Site icon Vistara News

Karnataka Election: ಅಂಕೋಲಾ-ಕಾರವಾರ ಕ್ಷೇತ್ರಕ್ಕೆ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ

ರೂಪಾಲಿ ನಾಯ್ಕ ಅವರಿಂದ ಪ್ರಚಾರ

ಕಾರವಾರ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election) ಇನ್ನೆರಡೇ ದಿನ ಬಾಕಿ ಇದೆ. ನಗರದ ವಿವಿಧ ವಾರ್ಡ್‌ಗಳು, ಕುಂಠಿಮಹಾಮಾಯ ಹಾಗೂ ಕಳಸವಾಡದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ರೂಪಾಲಿ ಎಸ್.ನಾಯ್ಕ, ಮತ ಯಾಚಿಸಿದರು. ಈ ವೇಳೆ ಅವರು ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.

ಬಳಿಕ ಅವರು ಮಾತನಾಡಿ, “ನಾನು ಮತ್ತೊಮ್ಮೆ ಶಾಸಕಿಯಾದರೆ ಅನೇಕರಿಗೆ ಸಮಸ್ಯೆಯಾಗುತ್ತದೆ‌ ಎಂದು ಅಪಪ್ರಚಾರ ಮಾಡಿದರು. ಮಹಿಳೆಯಾಗಿ ಮನೆಯ ನಿರ್ವಹಣೆಗಿಂತ ಹೆಚ್ಚು ಕಾಳಜಿಯಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಬರುವುದಕ್ಕೂ ತುಂಬಾ ಅಡ್ಡಿಪಡಿಸಿದ್ದರು. ಆದರೆ, ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. 40 ವರ್ಷದ ನಂತರ ಪ್ರಧಾನಿ ನಮ್ಮ ಜಿಲ್ಲೆಗೆ ಪ್ರಚಾರಕ್ಕೆ ಬಂದಿದ್ದಾರೆ” ಎಂದರು.

ಇದನ್ನೂ ಓದಿ: Karnataka election 2023: ಬಳ್ಳಾರಿ ನಗರದ ವಿವಿಧೆಡೆ ಕಾಂಗ್ರೆಸ್‌ ಅಭ್ಯರ್ಥಿ ನಾರಾ ಭರತ್‌ರೆಡ್ಡಿ, ಪಕ್ಷದ ಮುಖಂಡರಿಂದ ಪ್ರಚಾರ

“ಜಿಲ್ಲೆಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ‌ ಬೇಕೆನ್ನುವುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಅದಕ್ಕಾಗಿ ಹಿಂದಿನಿಂದಲೂ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಕುಮಟಾದಲ್ಲಿ ಆಸ್ಪತ್ರೆಯಾದರೂ ಕೂಡ ಕಾರವಾರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೂಪರ್ ‌ಸ್ಪೆಷಾಲಿಟಿ ಸೌಲಭ್ಯ ಸಿಗುವಂತೆ ಮೇಲ್ದರ್ಜೆಗೆ ಏರಿಸಲಾಗುತ್ತಿದೆ” ಎಂದರು.

“ನಮ್ಮ ಸಂಸ್ಕೃತಿ, ಧರ್ಮವನ್ನು ನಾಶಪಡಿಸಲು ಹೊರಟಿರುವ ಕಾಂಗ್ರೆಸ್‌ ಪಕ್ಷವನ್ನು ಕೊನೆಯಾಗಿಸೋಣ. ನಮ್ಮ ಹಿಂದು ಧರ್ಮವನ್ನು ಉಳಿಸಲು ಶ್ರಮಿಸಬೇಕಿದೆ. ಎಲ್ಲರೂ ಒಗ್ಗಟ್ಟಾಗಿ ಭಾರತೀಯ ಜನತಾ ಪಕ್ಷ ಗೆಲ್ಲಿಸಬೇಕು. ಮತದಾನ ಮಾಡುವಾಗ‌ ಬಜರಂಗಬಲಿಯನ್ನು ನೆನೆದು ಮತ ಹಾಕಿ” ಎಂದರು.

ಸಾರ್ವಜನಿಕರೊಂದಿಗೆ ರೂಪಾಲಿ ನಾಯ್ಕ

“ನನಗೆ ಟಿಕೆಟ್‌ ತಪ್ಪುವುದೆಂದು ವಿರೋಧ ಪಕ್ಷದಲ್ಲಿ ಇದ್ದವರು ಕೊನೆಯವರೆಗೆ ಬಿಜೆಪಿ ಟಿಕೆಟ್‌‌ಗಾಗಿ ಪ್ರಯತ್ನಿಸಿ ವಿಫಲವಾದರು. ಪಕ್ಷ ಸಂಘಟನೆಗಾಗಿ ದುಡಿದ ಕಾರ್ಯಕರ್ತರನ್ನು ಪಕ್ಷ ಎಂದಿಗೂ ಬಿಟ್ಟು ಕೊಡುವುದಿಲ್ಲ ಎಂಬುದಕ್ಕೆ ನನಗೆ ಸ್ಪರ್ಧಿಸಲು ಅವಕಾಶ ನೀಡಿರುವುದೇ ಸಾಕ್ಷಿಯಾಗಿದೆ” ಎಂದರು.

ಇದನ್ನೂ ಓದಿ: Karnataka election 2023: ಬಳ್ಳಾರಿ ನಗರ ಕಾಂಗ್ರೆಸ್‌ ಅಭ್ಯರ್ಥಿ ಪರ ನಾರಾ ಪ್ರತಾಪ್‌ರೆಡ್ಡಿ ಪ್ರಚಾರ

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಶಾಸಕ ಗಣಪತಿ ಉಳ್ವೇಕರ, ಗೋವಾ ಶಾಸಕ ಪ್ರೇಮೆಂದ್ರ ಶೆಟ್‌, ಕಾರವಾರ ನಗರ ಮಂಡಲದ ಅಧ್ಯಕ್ಷ ನಾಗೇಶ್‌ ಕುರ್ಡೇಕರ, ಕಾರವಾರ ನಗರಸಭೆಯ ಉಪಾಧ್ಯಕ್ಷರಾದ ಪಿ.ಪಿ.ನಾಯ್ಕ, ಮಾಲಾ ಹುಲಸ್ವಾರ, ನಯನಾ ನೀಲಾವರ, ಉಲ್ಲಾಸ ಕಿಣಿ, ಪ್ರೇಮಾನಂದ ಗುನಗಾ, ಅನುಶ್ರೀ ಕುಬಡೆ, ಹನುಮಂತ ತಳವಾರ, ಮುರಳಿ ಗೋವೆಕರ, ಉಲ್ಲಾಸ‌ ರೇವಣಕರ, ಪ್ರದೀಪ್, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

Exit mobile version