ಬೆಂಗಳೂರು: ಇಲ್ಲಿನ ಬ್ಯಾಡರಹಳ್ಳಿಯ ವಿನಾಯಕ ಜ್ಯುವೆಲ್ಲರ್ಸ್ ದರೋಡೆ ಪ್ರಕರಣಕ್ಕೆ (Robbery Case) ಸಂಬಂಧಿಸಿದ್ದಂತೆ ಬ್ಯಾಡರಹಳ್ಳಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಕೃತ್ಯವೆಸಗಿ ಹೈದರಾಬಾದ್‌ಗೆ ಫ್ಲೈಟ್‌ನಲ್ಲಿ ಎಸ್ಕೇಪ್ ಆಗುತ್ತಿದ್ದ ಹುಸೈನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಳಿ ಸ್ವಲ್ಪ ಪ್ರಮಾಣದ ಚಿನ್ನಾಭರಣ ಮಾತ್ರ ಪತ್ತೆಯಾಗಿದೆ. ಇನ್ನುಳಿದ ಮೂವರು ಆರೋಪಿಗಳಾದ ಸಿಕಂದರ್, ಕಳ್ಳ ಶಿವ, ವಿಕಾಸ್ ಪರಾರಿ ಆಗಿದ್ದಾರೆ. ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನು ಗುಂಡು ಹಾರಿಸಿ ಚಿನ್ನದೋಚಿದ ಆಗಂತಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಟ್ರಿಗರ್ ಎಳೆದು ಗನ್ ಪಾಯಿಂಟ್ ಮಾಡಿ ಚಿನ್ನಾಭರಣವೆಲ್ಲನ್ನೆಲ್ಲ ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಎಸ್ಕೇಪ್ ಆಗಿದ್ದಾರೆ. ದರೋಡೆಕೋರರ ಕೃತ್ಯವೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಏನಿದು ಘಟನೆ?
ಜನ ಓಡಾಡುವ ಸಮಯದಲ್ಲೇ ಚಿನ್ನದ ಅಂಗಡಿಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ ದರೋಡೆ ಮಾಡಿರುವ (Robbery Case) ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 12ರಂದು ನಡೆದಿತ್ತು. ಚಿನ್ನದಂಗಡಿ ಮಾಲೀಕ ಮನೋಜ್ ಕಾಲಿಗೆ ಗುಂಡೇಟು ತಗುಲಿ ಗಂಭೀರ ಗಾಯಗೊಂಡಿದ್ದರು.
ಹಾಡಹಗಲೇ ಬ್ಯಾಡರಹಳ್ಳಿಯ ಪೈಪ್ ಲೈನ್ ರಸ್ತೆಯಲ್ಲಿರುವ ವಿನಾಯಕ ಜ್ಯುವೆಲ್ಲರ್ಸ್‌ಗೆ ನುಗ್ಗಿದ ದರೋಡೆಕೋರರು ಅಂಗಡಿಯಲ್ಲಿದ್ದ ಮಾಲೀಕ ಮನೋಜ್ ಗನ್ ತೋರಿಸಿ ಬೆದರಿಸಲು ಮುಂದಾಗಿದ್ದರು. ಅ.12ರ ಬೆಳಗ್ಗೆ 10.45ರ ಸುಮಾರಿಗೆ ಎರಡು ಬೈಕ್‌ಗಳಲ್ಲಿ ನಾಲ್ವರು ದರೋಡೆಕೋರರು ಬಂದಿದ್ದರು.
ಮೊದಲಿಗೆ ಇಬ್ಬರು ಚಿನ್ನ ಖರೀದಿ ಮಾಡುವ ನೆಪದಲ್ಲಿ ಅಂಗಡಿ ಬಂದಿದ್ದಾರೆ. ಮಾಲೀಕನ ಗಮನ ಬೇರೆಡೆ ಸೆಳೆಯುತ್ತಿದ್ದಂತೆ ಮತ್ತಿಬ್ಬರು ಒಳನುಗ್ಗಿ ಬಾಗಿಲು ಮುಚ್ಚಿದ್ದಾರೆ. ನಂತರ ಗನ್ ತೋರಿಸಿ ಸುಮಾರು 1 ಕೆಜಿ ತೂಕದ ಚಿನ್ನಾಭರಣವನ್ನೆಲ್ಲ ದರೋಡೆ ಮಾಡಿದ್ದರು. ಈ ವೇಳೆ ವಿರೋಧ ವ್ಯಕ್ತಪಡಿಸಿದ ಅಂಗಡಿ ಮಾಲೀಕ ಮನೋಜ್‌ಗೆ ಗುಂಡು ಹಾರಿಸಿದ್ದರು. ಸದ್ಯ ಗಾಯಾಳು ಮನೋಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಬಂದಿದ್ದ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲಿಸಿದ್ದರು. ಅಂಗಡಿಯಲ್ಲಿದ್ದ ಸಿಸಿಟಿವಿ ಹಾಗೂ ಸುತ್ತಮುತ್ತಲಿರುವ ಸಿಸಿಟಿವಿಗಳ ಪರಿಶೀಲನೆ ನಡೆಸಿ, ಸಿಕ್ಕ ಸುಳಿವಿನ ಆಧಾರದ ಮೇಲೆ ದರೋಡೆಕೋರರಿಗೆ ಹುಡುಕಾಟ ನಡೆಸಿದ್ದರು. ಇದೀಗ ನಾಲ್ವರ ಪೈಕಿ ಒಬ್ಬ ದರೋಡೆಕೋರ ಸಿಕ್ಕಿಬಿದ್ದಿದ್ದಾನೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ