ಕಲಬುರಗಿ: ಕಾಂಗ್ರೆಸ್ ಭದ್ರಕೋಟೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಸ್ಪರ್ಧೆ ಮಾಡುತ್ತಾ ಬಂದಿರುವ ಚಿತ್ತಾಪುರ ಕ್ಷೇತ್ರದಿಂದ ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಗೆ (Karnataka Election 2023) ಬಿಜೆಪಿ ಪ್ರಕಟಿಸಿದ ಅಭ್ಯರ್ಥಿ, ರೌಡಿಶೀಟರ್ ಪಟ್ಟಿಯಲ್ಲಿರುವ ಮಣಿಕಂಠ ರಾಠೋಡ ವಿರುದ್ಧ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಬಿಜೆಪಿ ಗೆದ್ದರೆ ನೆಮ್ಮದಿ ರಾಜ್ಯ ಸಿಗಲಿದೆಯೋ ಅಥವಾ ರೌಡಿ ರಾಜ್ಯವೋ? ಆಯ್ಕೆ ನಿಮ್ಮದು ಎಂಬ ಪೋಸ್ಟರ್ ಸಿದ್ಧಪಡಿಸಿ ಹರಿಬಿಡಲಾಗಿದೆ.
ಮಣಿಕಂಠ ರೌಡಿಶೀಟರ್ ಪಟ್ಟಿಯಲ್ಲಿ ಇದ್ದ ಕಾರಣ ಅವರನ್ನು ಕಲಬುರಗಿ ಪೊಲೀಸ್ ಕಮಿಷನರ್ ಆಗಿದ್ದ ಡಾ.ವೈ.ಎಸ್. ರವಿಕುಮಾರ್ ಗಡಿಪಾರು ಮಾಡಿದ್ದರು. ಇದನ್ನು ಹೈಕೋರ್ಟ್ ಪ್ರಶ್ನೆ ಮಾಡಿ ತಡೆಯಾಜ್ಞೆಯನ್ನು ತರಲಾಗಿತ್ತು. ಜತೆಗೆ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ದಂಧೆಯಲ್ಲಿ ಪಾಲ್ಗೊಂಡಿರುವುದು ಸೇರಿದಂತೆ ಹಲವು ಪ್ರಕರಣಗಳು ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.
ಇದನ್ನೂ ಓದಿ: Karnataka Elections 2023 : ಕಾಂಗ್ರೆಸ್‌ನ ಮೂರನೇ ಪಟ್ಟಿ ಬಿಡುಗಡೆಗೆ ಕ್ಷಣಗಣನೆ; ಸಿದ್ದರಾಮಯ್ಯಗೆ ಕೋಲಾರ ಟಿಕೆಟ್ ಸಿಗಲ್ಲ?
ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ
ಚಿತ್ತಾಪುರ ಕ್ಷೇತ್ರದಿಂದ ರೌಡಿ ಶೀಟರ್‌ಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದು, ಬಿಜೆಪಿ ಗೆದ್ದರೆ ರೌಡಿ ರಾಜ್ಯ ದೊರೆಯುತ್ತದೆ. ಭ್ರಷ್ಟಾಚಾರ 40%, ರೌಡಿಶೀಟರ್ 60%, ಜನವಿರೋಧಿ 100% ಎಂದು ಬರೆಯಲಾಗಿದೆ.
ಬಿಜೆಪಿಯವರು ರೌಡಿ ಮೋರ್ಚಾ ಓಪನ್ ಮಾಡಿದ್ದಾರೆ- ಪ್ರಿಯಾಂಕ್ ಖರ್ಗೆ
ಚಿತ್ತಾಪುರದಲ್ಲಿ ರೌಡಿಶೀಟರ್‌ಗೆ ಟಿಕೆಟ್ ನೀಡಿಕೆ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದ ಕಾಂಗ್ರೆಸ್ ಮುಖಂಡ, ಚಿತ್ತಾಪುರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಹತಾಶರಾಗಿದ್ದಾರೆ. ಅವರು ರೌಡಿ ಮೋರ್ಚಾವನ್ನು ಪ್ರಾರಂಭ ಮಾಡಿದ್ದಾರೆ. ಇನ್ನು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಬೆಂಗಳೂರು ಮಾಜಿ ಪೊಲೀಸ್ ಆಯಕ್ತ ಭಾಸ್ಕರ್ ರಾವ್ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ, ಅವರೀಗ ರೌಡಿಶೀಟರ್ ಸೈಲೆಂಟ್ ಸುನಿಲ್ ಬೆಂಬಲ ಕೇಳುವುದಕ್ಕೆ ಹೊರಟಿದ್ದಾರೆ. ಅವರು ಪೊಲೀಸ್ ಅಧಿಕಾರಿಯಾಗಿದ್ದಾಗ ರೌಡಿಗಳು ನಡುಗುತ್ತಿದ್ದರು. ಈಗ ಬಾಸ್ಕರರಾವ್ ಅವರೇ ರೌಡಿಗಳ ಬೆಂಬಲ ಕೇಳುತ್ತಿದ್ದಾರೆ. ಈಗ ಚಿತ್ತಾಪುರದಲ್ಲಿ ರೌಡಿಗಳಿಗೆ ಅವಕಾಶ ಕೊಡುತ್ತಿದ್ದಾರೆ. ಗೆಲ್ಲಬೇಕು ಎಂಬ ಹತಾಶೆ ಭಾವದಿಂದ ಹೀಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದರು.
ಬಿಜೆಪಿ ಟಿಕೆಟ್‌ಗೆ ಗಡಿಪಾರು ಮಾನದಂಡ- ಕಾಂಗ್ರೆಸ್
ಇನ್ನು ಈ ಬಗ್ಗೆ ಟ್ವೀಟ್ ಮಾಡಿದ್ದ ಕೆಪಿಸಿಸಿ, “ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರದಲ್ಲೇ ಗಡಿಪಾರು ಆಗಿದ್ದ, ಅನ್ನಭಾಗ್ಯದ ಅಕ್ಕಿ ಕಳ್ಳಸಾಗಣೆಯ ಆರೋಪಿ ರೌಡಿ ಶೀಟರ್‌ಗೆ ಟಿಕೆಟ್ ಕೊಡುವ ಮೂಲಕ ಬಿಜೆಪಿ ರೌಡಿ ಮೋರ್ಚಾಕ್ಕೂ (#BJPRowdyMorcha) ಮನ್ನಣೆ ನೀಡಿದೆ! ಬಿಜೆಪಿಯ ಟಿಕೆಟ್‌ಗೆ “ಗಡಿಪಾರು” ಆಗಿರುವುದೇ ಬಹುಮುಖ್ಯ ಮಾನದಂಡ ಎಂಬುದನ್ನು ದಿಲ್ಲಿಯಿಂದ ಇಲ್ಲಿಯವರೆಗೆ ನಿರೂಪಿಸಿದೆ” ಎಂದು ವ್ಯಂಗ್ಯವಾಡಿತ್ತು.