ಬೆಂಗಳೂರು: ಮನೆಯಲ್ಲಿ ಒಂಟಿ ಮಹಿಳೆಯರು, ವೃದ್ಧೆಯರನ್ನೇ ಟಾರ್ಗೆಟ್ ಮಾಡಿ ದರೋಡೆ (Robbery Case) ಮಾಡುವ ಪ್ರಕರಣ ಹೆಚ್ಚಾಗುತ್ತಿದೆ. ಆರ್.ಆರ್ ನಗರದಲ್ಲಿ (RR Nagar Robbery Case) ಮೊಮ್ಮಕ್ಕಳನ್ನು ಟ್ಯೂಷನ್‌ಗೆ ಬಿಟ್ಟು ಮನೆಗೆ ವಾಪಸ್ ಬಂದಿದ್ದ ವೃದ್ಧೆಯನ್ನು ಕೈ-ಕಾಲು ಕಟ್ಟಿ ದರೋಡೆ ಮಾಡಿದ್ದ ರೌಡಿಶೀಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಜನವರಿ 10ರಂದು ಆರ್.ಆರ್ ನಗರ ಸಮೀಪದ ಪಟ್ಟಣಗೆರೆ ನಿವಾಸಿ ಗೌರಮ್ಮ ಎಂಬುವವರು ಮೊಮ್ಮಕ್ಕನ್ನು ಮನೆಯ ಸಮೀಪದಲ್ಲೇ ಇದ್ದ ಟ್ಯೂಷನ್ ಸೆಂಟರ್‌ಗೆ ಬಿಟ್ಟು ಮನೆಗೆ ಹಿಂತಿರುಗಿದ್ದರು. ಗೌರಮ್ಮಳನ್ನು ಹಿಂಬಾಲಿಸಿಕೊಂಡು ಬಂದ ಇಬ್ಬರು ಕಳ್ಳರು, ಅವರು ಮನೆಯೊಳಗೆ ಕಾಲಿಡುತ್ತಿದ್ದಂತೆ ಹಿಂದಿನಿಂದ ಹಿಡಿದುಕೊಂಡು ಬಾಯಿಗೆ ಮಂಕಿ ಕ್ಯಾಪ್ ತುರುಕಿದ್ದರು. ಬಳಿಕ ಆಕೆಯ ಕೈಕಾಲು ಕಟ್ಟಿದ್ದ ಕಳ್ಳರು ಮನೆಯನ್ನು ಜಾಲಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಬಾಗಿಲನ್ನು ಹೊರಗಿಂದ ಲಾಕ್ ಮಾಡಿಕೊಂಡು ಎಸ್ಕೇಪ್ ಆಗಿದ್ದರು.
ಇತ್ತ ಆಗಂತುಕರು, ಗೌರಮ್ಮರ ಬಾಯಿಗೆ ಬಟ್ಟೆ ತುರುಕಿ ಕೈ-ಕಾಲು ಕಟ್ಟಿದ್ದರಿಂದ ಕೂಗಲಾಗದೇ, ತೆವಳುತ್ತ ಬಾಗಿಲ ಬಳಿ ಬಂದು ಬಡಿದಿದ್ದಾರೆ. ಶಬ್ಧ ಕೇಳಿಸಿಕೊಂಡ ನೆರೆ ಮನೆ ನಿವಾಸಿ ನಂದೀಶ್ ಮಕ್ಕಳು ಡೋರ್ ಲಾಕ್ ಮಾಡಿರಬಹುದೆಂದು ಲಾಕ್ ಓಪನ್ ಮಾಡಿ ತಮ್ಮ ಪಾಡಿಗೆ ತಾವು ಹೋಗಿದ್ದರು. ಆದರೆ ಹೊರ ಹೋಗಿದ್ದ ಗೌರಮ್ಮಳ ಪತಿ ಮನೆಗೆ ಬಂದಾಗ ಮನೆಗೆ ಕಳ್ಳರು ನುಗ್ಗಿದ್ದ ವಿಚಾರ ತಿಳಿದಿದೆ.
ಬಳಿಕ ನೆರೆ ಹೊರೆಯವರ ಸಹಾಯದಿಂದ ಕಳ್ಳರು ಕಟ್ಟಿದ್ದ ಹಗ್ಗ ಬಿಡಿಸಿ, ಪೊಲೀಸ್‌ರಿಗೆ ಸುದ್ದಿ ಮುಟ್ಟಿಸಿದ್ದರು. ದರೋಡೆ ಸುದ್ದಿ ಕೇಳಿ ಸ್ಥಳಕ್ಕಾಗಮಿಸಿದ ರಾಜರಾಜೇಶ್ವರಿನಗರ ಪೊಲೀಸರು, ನಡೆದ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆಗಿಳಿದು ಕಾರ್ಯಾಚರಣೆ ನಡೆಸಿದಾಗ ಆರೋಪಿ ಕುಮಾರ್ ಅಲಿಯಾಸ್ ಲೊಡ್ಡೆ ಕುಮಾರ್ ಅರೆಸ್ಟ್ ಆಗಿದ್ದಾನೆ.
ತಲಘಟ್ಟಪುರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿರುವ ಈ ಲೊಡ್ಡೆ ಕುಮಾರ್ ತನ್ನ ಸಹಚರನೊಂದಿಗೆ ಸೇರಿ ನಾಲ್ಕು ದಿನಗಳ ಹಿಂದೆ ವೃದ್ಧೆ ಗೌರಮ್ಮನ ಟಾರ್ಗೆಟ್ ಮಾಡಿದ್ದ. ಅದರಂತೆ ಮನೆಯಲ್ಲಿ ಯಾರು ಇಲ್ಲವೆಂದು ತಿಳಿದಾಕ್ಷಣ ದರೋಡೆ ಮಾಡಿ ಎಸ್ಕೇಪ್ ಆಗಿದ್ದರು. ಈತನ ವಿರುದ್ಧ ಕೊಲೆ ಯತ್ನ, ದರೋಡೆ ಸೇರಿ ಹಲವು ಕೇಸ್‌ಗಳಿದೆ. ದರೋಡೆ ಮಾಡಿದ್ದ ಚಿನ್ನಾಭರಣ ವಶಪಡಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ