Site icon Vistara News

RRB ALP Recruitment: ರೈಲ್ವೆ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆ ಕನ್ನಡದಲ್ಲೂ ಬರೆಯಲು ಅವಕಾಶ

RRB ALP Recruitment

ಬೆಂಗಳೂರು: ನೈಋತ್ಯ ರೈಲ್ವೆ ವತಿಯಿಂದ ನಡೆಯಬೇಕಿರುವ ಸಹಾಯಕ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿ (RRB ALP Recruitment) ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯಲು ರೈಲ್ವೆ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ರೈಲ್ವೆ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಂಸದ ತೇಜಸ್ವಿ ಸೂರ್ಯ ಧನ್ಯವಾದ ಸಲ್ಲಿಸಿದ್ದಾರೆ.

ನೈಋತ್ಯ ರೈಲ್ವೆ ವಲಯದ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿಕೊಡಬೇಕೆಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿರುವ ರೈಲ್ವೆ ಇಲಾಖೆ, ನೈಋತ್ಯ ರೈಲ್ವೆ ವಲಯದ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ನೀಡಿದೆ. ಇದರಿಂದ ಕರ್ನಾಟಕದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೇಮಕವಾಗಲು ಅನುಕೂಲವಾಗಲಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು, ನೈಋತ್ಯ ರೈಲ್ವೆ ವತಿಯಿಂದ ನಡೆಯಬೇಕಿದ್ದ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷಾ ಸುತ್ತೋಲೆಯಲ್ಲಿ ಕನ್ನಡಕ್ಕೆ ಅವಕಾಶ ನೀಡದಿರುವುದನ್ನು ರೈಲ್ವೆ ಇಲಾಖೆ ರಾಜ್ಯ ಸಚಿವರಾದ ವಿ.ಸೋಮಣ್ಣ ರವರ ಗಮನಕ್ಕೆ ತಂದಿದ್ದು, ಕನ್ನಡದಲ್ಲಿಯೂ ಪರೀಕ್ಷೆಗೆ ಅವಕಾಶ ಕಲ್ಪಿಸುವಂತೆ ಮಾಡಿದ್ದ ಮನವಿಯನ್ನು ತಕ್ಷಣವೇ ಪುರಸ್ಕರಿಸಿ ಆದೇಶ ಹೊರಡಿಸಿರುವುದು ಅಭಿನಂದನಾರ್ಹ ಕ್ರಮ.

ಕರ್ನಾಟಕ & ಕನ್ನಡಿಗರ ಹಿತಾಸಕ್ತಿಯ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಎಂದೆಂದಿಗೂ ಕಟಿಬದ್ಧವಾಗಿದೆ. ಇದರಿಂದ ಮಾತೃಭಾಷೆ ಕನ್ನಡದಲ್ಲಿ ಪರೀಕ್ಷೆ ಬರೆಯಲಿರುವ ಪರೀಕ್ಷಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ತುರ್ತಾಗಿ ಸ್ಪಂದಿಸಿ ಕ್ರಮ ಕೈಗೊಂಡಿರುವ ನಮ್ಮ ಕನ್ನಡದವರೇ ಆದ ಸಚಿವ ವಿ ಸೋಮಣ್ಣ ರವರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ನೈಋತ್ಯ ರೈಲ್ವೆಯು ಸಹಾಯಕ ಲೋಕೋಪೈಲಟ್‌ ಹುದ್ದೆಗಳಿಗೆ ಮೇ ತಿಂಗಳಲ್ಲಿ ಸಾಮಾನ್ಯ ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆಯ (ಜಿಡಿಸಿಇ) ಸುತ್ತೋಲೆ ಹೊರಡಿಸಿತ್ತು. ಆಗಸ್ಟ್ 3ರಂದು ಪರೀಕ್ಷೆ ನಡೆಯಲಿದ್ದು, ಪರೀಕ್ಷಾರ್ಥಿಗಳಿಗೆ ನೀಡಲಾದ ಹಾಲ್ ಟಿಕೆಟ್‌ನಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆಯುವಂತೆ ಆಯ್ಕೆ ನೀಡಲಾಗಿದೆ. ಹೀಗಾಗಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ ಕನ್ನಡಿಗ ಅಭ್ಯರ್ಥಿಗಳಲ್ಲಿ ಆತಂಕ ಶುರುವಾಗಿತ್ತು. ಅಲ್ಲದೆ, ತೀವ್ರ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಆದರೆ, ಇದೀಗ ಕನ್ನಡದಲ್ಲೂ ಪರೀಕ್ಷೆ ಬರೆಯಲು ರೈಲ್ವೆ ಇಲಾಖೆ ಅವಕಾಶ ನೀಡಿದೆ.

Exit mobile version