ಬೆಂಗಳೂರು: ಸೆಂಟ್ರಲ್ ಜೈಲಿನಿಂದ ಹೊರಬರುತ್ತಲೇ ರೌಡಿಶೀಟರ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರು- ಹೊಸೂರು ಮುಖ್ಯರಸ್ತೆಯ ಹೊಸ ರೋಡ್ ಜಂಕ್ಷನ್ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿ ಕಾರಿನಲ್ಲಿ ಹೋಗುತ್ತಿದ್ದಾಗ, ದುಷ್ಕರ್ಮಿಗಳು ದಾಳಿ ಮಾಡಿ ರೌಡಿಶೀಟರ್‌ನನ್ನು (Murder Case) ಹತ್ಯೆ ಮಾಡಿದ್ದಾರೆ.
ಸಿದ್ದಾಪುರ ಮಹೇಶ್ ಕೊಲೆಯಾದ ರೌಡಿಶೀಟರ್. ಪರಪ್ಪನ ಅಗ್ರಹಾರ ಜೈಲಿನ ಕೂಗಳತೆ ದೂರದಲ್ಲಿರುವ ಹೊಸ ರೋಡ್ ಜಂಕ್ಷನ್ ಬಳಿ ಕೊಲೆ ನಡೆದಿದೆ. ಕಾರಿನಲ್ಲಿ ಹೋಗುತ್ತಿದ್ದ ರೌಡಿಶೀಟರ್ ಮಹೇಶ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಕೊಲೆಯಾದ ಮಹೇಶ್, ಕುಖ್ಯಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ವಿರೋಧಿ ಗ್ಯಾಂಗ್ ಲೀಡರ್ ಆಗಿದ್ದ. ಕೆಲ ದಿನಗಳ ಹಿಂದೆ ಆರ್‌ಟಿ ನಗರದ ಬಳಿ ಕಪಿಲ್ ಹತ್ಯೆ ಮಾಡಲಾಗಿತ್ತು. ಇದರ ಸೇಡು ತೀರಿಸಿಕೊಳ್ಳಲು ವಿಲ್ಸನ್ ಗಾರ್ಡನ್ ನಾಗ ಗ್ಯಾಂಗ್‌ನಿಂದ ಸಿದ್ದಾಪುರ ಮಹೇಶ್ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಜೈಲಿನಿಂದ ಮಹೇಶ್ ಆಗಷ್ಟೇ ಹೊರ ಬಂದಿದ್ದ ಮಾಹಿತಿ ಪಡೆದುಕೊಂಡಿದ್ದ ದುಷ್ಕರ್ಮಿಗಳ ಗ್ಯಾಂಗ್, ಕಾರಿನಲ್ಲಿ ಹೋಗುತ್ತಿದ್ದವನನ್ನು ಬೆನ್ನತ್ತಿ ಹೋಗಿತ್ತು. ಸಿಗ್ನಲ್ ಬಳಿ ದಾಳಿ ಮಾಡಲು ಯತ್ನಿಸಿದಾಗ ಮಹೇಶ್ ಇಳಿದು ಓಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಬೆನ್ನಟ್ಟಿ ಬಂದಿದ್ದ ತಂಡ ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿದೆ.
ಕೊಲೆ ಪ್ರಕರಣವೊಂದರಲ್ಲಿ ಮಹೇಶ್ ಜೈಲು ಸೇರಿದ್ದ. ಚಾಲಕ, ತನ್ನ ವಕೀಲರ ಸಹಾಯಕನ ಜತೆ ಪ್ರಯಾಣ ಮಾಡುತ್ತಿದ್ದಾಗ ದಾಳಿ ಮಾಡಲಾಗಿದೆ. ಕಾರಿನ ಹಿಂದೆಯೇ ಪತ್ನಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಆಕೆ ಮುಂದೆಯೇ ಮಹೇಶ್‌ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮಹೇಶ್‌ಗೆ ಮದುವೆಯಾಗಿ ಕೇವಲ ಎರಡು ತಿಂಗಳಷ್ಟೇ ಅಗಿತ್ತು ಎನ್ನಲಾಗಿದೆ.
ಶಾಂತಿನಗರದ ಲಿಂಗನ ಕೊಲೆಗೆ ಫೈನಾನ್ಸ್ ಮಾಡಿದ್ದ ಎಂಬ ಕಾರಣಕ್ಕೆ ಮದನ್ ಅಲಿಯಾಸ್ ಪಿಟೀಲ್‌ನನ್ನು ರೌಡಿಶೀಟರ್ ಸಿದ್ದಾಪುರ ಮಹೇಶ್ ಕೊಲೆ ಮಾಡಿದ್ದ. ಈ ಹಿಂದೆ ಸಿದ್ದಾಪುರ ಡಾನ್ ಪಟ್ಟಕ್ಕಾಗಿ ಲಿಂಗ ಹಾಗೂ ವಿಲ್ಸನ್ ಗಾರ್ಡನ್ ನಾಗನ ಗ್ಯಾಂಗ್ ಕಲಹ ನಡೆದಿತ್ತು. ಆಗ ನಾಗನನ್ನು ಮುಗಿಸಲು ಲಿಂಗ ಪ್ಲಾನ್ ಮಾಡಿದ್ದ. ಆದರೆ, ಹಾಸನದ ಫಾರ್ಮ್ ಹೌಸ್‌ನಲ್ಲಿ ಲಿಂಗನನ್ನೇ ಬರ್ಬರವಾಗಿ ನಾಗ ಹತ್ಯೆ ಮಾಡಿಸಿದ್ದ.
ನಂತರ ಲಿಂಗನ ಬಲಗೈ ಬಂಟ ಮಹೇಶ್, ನಾಗನಿಗೆ ಹಣಕಾಸು ಸಹಾಯ ಮಾಡುತ್ತಿದ್ದ ಫೈನಾನ್ಸಿಯರ್ ಮದನ್‌ನನ್ನು ಕೊಲೆ ಮಾಡಿದ್ದ. ಹೀಗಾಗಿ ಹಳೇ ದ್ವೇಷ ತೀರಿಸಿಕೊಳ್ಳಲು ಮಹೇಶ್ ಕೊಲೆ ಮಾಡಲಾಗಿದೆ.