Site icon Vistara News

Robbery Case: ಅತ್ತ ಸರಸಕ್ಕಾಗಿ ಸರ ಕದ್ದ ಮೂವರು ಹೆಂಡಿರ ಮುದ್ದಿನ ಗಂಡ; ಇತ್ತ ದರೋಡೆಗಿಳಿದ ಆಟೊ ಚಾಲಕರಿಬ್ಬರ ಸೆರೆ

#image_title

ಬೆಂಗಳೂರು: ನೀವೇನಾದರೂ ತಡರಾತ್ರಿ ಮೆಜೆಸ್ಟಿಕ್‌ (Majestic) ಬಳಿ ಆಟೋ (Auto Drivers) ಹತ್ತುವವರಿದ್ದರೆ ಸ್ವಲ್ಪ ಎಚ್ಚರವಾಗಿರಿ. ಯಾಕೆಂದರೆ ಇಲ್ಲೂ ಸಹ ದರೋಡೆಕೋರರು ಇರಬಹುದು. ಇಬ್ಬರು ಆಟೋ ಚಾಲಕರು ಆಟೋ ಹತ್ತಿದ ಗ್ರಾಹಕರ ಮೇಲೆ ಹಲ್ಲೆ ನಡೆಸಿ, ಬಳಿಕ ಸುಲಿಗೆ (Robbery Case) ಮಾಡಿರುವ ಘಟನೆ ನಡೆದಿದೆ.

ಅಲ್ಲಾ ಬಕಾಸ್ , ನದೀಮ್ ಖಾನ್ ಎಂಬ ಇಬ್ಬರು ಆಟೋ ಚಾಲಕರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಕಳೆದ 26ರಂದು ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಯಾಣಿರೊಬ್ಬರು ಬಾರ್‌ನಿಂದ ರೂಮ್‌ಗೆ ಬಿಡುವಂತೆ ಆಟೋ ಹತ್ತಿದ್ದಾರೆ. ಆಟೋ ಹತ್ತಿದ ಕೂಡಲೇ ಬಿಯರ್‌ಬೇಕು ಎಂದು ಕೇಳಿದ್ದಾರೆ. ನಂತರ ಈ ಚಾಲಕರು ಬಿಯರ್ ಕೊಡಿಸುತ್ತೇವೆ ಎಂದು ಹೇಳಿ ಐದಾರು ಕಿ.ಮೀ ಸುತ್ತಾಡಿಸಿದ್ದಾರೆ.

ಉಪ್ಪಾರಪೇಟೆ ಪೊಲೀಸರ ಕಾರ್ಯಾಚರಣೆ

ಬಳಿಕ ಯಾರೂ ಇಲ್ಲದ ಸ್ಥಳಕ್ಕೆ ಕರೆದುಕೊಂಡು ಹೋಗಿ ಆ ವ್ಯಕ್ತಿಗೆ ಹೊಡೆದು, ಮೊಬೈಲ್, ಹಣವನ್ನು ಕದ್ದು ಪರಾರಿ ಆಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಇಬ್ಬರನ್ನು ಜೈಲಿಗೆ ಅಟ್ಟಿದ್ದಾರೆ. ಬಂಧಿತರಿಂದ ಒಂದು ಆಟೋ, ಎರಡು ಮೊಬೈಲ್, 4 ಸಾವಿರ ನಗದು ಜಪ್ತಿ ಮಾಡಲಾಗಿದೆ. ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ.

ಬಂಧಿತ ಅಚ್ಯುತ್‌ ಕುಮಾರ್‌ ಘನಿ

ಶೋಕಿ ಜೀವನಕ್ಕಾಗಿ ಕಳ್ಳತನಕ್ಕಿಳಿದಿದ್ದವನ ಬಂಧನ

ಶೋಕಿ ಜೀವನಕ್ಕಾಗಿ ಸರಗಳ್ಳತನ ಮಾಡುತ್ತಿದ್ದವನನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ. ಅಚ್ಯುತ್ ಕುಮಾರ್‌ ಘನಿ ಬಂಧಿತ ಆರೋಪಿ ಆಗಿದ್ದು, ಇದುವರೆಗೂ 154 ಸರಗಳ್ಳತನ ಕೇಸ್‌ ದಾಖಲಾಗಿವೆ. ಅಚ್ಯುತ್ ಬಂಧನದಿಂದ 4 ಪ್ರಕರಣಗಳು ಬೆಳಕಿಗೆ ಬಂದಿವೆ.

2018ರಲ್ಲಿ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿ ಎಸ್ಕೇಪ್‌ ಆಗುತ್ತಿದ್ದಾಗ ಪೊಲೀಸರು ಎರಡೂ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು. ಕಳೆದ ಆರು ತಿಂಗಳ ಹಿಂದಷ್ಟೇ ರಿಲೀಸ್ ಆಗಿದ್ದವನು ಮತ್ತೆ ಕಳ್ಳತನಕ್ಕಿಳಿದು ನಂದಿನಿ ಲೇಔಟ್ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದ. ಎರಡು ತಿಂಗಳ ಹಿಂದೆ ಮತ್ತೆ ಜಾಮೀನಿನ ಮೇಲೆ ಹೊರಗಡೆ ಬಂದಿದ್ದ ಈತ ನಾಲ್ಕು ಕಡೆಗಳಲ್ಲಿ ಸರಗಳ್ಳತನ ಮಾಡಿ ಪರಾರಿ ಆಗಿದ್ದ.

ಮೂಲತಃ ಧಾರವಾಡ ಜಿಲ್ಲೆಯ ಕೋಳಿವಾಡದವನಾದ ಈತ 2015ರಲ್ಲಿ ಬೆಂಗಳೂರಿಗೆ ಬಂದು ಅಚ್ಯುತ್ ಕುಮಾರ್ ಘನಿ ಎಂದು ಹೆಸರು ಬದಲಿಸಿಕೊಂಡಿದ್ದ. ಇದುವರೆಗೂ ಮೂರು ಮದುವೆ ಆಗಿರುವ ಈ ಖದೀಮ ಶೋಕಿ ಜೀವನಕ್ಕಾಗಿ ಸರಗಳ್ಳತನ ಮಾಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ದಾವಣಗೆರೆ, ಗದಗ, ಸಿ.ಕೆ. ಅಚ್ಚುಕಟ್ಟು, ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೇಕಾಗಿದ್ದ ಆರೋಪಿಯಾಗಿದ್ದಾನೆ. ಸದ್ಯ ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದು, 302 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ಕೊಡಗು: ಗಾಂಜಾ ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ಮೂವರು ಆರೋಪಿಗಳನ್ನು ಮಾಲು ಸಹಿತ ಬಂಧಿಸುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ. ಸೈಫುಲ್ ಇಸ್ಲಾಂ (27), ಅನಾರ್ ಹುಸೈನ್ (37), ಜಹೀರ್ ಅಲಿ (28) ಬಂಧಿತ ಆರೋಪಿಗಳಾಗಿದ್ದಾರೆ. ಕೊಡಗಿನ ಮಡಿಕೇರಿ ತಾಲೂಕಿನ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕೈಕಾಡು ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು.

ಇದನ್ನೂ ಓದಿ: Honey bee attack : ಹೆಜ್ಜೇನು ದಾಳಿ ವೇಳೆ ಬಾವಿಗೆ ಹಾರಿ ಜೀವ ಉಳಿಸಿಕೊಂಡ 79ರ ವೃದ್ಧ; ಕಡಿತಕ್ಕೆ ಇಬ್ಬರು ಗಂಭೀರ

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅಂದಾಜು 3.50 ಲಕ್ಷ ರೂಪಾಯಿ ವೆಚ್ಚದ 2.150 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಾಮರಾಜನ್ ಮತ್ತು ಹೆಚ್ಚುವರಿ ಪೊಲೀಸ್ ಉಪ ಅಧೀಕ್ಷಕರಾದ ಸುಂದರ್ ರಾಜ್ ನಿರ್ದೇಶನದಂತೆ ಡಿವೈಎಸ್‌ಪಿ ಜಗದೀಶ್, ವೃತ ನಿರೀಕ್ಷಕ ಶೇಖರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಸಿಬ್ಬಂದಿಗಳಾದ ಕೆ.ಎಂ. ಅಬ್ದುಲ್ ಶಮೀಲ್, ಶಿವಪ್ರಸಾದ್, ಹರ್ಷ, ಪ್ರಸನ್ನ, ಮಧುಸೂದನ್, ಎಚ್.ಸಿ. ಕಾಳೆಯಪ್ಪ, ಪಂಚಲಿಂಗಪ್ಪ ಸತ್ತಿಗೇರಿ, ಮಹದೇವ ನಾಯಕ, ನವೀನ್, ಶರತ್, ಮಹೇಶ್, ರಾಮಕೃಷ್ಣ, ರವಿಕುಮಾರ್, ಗಿರೀಶ್, ವೆಂಕಟೇಶ್, ಲವಕುಮಾರ್, ಚಾಲಕ ಷರೀಫ್ ಪಾಲ್ಗೊಂಡಿದ್ದರು.

Exit mobile version