Site icon Vistara News

Robbery Case: ಯಾದಗಿರಿಯಲ್ಲಿ ಮನೆಗೆ ನುಗ್ಗಿದ ಮುಸುಕುಧಾರಿಗಳಿಂದ ಗನ್‌ ತೋರಿಸಿ ಲೂಟಿ; ತಪ್ಪಿಸಿಕೊಂಡಿದ್ದೇ ರೋಚಕ

Masked men break into house in Yadgir, House looted at gunpoint

Masked men break into house in Yadgir, House looted at gunpoint

ಯಾದಗಿರಿ: ಇಲ್ಲಿನ ರಾಜೀವ್ ಗಾಂಧಿ ನಗರದಲ್ಲಿ ತಡರಾತ್ರಿ ಮನೆಗೆ ನುಗ್ಗಿದ (Robbery Case) ದರೋಡೆಕೋರರು ಮನೆ ಮಂದಿಗೆ ಗನ್ ತೋರಿಸಿ ಲೂಟಿ ಮಾಡಿದ ಘಟನೆ ನಡೆದಿದೆ. ಗಾಂಧಿನಗರದ ದೀಪಕ್ ಕುಮಾರ್ ಎಂಬುವವರ ಮನೆಗೆ ಕನ್ನ ಹಾಕಿದ್ದಾರೆ.

ಮನೆಯ ಬೀರು ಮುರಿದು 4 ತೊಲೆ ಬಂಗಾರ, 3 ತೊಲೆ ಬೆಳ್ಳಿ ಹಾಗೂ 5 ಸಾವಿರ ಹಣ ಕಳ್ಳತನ ಮಾಡಿ ಪರಾರಿ ಆಗಿದ್ದಾರೆ. ರಾತ್ರಿ ವೇಳೆ 9-30ರ ಸುಮಾರಿಗೆ ಮುಖಕ್ಕೆ ಮುಸುಕು ಧರಿಸಿ ಬಂದು ದರೋಡೆ ಮಾಡಿದ್ದಾರೆ. ದೀಪಕ್‌ ಕುಟುಂಬಸ್ಥರು ಮನೆಯ ಮುಖ್ಯ ಬಾಗಿಲು ತೆರೆದು, ಹೊರಗಡೆ ಹೋಗಿದ್ದ ತಮ್ಮ ಸಹೋದರನ ಬರುವಿಕೆಗಾಗಿ ಕಾಯುತ್ತಿದ್ದರು.

ಈ ವೇಳೆ ಏಕಾಏಕಿ ಮನೆಯೊಳಕ್ಕೆ ನುಗ್ಗಿದ ಮೂವರು, ನಕಲಿ ಗನ್ ಹಾಗೂ ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಮನೆ ಮಂದಿಯನ್ನೆಲ್ಲ ಒಂದೆಡೆ ಸೇರಿಸಿ ಬಳಿಕ ಹೊರಗಿನವರಿಗೆ ಅನುಮಾನಬಾರದೆಂದು ಟಿವಿ ಆನ್‌ ಮಾಡಿ ವಾಲ್ಯುಮ್‌ ಹೆಚ್ಚಿಸಿದ್ದಾರೆ. ಇನ್ನೇನು ಸಿಕ್ಕಿದೆಲ್ಲ ದೋಚಲು ಹೋಗಬೇಕು ಎನ್ನುವಾಗಲೇ ಕಳ್ಳರ ಕೈಯಲ್ಲಿದ್ದ ಗನ್ ಅನ್ನು ಮತ್ತೊಬ್ಬ ಸಹೋದರ ಮನೋಜಕುಮಾರ್ ಕಿತ್ತುಕೊಂಡಿದ್ದಾನೆ.

ಇದನ್ನೂ ಓದಿ: Viral Video : ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಮ್ಮನನ್ನು ತಬ್ಬಿಕೊಂಡ ಮರಿ ಕೋತಿ; ಇದು ಕರುಳು ಹಿಂಡುವ ವಿಡಿಯೊ

ಇದರಿಂದ ಸಿಟ್ಟಿಗೆದ್ದ ದರೋಡೆಕೋರರು ಮನೋಜನ ಕಣ್ಣಿಗೆ ಕಾರದ ಪುಡಿ ಎರಚಿದ್ದಾರೆ. ಇತ್ತ ಕಾರದ ಪುಡಿ ಎರಚಿದರೂ ಕಳ್ಳರ ಕೈಯಿಂದ ತಪ್ಪಿಸಿಕೊಳ್ಳಲು ಹೋಗಿ ಓಡುವಾಗ ನಿಯಂತ್ರಣ ತಪ್ಪಿ ಕಾಂಪೌಂಡ್ ಮೇಲಿಂದ ಬಿದ್ದು ಗಾಯಗೊಂಡಿದ್ದಾರೆ. ಈ ವೇಳೆ ಮನೋಜ್ ಕುಮಾರ್ ಚೀರಾಟ ಕೇಳಿ ಏರಿಯಾ ಜನರು ಜಮಾಯಿಸಿದ್ದಾರೆ. ಜನರು ಸೇರುತ್ತಿದ್ದಂತೆ ಖದೀಮರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಬೆಂಗಳೂರು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version