತ್ತು.
ಈ ವೇಳೆ ಲಾರಿಗೆ ಕಾರೊಂದು ದಿಢೀರ್ ಅಡ್ಡ ಬಂದ ಪರಿಣಾಮ ಚಾಲಕ ಸಡನ್ ಬ್ರೇಕ್ ಹಾಕಿದ್ದಾನೆ. ಇದರಿಂದಾಗಿ ಲಾರಿ ಮುಂಭಾಗವು ಸಂಪೂರ್ಣ ಜಖಂಗೊಂಡಿತ್ತು. ಚಾಲಕ ಹಾಗೂ ಕ್ಲಿನರ್ ಹೊರಬರಲು ಆಗದೆ ಲಾರಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸಾರ್ವಜನಿಕರ ಸಹಾಯದೊಂದಿಗೆ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಚಾಲಕ, ಕ್ಲೀನರ್‌ನನ್ನು ಹೊರತೆಗೆದಿದ್ದಾರೆ. ಅಪಘಾತದಿಂದ ಗಾಯಗೊಂಡಿದ್ದವರನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಬೆಂಗಳೂರು ಕಂಬಳ ನೋಡಿ ವಾಪಸಾಗುವಾಗ ಕಾರು-ಲಾರಿ ಡಿಕ್ಕಿ; ಸ್ಥಳದಲ್ಲೇ ಇಬ್ಬರ ಸಾವು
ತುಮಕೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಕರಾವಳಿ ಜನಪದ ಕ್ರೀಡೆಯಾದ ಕಂಬಳ (Bangalore Kambala) ವೀಕ್ಷಿಸಿ ವಾಪಸ್ ಹೋಗುವಾಗ ಕಾರು-ಲಾರಿ ಡಿಕ್ಕಿಯಾಗಿ (Accident) ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ತುಮಕೂರು ಜಿಲ್ಲೆ (Tumkur District) ಕುಣಿಗಲ್ ತಾಲೂಕಿನ ಚಿಗಣಿಪಾಳ್ಯ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಶನಿವಾರ (ನವೆಂಬರ್ 25) ರಾತ್ರಿ ಕಂಬಳ ನೋಡಿದ ಐವರು ಕಾರಿನಲ್ಲಿ ಮಂಗಳೂರಿಗೆ ವಾಪಸಾಗುತ್ತಿದ್ದರು. ಇದೇ ವೇಳೆ ಕಾರು ಹಾಗೂ ಬೋರ್‌ವೆಲ್ ಕೊರೆಯುವ ಲಾರಿ ಡಿಕ್ಕಿಯಾಗಿವೆ. ಮಂಗಳೂರಿನ ಪರೆರಾರ ಬಜಪ್ಪೆ ಗ್ರಾಮದ ವಾಸಿ ಕಿಶಾನ್ ಶೆಟ್ಟಿ(20) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಭಟ್ಟರ ತೋಟ ಗ್ರಾಮದ ವಾಸಿ ಫಿಲಿಪ್ ನೇರಿ (32) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಐವರು ಕಂಬಳ ವೀಕ್ಷಿಸಲೆಂದೇ ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದರು. ಕಂಬಳ ವೀಕ್ಷಿಸಿದ ಬಳಿಕ ಅವರು ಮಂಗಳೂರಿಗೆ ತೆರಳುತ್ತಿದ್ದರು. ಆದಾಗ್ಯೂ, ಅಪಘಾತ ಸಂಭವಿಸುತ್ತಲೇ ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಲಾರಿ ಹಾಗೂ ಕಾರು ವೇಗವಾಗಿ ಚಲಿಸುತ್ತಿದ್ದ ಕಾರಣ ಕಾರು ನಜ್ಜುಗುಜ್ಜಾಗಿದೆ. ಹಾಗಾಗಿಯೇ, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.