Site icon Vistara News

Rowdy sheeter : ತಮಿಳುನಾಡು ರೌಡಿಯನ್ನು ಮುಗಿಸಲು ಬಂದವರು ಬೆಂಗಳೂರು ಪೊಲೀಸರಿಗೆ ಲಾಕ್‌!

Vinodh kumar, prasanna, kartik

ಬೆಂಗಳೂರು: ಬೆಂಗಳೂರಿನ ಬಾಣಸವಾಡಿಯಲ್ಲಿ ಇತ್ತೀಚೆಗೆ ತಮಿಳುನಾಡಿನ ನಟೋರಿಯಸ್‌ ರೌಡಿ (Rowdy sheeter) ಮೇಲೆ ದಾಳಿ ನಡೆದಿತ್ತು. ಇದೀಗ ಪ್ರಕರಣ ಭೇದಿಸಿರುವ ಬಾಣಸವಾಡಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ನಟೋರಿಯಸ್‌ ರೌಡಿಯಾಗಿರುವ ಗುರುಸ್ವಾಮಿ ಮೇಲೆ ವಿರೋಧಿ ಬಣ ಹತ್ಯೆಗೆ ಸ್ಕೆಚ್‌ ಹಾಕಿ ದಾಳಿ ಮಾಡಿತ್ತು. ಆದರೆ ಗುರುಸ್ವಾಮಿ ಪಾರಾಗಿದ್ದ.

ತಮಿಳುನಾಡಿನ ಮಧುರೈನಲ್ಲಿ ಗುರುಸ್ವಾಮಿ ಹಾಗೂ ರಾಜಪಾಂಡಿಯನ್ ಇಬ್ಬರು ನಟೋರಿಯಸ್ ರೌಡಿಗಳಾಗಿದ್ದರು. ಇವರಿಬ್ಬರು ಎರಡು ತಂಡಗಳನ್ನು ಕಟ್ಟಿಕೊಂಡು ಮಧುರೈನಲ್ಲಿ ಆಗಾಗ ಕೊಲೆ, ಸೂಲಿಗೆ ಮಾಡುತ್ತಿದ್ದರು. ಹೀಗಿದ್ದಾಗ ರಾಜಪಾಂಡಿಯನ್‌ ಮೃತಪಟ್ಟಿದ್ದ. ರಾಜಪಾಂಡಿಯನ್ ನಿಧನದ ನಂತರ ಕಾಳಿಮುತ್ತು ಎಂಬಾತ ಗುರುಸ್ವಾಮಿ ಹತ್ಯೆ ಮಾಡಲು ಪ್ಲ್ಯಾನ್‌ ಮಾಡುತ್ತಿದ್ದ.

ಇದನ್ನೂ ಓದಿ: Road Accident : ಹಾಸನದಲ್ಲಿ ಭೀಕರ ಅಪಘಾತ; ಬೆಂಗಳೂರಿನ ವ್ಯಕ್ತಿ ಸಾವು, 6 ಮಂದಿ ಗಂಭೀರ

ಮಧುರೈ ಜೈಲಿನಲ್ಲಿರುವ ರಾಜಪಾಂಡಿಯನ್ ಅಣ್ಣನ ಮಗ ಕಾಳಿ‌ಮುತ್ತು ಹೇಗಾದರೂ ಮಾಡಿ ಗುರುಸ್ವಾಮಿಯನ್ನು ಮುಗಿಸಿಬಿಡುವ ಪ್ಲ್ಯಾನ್‌ ಮಾಡುತ್ತಿದ್ದ. ಜೈಲಿನಲ್ಲಿ‌ ಇದ್ದುಕೊಂಡೇ ಗುರುಸ್ವಾಮಿ ಕೊಲೆಗೆ ಸ್ಕೆಚ್‌ ಹಾಕಿದ್ದ. ಇದಕ್ಕಾಗಿ ಐದು ಜನರ ತಂಡ ರಚನೆ ಮಾಡಿ, ರೌಡಿ ಗುರುಸ್ವಾಮಿ ಕೊಲೆಗೆ ಸುಪಾರಿ ನೀಡಿದ್ದ.

ಇತ್ತ ಎದುರಾಳಿಗಳು ತನ್ನ ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆ ಎಂದು ತಿಳಿದ ಗುರುಸ್ವಾಮಿ ಜೀವ ಭಯದಿಂದ ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ. ಈ ನಡುವೆ ಬೆಂಗಳೂರಿನ ಸೇನಾವಿಹಾರ ಅಪಾರ್ಟ್ಮೆಂಟ್‌ನಲ್ಲಿ ಪ್ಲಾಟ್ ಖರೀದಿಗಾಗಿ ಬಂದಿದ್ದ. ಗುರುಸ್ವಾಮಿ ಬರುವ ಖಚಿತ ಮಾಹಿತಿ ಆಧಾರದ ಮೇಲೆ ಕಾಳಿಮುತ್ತು ತಂಡ ಅಟ್ಯಾಕ್‌ ಮಾಡಿತ್ತು.

ನವೀನ್ ಹಾಗೂ ತುಪಾಕಿ ವಿಜಯ್ ಟೀಮ್‌ ಸೇರಿ ಅಂದು ಗುರುಸ್ವಾಮಿ ಹತ್ಯೆಗೆ ಮುಂದಾದರೂ, ಆದರೆ ಗುರುಸ್ವಾಮಿ ಅವರಿಂದ ತಪ್ಪಿಸಿಕೊಂಡು ಬದುಕುಳಿದಿದ್ದ. ಇನ್ನು ಗುರುಸ್ವಾಮಿ ಮಧುರೈನಲ್ಲಿ ನಟೋರಿಯಸ್ ಕ್ರಿಮಿನಲ್‌ ಆಗಿದ್ದ. ಹೀಗಾಗಿ ಗುರುಸ್ವಾಮಿ ಹಾಗೂ ರಾಜಪಾಂಡಿಯನ್ ತಂಡದ ಮೇಲೆ ನಿಗಾ ಇಡಲು ಅಲ್ಲಿನ ಹೈಕೋರ್ಟ್ ವಿಶೇಷ ತಂಡ ರಚನೆ ಮಾಡಿತ್ತು.

ಸದ್ಯ ಈ ಪ್ರಕರಣದಲ್ಲಿ ಒಟ್ಟು ಐವರು ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದ್ದು, ಮತ್ತಿಬ್ಬರಿಗಾಗಿ ಹುಡುಕಾಟ ನಡೆಸಲಾಗಿದೆ. ವಿನೋದ ಕುಮಾರ್, ಪ್ರಸನ್ನ, ಕಾರ್ತಿಕ್ ಬಂಧಿತ ಆರೋಪಿಗಳಾಗಿದ್ದು, ನವೀನ್ ಹಾಗೂ ತುಪಾಕಿ ವಿಜಯ್‌ಗಾಗಿ ಹುಡುಕಾಟ ಮುಂದುವರಿದಿದೆ ಎಂದು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಮಾಹಿತಿ ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version