Site icon Vistara News

Bangalore Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟಕ್ಕೆ ಕೆರೆಯಂತಾದ ರಸ್ತೆಗಳು; ವಾಹನ ಸಂಚಾರ ಅಸ್ತವ್ಯಸ್ತ

Heavy rain in bangalore

ಬೆಂಗಳೂರು: ರಾಜಧಾನಿಯಲ್ಲಿ ವಿವಿಧೆಡೆ ಸೋಮವಾರ ರಾತ್ರಿ ಭಾರಿ ಮಳೆ ಸುರಿಯಿತು. ವರುಣನ ಆರ್ಭಟದಿಂದ (Bangalore Rain) ರಸ್ತೆಗಳು ಕೆರೆಯಂತಾಗಿ ಬದಲಾಗಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ವಿವಿಧ ರಸ್ತೆಗಳು ಜಲಾವೃತವಾದ ಹಿನ್ನೆಲೆಯಲ್ಲಿ ಕೆಲಸ ಮುಗಿಸಿ ಮನೆಗಳಿಗೆ ತೆರಳುತ್ತಿದ್ದವರು ಪರದಾಡುವಂತಾಯಿತು.

ವಿಧಾನಸೌಧ, ಕಾರ್ಪೋರೇಷನ್, ಮೆಜೆಸ್ಟಿಕ್, ಶಾಂತಿನಗರ, ಹೆಬ್ಬಾಳ, ಡಾಲರ್ಸ್ ಕಾಲೋನಿ, ಮತ್ತಿಕೆರೆ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಸದಾಶಿವನಗರ, ಮೇಖ್ರಿ ಸರ್ಕಲ್, ಆರ್ಟಿನಗರ, ಯಲಹಂಕ, ಹೊಸೂರು ರಸ್ತೆಯ ರೂಪೇನಾ ಅಗ್ರಹಾರ, ಹರಳೂರು ಜಂಕ್ಷನ್, ನಾಯಂಡಹಳ್ಳಿ, ಶೇಷಾದ್ರಿಪುರಂ ರೈಲ್ವೆ ಅಂಡರ್ ಪಾಸ್, ವಿಜಯನಗರ ಧನಂಜಯ ಪ್ಯಾಲೇಸ್, ಬನ್ನೇರುಘಟ್ಟ ರಸ್ತೆ ನಾಗಾರ್ಜುನ ಜಂಕ್ಷನ್, ಅನಿಲ್ ಕುಂಬ್ಳೆ ಸರ್ಕಲ್, ಕಲ್ಯಾಣ ನಗರ ಬ್ರಿಡ್ಜ್, ಹೆಸರಘಟ್ಟ ಬಳಿ ರಸ್ತೆಗಳಲ್ಲಿ ಭಾರಿ ಪ್ರಮಾಣದ ಮಳೆ ನೀರು ಹರಿಯಿತು. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.

ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಮಳೆ ನೀರು ನಿಂತಿರುವುದು.

ಇದನ್ನೂ ಓದಿ | Drought in Karnataka : ಮುಕ್ಕಾಲು ಕರ್ನಾಟಕದಲ್ಲಿ ಬರ್ಬರ ಬರ; 236 ತಾಲೂಕಲ್ಲಿ 208 ಬರಪೀಡಿತ!

ಮಲ್ಲೇಶ್ವರಂ ಬಿಜೆಪಿ ಕಚೇರಿ ಎದುರು ಒಳ ಚರಂಡಿ ಕಾಲುವೆ ತುಂಬಿದ್ದರಿಂದ ಮ್ಯಾನ್ ಹೋಲ್‌ನಿಂದ ಕೊಳಚೆ ನೀರು ಭಾರಿ ಪ್ರಮಾಣದಲ್ಲಿ ರಸ್ತೆಯಲ್ಲಿ ಹರಿಯುತ್ತಿತ್ತು. ಇನ್ನು ಶೇಷಾದ್ರಿಪುರಂ ರೈಲ್ವೆ ಅಂಡರ್ ಪಾಸ್ ಜಲಾವೃತವಾಗಿದ್ದರಿಂದ ರಸ್ತೆ ಬಂದ್‌ ಆಗಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಹೀಗಾಗಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡುವಂತೆ ಸೂಚಿಸಿದರು. ಮಳೆಯಿಂದ ಬೊಮ್ಮನಹಳ್ಳಿ ಹಾಗೂ ಮಡಿವಾಳ ಮುಖ್ಯ ರಸ್ತೆ ಜಲಾವೃತವಾಗಿತ್ತು. ಇದರಿಂದ ಭಾರಿ ಪ್ರಮಾಣದ ಸಂಚಾರ ದಟ್ಟಣೆ ಉಂಟಾಗಿತ್ತು.

ಶೇಷಾದ್ರಿಪುರಂನ ರೈಲ್ವೆ ಅಂಡರ್‌ ಪಾಸ್‌ನಲ್ಲಿ ಮಳೆ ನೀರು ನಿಂತಿರುವುದು.

ಜಯನಗರದ ಅರಸು ಕಾಲೋನಿಯಲ್ಲಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಜನರಿಗೆ ತೊಂದರೆಯಾಯಿತು. ಜತೆಗೆ ಮನೆಯಲ್ಲಿದ್ದ ವಸ್ತುಗಳು ನೀರುಪಾಲಾಗಿವೆ. ಇನ್ನು ಎಲೆಕ್ಟ್ರಾನಿಕ್ ಸಿಟಿಯಿಂದ ಚಂದಾಪುರದವರೆಗೆ ಹೆಚ್ಚಿನ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅದೇ ರೀತಿ ಬೆಂಗಳೂರು- ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆಯಿಂದ ನಾಲ್ಕೈದು ಕಿಲೋಮೀಟರ್‌ವರೆಗೆ ವಾಹನಗಳು ನಿಂತಿದ್ದವು. ಹೀಗಾಗಿ ವಾಹನ ಚಾಲಕರು ಹೈರಾಣಾದರು.

Exit mobile version