Site icon Vistara News

Prithvi Reddy: ಆಡಳಿತದಲ್ಲಿ ನಾಗರಿಕರ ಪಾತ್ರ ಹೆಚ್ಚಾಗಬೇಕು: ಪೃಥ್ವಿ ರೆಡ್ಡಿ

Prithvi Reddy says Role of citizens in governance should be increased

#image_title

ಬೆಂಗಳೂರು: ಸರ್ಕಾರಗಳ ಆಡಳಿತ ಹಾಗೂ ನಾಗರಿಕರ ನಡುವೆ ಅಂತರವಿದ್ದು, ಇವರೆಡರ ನಡುವೆ ಸೇತುವೆ ರಚನೆಯಾಗಿ ಒಂದುಗೂಡಿದಾಗ ಮಾತ್ರ ಜನಸಾಮಾನ್ಯರ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ (Prithvi Reddy) ಹೇಳಿದರು.

ಬೆಂಗಳೂರು ಅಪಾರ್ಟ್‌ಮೆಂಟ್ಸ್‌ ಫೆಡರೇಷನ್‌ ಆಯೋಜಿಸಿದ್ದ “ಆಲ್‌ ಪಾರ್ಟಿ ಟೌನ್‌ಹಾಲ್‌” ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 15 ವರ್ಷಗಳ ಹಿಂದೆ ಸ್ಮಾರ್ಟ್‌ ವೋಟ್‌ ಎಂಬ ಸಂಘಟನೆ ಕಟ್ಟಿಕೊಂಡು ಇಂತಹದ್ದೇ ಚರ್ಚೆಗಳನ್ನು ನಡೆಸುತ್ತಿದ್ದೆವು. ಬೇರೆ ಬೇರೆ ವಿಷಯಗಳ ಆಧಾರದಲ್ಲಿ ವೋಟ್‌ ಬ್ಯಾಂಕ್‌ ಸೃಷ್ಟಿಯಾಗುತ್ತದೆ. ಆದರೆ, ಜನರ ನಿಜವಾದ ಸಮಸ್ಯೆಗಳ ಬಗ್ಗೆ ಮಾತ್ರ ಚುನಾವಣೆಯಲ್ಲಿ ಚರ್ಚೆಯಾಗುತ್ತಿಲ್ಲ ಎಂಬ ಕಾರಣಕ್ಕೆ ಅಂತಹ ಪ್ರಯತ್ನ ಮಾಡಿದ್ದೆವು ಎಂದರು.

ಅಪಾರ್ಟ್‌ಮೆಂಟ್‌ ನಿವಾಸಿಗಳು ಕೇವಲ ಮತದಾರರು ಅಷ್ಟೇ ಅಲ್ಲ, ಅನೇಕ ಮತದಾರರ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ ಇರುವ ಪ್ರಭಾವಿಗಳು ಕೂಡ ಆಗಿದ್ದಾರೆ. ತಮ್ಮೊಂದಿಗೆ ಕೆಲಸ ಮಾಡುವವರು, ನೆರೆಹೊರೆಯವರು, ಅಪಾರ್ಟ್‌ಮೆಂಟ್‌ ಭದ್ರತಾ ಸಿಬ್ಬಂದಿ, ಕೆಲಸಗಾರರು, ಚಾಲಕರು ಸೇರಿ ಎಲ್ಲರ ಜತೆ ಚರ್ಚಿಸುವ ಅವಕಾಶವಿದೆ. ಅವರು ಇದನ್ನು ಸದುಪಯೋಗ ಪಡಿಸಿಕೊಂಡು ರಾಜಕೀಯವನ್ನು ಸ್ವಚ್ಛಗೊಳಿಸಲು ಮುಂದಾಗಬೇಕು ಎಂದು ಹೇಳಿದರು.

ಇದನ್ನೂ ಓದಿ | Chief Justice of India : ನ್ಯಾಯಾಂಗವು ತಂತ್ರಜ್ಞಾನದ ಮೂಲಕ ನ್ಯಾಯದಾನ ನೀಡಬೇಕು: ಸಿಜೆಐ

ಸರ್ಕಾರದ ನೀತಿಗಳ ಬಗ್ಗೆ ಚರ್ಚೆಯಾಗುವುದಕ್ಕಿಂತ ಮುಖ್ಯವಾಗಿ, ಅವುಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಹೆಚ್ಚು ಚರ್ಚೆಯಾಗಬೇಕಿದೆ. ಸರ್ಕಾರದ ಆಡಳಿತ ಹಾಗೂ ಜನರ ನಡುವೆ ಹೆಚ್ಚಿನ ಅಂತರವಿದ್ದು, ಇವೆರಡರ ನಡುವೆ ಸೇತುವೆ ನಿರ್ಮಿಸುವ ಕೆಲಸ ಆಗಬೇಕಿದೆ. ಆಗ ಮಾತ್ರ ಜನಸಾಮಾನ್ಯರ ನಿಜವಾದ ಸಮಸ್ಯೆಗಳಿಗೆ ಸರ್ಕಾರದ ಸ್ಪಂದನೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಒಂದು ರಸ್ತೆಯಲ್ಲಿ ರೇಬಿಸ್‌ ಕಾಯಿಲೆಯಿರುವ ನಾಯಿಯೊಂದು ಜನರಿಗೆ ಕಚ್ಚುತ್ತಿರುವುದು ಸರ್ಕಾರ ಕಚೇರಿಯಲ್ಲಿ ಕುಳಿತಿರುವವರಿಗೆ ತಿಳಿಯಬೇಕೆಂದರೆ, ಜನರೇ ಅಧಿಕಾರಿಗೆ ಮಾಹಿತಿ ನೀಡಬೇಕು. ದೆಹಲಿ ಸರ್ಕಾರದ ಅನೇಕ ಯೋಜನೆಗಳು ಜನರು ನೀಡಿದ ಸಲಹೆಗಳ ಆಧಾರದಲ್ಲಿ ರೂಪಿಸಲ್ಪಟ್ಟಿವೆ. ಆದ್ದರಿಂದಲೇ ಅವು ಯಶಸ್ವಿಯಾಗಿವೆ. ಹೀಗಾಗಿ ಕರ್ನಾಟಕದಲ್ಲಿ ಕೂಡ ಆಡಳಿತದಲ್ಲಿ ನಾಗರಿಕರ ಸಹಭಾಗಿತ್ವ ಹೆಚ್ಚಾಗಬೇಕು ಎಂದು ಪೃಥ್ವಿ ರೆಡ್ಡಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ | Kiran Kumar Reddy: ಆಂಧ್ರ ಮಾಜಿ ಸಿಎಂ ಕಿರಣ್‌ ಕುಮಾರ್‌ ರೆಡ್ಡಿ ಕಾಂಗ್ರೆಸ್‌ಗೆ ವಿದಾಯ, ಬಿಜೆಪಿ ಸೇರ್ಪಡೆ?

ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ, ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ, ಜೆಡಿಎಸ್‌ ವಕ್ತಾರರಾದ ತನ್ವೀರ್‌ ಅಹಮದ್‌ ಸಂವಾದದಲ್ಲಿ ಭಾಗವಹಿಸಿದ್ದರು.

Exit mobile version