Site icon Vistara News

Rotten Eggs : ಅಂಗನವಾಡಿಯಲ್ಲಿ ಮಕ್ಕಳು, ಮಹಿಳೆಯರಿಗೆ ಕೊಳೆತ ಮೊಟ್ಟೆ ಪೂರೈಕೆ; ಸರ್ಕಾರಕ್ಕೆ ಕಳಪೆ ಕಳಂಕ

Rotten eggs

ಬೆಂಗಳೂರು: ಒಂದು ಕಡೆ ರಾಜ್ಯ ಸರ್ಕಾರ ರಾಜ್ಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅಂದರೆ 1ರಿಂದ 10ನೇ ತರಗತಿಯ ಎಲ್ಲ ಮಕ್ಕಳಿಗೆ ವಾರಕ್ಕೆ ಎರಡು ಮೊಟ್ಟೆ ವಿತರಿಸುವ ಪ್ಲ್ಯಾನ್‌ ಪ್ರಕಟಿಸಿದೆ. ಅದರ ನಡುವೆಯೇ ರಾಜ್ಯದ ಕೆಲವೆಡೆ ಅಂಗನವಾಡಿಗಳಿಗೆ (Anganwadis) ಪೂರೈಸಲಾಗುತ್ತಿರುವ ಮೊಟ್ಟೆ ಕಳಪೆಯಾಗಿದೆ (Rotten Eggs) ಎಂಬ ಆರೋಪ ಕೇಳಿಬಂದಿದ್ದು, ಜನಾಕ್ರೋಶ ಜೋರಾಗಿದೆ. ಇದು ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರ ಗಮನಕ್ಕೂ ಬಂದಿದೆ.

ಯಾದಗಿರಿ, ಕೊಡಗು, ಹಾಸನ, ಹಾವೇರಿ ಜಿಲ್ಲೆಗಳ ಕೆಲವು ಅಂಗನವಾಡಿಗಳಿಗೆ ಪೂರೈಸಲಾಗಿರುವ ಮೊಟ್ಟೆ ಕಳಪೆಯಾಗಿದೆ ಎಂದು ಪೋಷಕರು ಆರೋಪಿಸಿದ್ದು, ಕೊಳೆತ ಮೊಟ್ಟೆಗಳನ್ನು ಪ್ರದರ್ಶಿಸಿ ಪ್ರತಿಭಟನೆಯನ್ನೂ (Protest against rotten eggs supply) ನಡೆಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯದ ಅಂಗನವಾಡಿಗಳಲ್ಲಿ ಮಕ್ಕಳು ಮತ್ತು ಗರ್ಭಿಣಿ-ಬಾಣಂತಿಯರಿಗೆ ಮೊಟ್ಟೆಯನ್ನು ನೀಡಲಾಗುತ್ತಿದ್ದು, ಅದಕ್ಕೆ ಬೇಕಾದ ಮೊಟ್ಟೆಯನ್ನು ಸ್ಥಳೀಯವಾಗಿ ಖರೀದಿ ಮಾಡಲಾಗುತ್ತದೆ. ಈ ನಡುವೆ ಕೆಲವು ಅಂಗನವಾಡಿಗಳಿಗೆ ಪೂರೈಸಿರುವ ಮೊಟ್ಟೆಗಳು ಕಳಪೆಯಾಗಿವೆ, ಕಪ್ಪಾಗಿವೆ ಎಂಬ ಆರೋಪವಿದೆ.

ಹಾಸನ ಜಿಲ್ಲೆಯಲ್ಲಿ ಎರಡು ಅಂಗನವಾಡಿಗಳಲ್ಲಿ ಕಳಪೆ ಮೊಟ್ಟೆ

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ ಸ್ತ್ರೀಯರಿಗೆ ಹಾಗೂ ಮಕ್ಕಳಿಗೆ ವಿತರಿಸಿದ ಮೊಟ್ಟೆ ಕಳಪೆಯಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಕಳೆದ ಗುರುವಾರ ಹೊಳೆನರಸೀಪುರ ಪಟ್ಟಣದ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ ಸ್ತ್ರೀಯರಿಗೆ ಕೆಟ್ಟ ಮೊಟ್ಟೆಗಳನ್ನು ವಿತರಿಸಲಾಗಿತ್ತು.

ಮಕ್ಕಳಿಗೆ ಮತ್ತು ಮಹಿಳೆಯರಿಗೆ ವಿತರಿಸಲಾದ ಮೊಟ್ಟೆಗಳನ್ನು ಬೇಯಿಸಿ ಸಿಪ್ಪೆ ತೆಗೆದಾಗ ಕೊಳೆತಿದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಮೊಟ್ಟೆ ಪೂರೈಕೆ ಮಾಡುತ್ತಿರುವವರ ವಿರುದ್ಧ ಗರ್ಭಿಣಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನದ ಮನೆಗೆ ಪರಿಶೀಲನೆಗೆ ಬಂದ ಅಧಿಕಾರಿಗಳು

ಹಳೇಯ ಹಾಗೂ ಕಳಪೆ ಗುಣಮಟ್ಟದ ಮೊಟ್ಟೆಗಳನ್ನು ವಿತರಣೆ ಮಾಡಿದ್ದಾರೆ. ಒಂದು ವೇಳೆ ಪುಟಾಣಿ ಮಕ್ಕಳು ಮೊಟ್ಟೆ ತಿಂದಿದ್ದರೆ ಅನಾಹುತ ಸಂಭವಿಸುತ್ತಿತ್ತು. ಹೀಗಾಗಿ ಕೂಡಲೇ ಮೊಟ್ಟೆ ಪೂರೈಕೆ ಮಾಡುತ್ತಿರುವ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು. ಆತನನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸುವಂತೆ ಗರ್ಭಿಣಿ ಸ್ತ್ರೀಯರು ಒತ್ತಾಯಿಸಿದ್ದಾರೆ.

ಕೊಡಗಿನಲ್ಲಿ ಮಹಿಳೆಯರ ಆಕ್ರೋಶ

ಕುಶಾಲನಗರ ತಾಲೂಕಿನ ಕೂಡಿಗೆ ವ್ಯಾಪ್ತಿಯಲ್ಲಿ ಅಂಗನವಾಡಿ ಮೂಲಕ ಗರ್ಭಿಣಿ- ಬಾಣಂತಿಯರಿಗೆ ಕೊಳೆತ ಮೊಟ್ಟೆ ವಿತರಣೆ ಮಾಡಿದ್ದು ಆ ಭಾಗದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

ಕೊಡಗು ಜಿಲ್ಲೆಯ ಕುಶಾಲನಗರದ ಕೂಡಿಗೆ ಸಮೀಪದ ಬಸವನತ್ತೂರು ಗ್ರಾಮದಲ್ಲಿ ಕೂಡಿಗೆಯ ಬಾಣಂತಿ ಗೀತಾ ಎಂಬವರಿಗೆ ನೀಡಲಾದ ಎಲ್ಲ 21 ಮೊಟ್ಟೆಗಳು ಕೊಳೆತುಹೋಗಿದ್ದವು. ಇದರಿಂದ ಕೆರಳಿದ ಮಹಿಳೆಯರು ಮೊಟ್ಟೆ ಸರಬರಾಜು ಮಾಡುವವರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದರು.

ಇದನ್ನು ಗಮನಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದು, ಇದೇ ರೀತಿ ಮುಂದುವರಿದರೆ ಗುತ್ತಿಗೆಯನ್ನು ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿತ್ತು. ಗುತ್ತಿಗೆದಾರ ಬಳಿಕ ಕೊಳೆತ ಮೊಟ್ಟೆಗೆ ಬದಲಿಗೆ ಬೇರೆ ಮೊಟ್ಟೆ ಕೊಡುವ ಭರವಸೆ. ಭರವಸೆ ನೀಡಿದ್ದ.

ಹಾವೇರಿ ಜಿಲ್ಲೆಯ ಕೆಲವು ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ಪೂರೈಸಲಾದ ಮೊಟ್ಟೆ ಕಳಪೆಯಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಮೊಟ್ಟೆ ಬೇಯಿಸಿ ಒಡೆದಾಗ ಕಪ್ಪಾಗಿರೋದು ಬೆಳಕಿಗೆ ಬಂದಿತ್ತು. ಕೆಲವು ಮೊಟ್ಟೆಗಳು ವಾಸನೆ ಬರುತ್ತಿದ್ದವು.

ಯಾದಗಿರಿಯ ಗಾಂಧಿ ನಗರದ ಅಂಗನವಾಡಿ ಕೇಂದ್ರದಲ್ಲಿ ಕಳಪೆ ಮೊಟ್ಟೆ ಪೂರೈಕೆ ಬೆಳಕಿಗೆ ಬಂದಿದೆ.

ಕಳಪೆ ಮೊಟ್ಟೆ ಸರಬರಾಜು ಮಾಡಿದವರು ಕಪ್ಪು ಪಟ್ಟಿಗೆ: ಲಕ್ಷ್ಮಿ ಹೆಬ್ಬಾಳ್ಕರ್‌

ರಾಜ್ಯದ ಕೆಲವು ಅಂಗನವಾಡಿಗಳಲ್ಲಿ ಕಳಪೆ ಮೊಟ್ಟೆ ಪೂರೈಕೆ ನಡೆದಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಯಾರು ಕಳಪೆ ಮೊಟ್ಟೆ ಪೂರೈಕೆ ಮಾಡಿದ್ದಾರೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಪ್ಲೈ ಲಿಸ್ಟ್ ನಿಂದಲೂ ಕೈ ಬಿಡುವಂತೆ ತಿಳಿಸಲಾಗಿದೆ ಎಂದರು.

ʻʻಮೊಟ್ಟೆ ಖರೀದಿಯನ್ನು ವಿಕೇಂದ್ರೀಕರಣ ಮಾಡಿದ ಕಾರಣದಿಂದ ಗ್ರಾಮ ಪಂಚಾಯತಿ ಮಟ್ಟದಲ್ಲೂ ಖರೀದಿ ಆಗುತ್ತಿದೆ. ಇದರ ಮೇಲೆ ಯಾವುದೇ ನಿಯಂತ್ರಣ ಇಲ್ಲ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಎಂಬುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖ್ಯ ಉದ್ದೇಶ. ಆದರೆ ನಮ್ಮ ಇಲಾಖೆಯ ಉದ್ದೇಶವೇ ಎಡವುತ್ತಿರುದು ಗಮನಕ್ಕೆ ಬಂದಿದೆ. ಕಳಪೆ ಮೊಟ್ಟೆ ವಿಚಾರವನ್ನು ಕ್ಯಾಬಿನೆಟ್ ನಲ್ಲಿ ಪ್ರಸ್ತಾಪ ಮಾಡುತ್ತೇನೆʼʼ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ʻʻವಿಕೇಂದ್ರೀಕರಣ ಮಾದರಿಯ ಖರೀದಿಯಿಂದ ಪ್ರಾಮಾಣಿಕ ಪೂರೈಕೆ ಆಗ್ತಿಲ್ಲ. ಈ ನಿಟ್ಟಿನಲ್ಲಿ ಖರೀದಿ ವ್ಯವಸ್ಥೆ ಕೇಂದ್ರೀಕರಣ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಜೊತೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಿ ನಿಗಾ ಇಡುತ್ತೇವೆʼʼ ಎಂದು ಹೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ʻʻಸರ್ಕಾರದ ಸಂಸ್ಥೆಗಳಿಂದ ಖರೀದಿಗೆ ಚಿಂತನೆ ನಡೆದಿದೆ. ಎಲ್ಲಾ ಪ್ರಸ್ತಾವಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದುʼʼ ಎಂದು ನುಡಿದರು.

ಇದನ್ನೂ ಓದಿ: MLA Muniratna : ಬಿಜೆಪಿ ಶಾಸಕ ಮುನಿರತ್ನಗೆ ಸಂಕಷ್ಟ; ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ FIR

Exit mobile version