ಮಂಗಳೂರು: ಬೆಳ್ತಂಗಡಿಯಲ್ಲಿ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕವಾಗಿಯೇ ರೊಮ್ಯಾನ್ಸ್ ಮಾಡುತ್ತಿದ್ದ ಆರೋಪದಲ್ಲಿ ಮುಸ್ಲಿಂ ವಿದ್ಯಾರ್ಥಿ ಮತ್ತು ಹಿಂದು ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ.
ಕೆಲವು ದಿನಗಳ ಹಿಂದೆ ಬೆಳ್ತಂಗಡಿಯ ಕಾಲೇಜಿನಲ್ಲಿ ಮಾಜಿ ಶಾಸಕ ವಸಂತ ಬಂಗೇರ ಅವರ ಜೀವನ ಕಥೆ ಆಧರಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಅದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮ ನಡೆಯುವ ವೇಳೆ ಈ ಇಬ್ಬರು ವಿದ್ಯಾರ್ಥಿಗಳು ಕಾಲೇಜು ಅವರಣದಲ್ಲಿ ಹಗ್, ಕಿಸ್ ಸೇರಿದಂತೆ ರೊಮ್ಯಾನ್ಸ್ ಮಾಡುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗಳು ನಡೆದಿದ್ದವು. ಮುಸ್ಲಿಂ ವಿದ್ಯಾರ್ಥಿಗೆ ಹಿಂದು ಕಾರ್ಯಕರ್ತರು ಬೆದರಿಕೆ ಹಾಕಿದ್ದರು. ʻಲವ್ ಜಿಹಾದ್ ಮಾಡುತ್ತೀಯಾʼ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಇದರ ನಡುವೆ, ಕಾಲೇಜು ಆಡಳಿತ ಮಂಡಳಿ ಹಿಂದು ವಿದ್ಯಾರ್ಥಿನಿಯನ್ನು ಸಸ್ಪೆಂಡ್ ಮಾಡಿತ್ತು. ಇದು ಇನ್ನಷ್ಟು ಚರ್ಚೆಗೆ ಕಾರಣವಾಯಿತು. ಮುಸ್ಲಿಂ ವಿದ್ಯಾರ್ಥಿಯನ್ನು ಯಾಕೆ ಸಸ್ಪೆಂಡ್ ಮಾಡಿಲ್ಲ ಎಂದು ಪ್ರಶ್ನಿಸಿ ಚರ್ಚೆ ನಡೆದಿತ್ತು. ಇದರ ನಡುವೆ ಕೋಮುದ್ವೇಷ ಹರಡುವ ರೀತಿಯಲ್ಲಿ ಚರ್ಚೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಅದರಲ್ಲಿ ಇಬ್ಬರೂ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಿದ್ದಾಗಿ ತಿಳಿಸಲಾಗಿದೆ.
ಇದನ್ನೂ ಓದಿ | Moral policing | ಮುಖ್ಯಮಂತ್ರಿಯಿಂದಲೇ ನೈತಿಕ ಪೊಲೀಸ್‌ಗಿರಿಗೆ ಕುಮ್ಮಕ್ಕು: ಸಿದ್ದರಾಮಯ್ಯ ಆರೋಪ