Site icon Vistara News

Road Accident : ಮಹಿಳೆಯ ಪ್ರಾಣ ತೆಗೆದ ಖಾಸಗಿ ಬಸ್‌; ಮತ್ತೊಬ್ಬ ಗಂಭೀರ

Road Accident in Kolar

ಕೋಲಾರ: ರಸ್ತೆಯಲ್ಲಿ ನಡೆದುಹೋಗುತ್ತಿದ್ದ ದಂಪತಿಗೆ ಬಸ್‌ (Bus Accident) ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಮಹಿಳೆ ಚಕ್ರದಡಿ ಸಿಲುಕಿ (Road Accident) ಮೃತಪಟ್ಟಿದ್ದರೆ, ಮಹಿಳೆಯ ಪತಿ ಗಂಭೀರ ಗಾಯಗೊಂಡಿದ್ದಾರೆ. ಕೋಲಾರ ನಗರದ ಮೆಕ್ಕೆ ಸರ್ಕಲ್‌ನಲ್ಲಿ ಈ ದಾರುಣ ಘಟನೆ ನಡೆದಿದೆ.

ಈ ದಂಪತಿ ಕೋಲಾರ ಜಿಲ್ಲೆಯ ಬಂಗಾರ್ ಪೇಟೆ ತಾಲೂಕಿನ ನಾಯಕನಹಳ್ಳಿ ಗ್ರಾಮದವರು. ರಾಮಕ್ಕ ಹಾಗೂ ಪತಿ ಶ್ರೀನಿವಾಸ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಸ್‌ ಡಿಕ್ಕಿ ಹೊಡೆದು, ರಾಮಕ್ಕನ ಮೇಲೆ ಹರಿದಿದೆ. ಗಂಭೀರ ಗಾಯಗೊಂಡ ರಾಮಕ್ಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇತ್ತ ರಾಮಕ್ಕಳ ಪತಿ ಶ್ರೀನಿವಾಸ್‌ಗೂ ಬಸ್‌ ತಾಗಿದ್ದು ಕೆಳಗೆ ಬಿದ್ದ ಅವರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರು ಕೂಡಲೇ ಅವರನ್ನು ಜಿಲಾಸ್ಪತ್ರೆಗೆ ಸೇರಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗಲ್ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಖಾಸಗಿ ಬಸ್ ಚಾಲಕನನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Abuse case: ನಡುರಸ್ತೆಯಲ್ಲಿ ಅಸಭ್ಯ ವರ್ತನೆ; ಯುವತಿ ಎದುರಿಗೆ ಹಸ್ತಮೈಥುನ ಮಾಡಿಕೊಂಡು ವಿಕೃತಿ

ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು; ಇಬ್ಬರು ಅಯ್ಯಪ್ಪ ಭಕ್ತರ ಸಾವು

ವಿಜಯನಗರ : ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಹೊಸಳ್ಳಿ‌ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ (Road Accident) ಇಬ್ಬರು ಅಯ್ಯಪ್ಪ ಭಕ್ತರು ದಾರುಣವಾಗಿ ಮೃತಪಟ್ಟಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಸ್ವಿಫ್ಟ್‌ ಡಿಸೈರ್‌ ಕಾರು ರಸ್ತೆ ವಿಭಜಕಕ್ಕೆ (Car Hits Divider) ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಾರು ಕಾನಹೊಸಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದೆ. ಮೃತಪಟ್ಟ ಅಯ್ಯಪ್ಪ ಭಕ್ತರನ್ನು ಗದಗ ಮೂಲದ ಯುವರಾಜ್ ಮತ್ತು ಚೆನ್ನವೀರ ಗೌಡ ಎಂದು ಗುರುತಿಸಲಾಗಿದೆ.

ಚಾಲಕನ ಅಜಾಗರೂಕತೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಘಟನೆಯ ವೇಳೆ ತೀವ್ರ ಗಾಯಗೊಂಡಿದ್ದ ಐವರನ್ನು ಜಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಯುವರಾಜ್‌ ಮತ್ತು ಚೆನ್ನವೀರ ಗೌಡ ಅವರು ಮಾರ್ಗ ಮಧ್ಯೆ ಕೊನೆಯುಸಿರೆಳೆದರು. ಉಳಿದ ಮೂವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾನಾಹೊಸಳ್ಳಿ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ತಾಳಿಕೋಟೆ ಬಳಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ: ಸವಾರ ಸ್ಥಳದಲ್ಲೇ ಬಲಿ

ವಿಜಯಪುರ: ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಿಣಜಗಿ ಬಳಿ ನಿಂತಿದ್ದ ಟ್ರ್ಯಾಕ್ಟರಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಿಣಜಗಿ ಗ್ರಾಮದ ಶ್ರೀಧರ ಮಾದರ (24) ಮೃತಪಟ್ಟ ದುರ್ದೈವಿ. ತಾಳಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಬ್ಬು ತುಂಬಿದ ಟ್ರ್ಯಾಕ್ಟರ್‌ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವು

ಚಿಕ್ಕೋಡಿ: ಕಬ್ಬು ತುಂಬಿದ ಟ್ರ್ಯಾಕ್ಟರ್ ಒಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಹಿನ್ನೆಲೆಯಲ್ಲಿ ಚಾಲಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಹುಕ್ಕೇರಿ ತಾಲೂಕಿನ ಹಂಜಾನಟ್ಟಿ ಗ್ರಾಮದ ಚಾಲಕ ಮಹಾರುದ್ರ ಸಂಕೇಶ್ವರಿ (24) ಮೃತಪಟ್ಟವರು.

ಹಂಜಾನಟ್ಟಿ ಗ್ರಾಮದಿಂದ ಸಂಕೇಶ್ವರ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಾಟ ಮಾಡುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version