ಬೆಂಗಳೂರು: ಭವಿಷ್ಯದ ತಂತ್ರಜ್ಞಾನ ಮತ್ತು ಸುಧಾರಿತ ತಯಾರಿಕೆ ಕ್ಷೇತ್ರದಲ್ಲಿ ಕರ್ನಾಟಕವನ್ನು ಏಷ್ಯಾದಲ್ಲಿಯೇ ಅತ್ಯುತ್ತಮ ಬಂಡವಾಳ ಹೂಡಿಕೆಯ ತಾಣವನ್ನಾಗಿ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯದ ಕೈಗಾರಿಕಾ ಇಲಾಖೆಯು ಮುಂದಿನ ಐದು ವರ್ಷಗಳಲ್ಲಿ 7 ಲಕ್ಷ ಕೋಟಿ ರೂಪಾಯಿ ಹೂಡಿಕೆ ಆಕರ್ಷಿಸುವ ಹಲವಾರು ಕಾರ್ಯತಂತ್ರದ ಉಪಕ್ರಮಗಳಿಗೆ ಚಾಲನೆ ನೀಡಿದೆ.
ಸದ್ಯದ ಹೂಡಿಕೆ ಮಟ್ಟಕ್ಕಿಂತ ಶೇ. 75 ರಷ್ಟು ಗಮನಾರ್ಹ ಹೆಚ್ಚಳದೊಂದಿಗೆ ಪ್ರತಿ ವರ್ಷ ₹ 1.4 ಲಕ್ಷ ಕೋಟಿ ಮೊತ್ತದ ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ರಾಜ್ಯದ ಕೈಗಾರಿಕಾ ವಲಯದ ಬೆಳವಣಿಗೆ ದರವನ್ನು ಮುಂದಿನ ಐದು ವರ್ಷಗಳಲ್ಲಿ, ಶೇ. 15 ರಿಂದ ಶೇ. 16ರಷ್ಟು ದರದಲ್ಲಿ ಹೆಚ್ಚಿಸಲು ಉದ್ದೇಶಿಸಿದೆ. ರಾಜ್ಯದ ಒಟ್ಟು ಮೌಲ್ಯವರ್ಧನೆಗೆ (ಜಿಎಸ್‌ವಿಎ) ಕೈಗಾರಿಕೆಗಳ ವಲಯದ ಕೊಡುಗೆ ಹೆಚ್ಚಿಸುವುದಕ್ಕೂ ಉದ್ದೇಶಿಸಿದೆ. ಸದ್ಯಕ್ಕೆ ರಾಜ್ಯದಲ್ಲಿ ಪ್ರತಿ ವರ್ಷ 80,000 ಕೋಟಿ ರೂ. ಮೊತ್ತದ ಹೂಡಿಕೆ ಹರಿದು ಬರುತ್ತಿದೆ.
ಆದ್ಯತಾ ವಲಯಗಳು
ವೈಮಾಂತರಿಕ್ಷ ಮತ್ತು ರಕ್ಷಣೆ, ಎಲೆಕ್ಟ್ರಾನಿಕ್ ಬಿಡಿಭಾಗಗಳು, ತಯಾರಿಕೆ, ಉಗ್ರಾಣ ಹಾಗೂ ಸರಕು ಸಾಗಣೆ, ವಿದ್ಯುತ್ ಚಾಲಿತ ವಾಹನಗಳು, ಜವಳಿ, ಸೆಮಿಕಂಡಕ್ಟರ್, ಬಾಹ್ಯಾಕಾಶ ತಂತ್ರಜ್ಞಾನ, ವೈದ್ಯಕೀಯ ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳನ್ನು ಆದ್ಯತಾ ವಲಯಗಳೆಂದು ರಾಜ್ಯ ಸರ್ಕಾರವು ಗುರುತಿಸಿದೆ.
ಇದನ್ನೂ ಓದಿ | ವಿಸ್ತಾರ ಅಂಕಣ: ಕನ್ನಡ ಶಾಲೆ ಉಳಿವಿಗೆ ಎಸ್ಇಪಿ ಜಾರಿಯೇ ಅಡ್ಡಿ!
ಈ ಗುರಿ ಸಾಧಿಸಲು ರಾಜ್ಯ ಸರ್ಕಾರವು ಶೀಘ್ರದಲ್ಲಿಯೇ ಹೊಸ ಕೈಗಾರಿಕಾ ನೀತಿಯನ್ನು ಪ್ರಕಟಿಸಲಿದೆ. ಬಂಡವಾಳ ಆಕರ್ಷಿಸುವಲ್ಲಿ ಕರ್ನಾಟಕವನ್ನು ದೇಶದಲ್ಲಿಯೇ ಅಗ್ರಗಣ್ಯ ಹೂಡಿಕೆ ತಾಣವನ್ನಾಗಿಸಲು ಈ ನೀತಿಯು ನೆರವಾಗಲಿದೆ.
ಕಾರ್ಯತಂತ್ರ ಹೂಡಿಕೆ ಸಮಿತಿ ರಚನೆ
ರಾಜ್ಯಕ್ಕೆ ಬಂಡವಾಳ ಹೂಡಿಕೆಗಳನ್ನು ಆಕರ್ಷಿಸುವುದಕ್ಕೆ ಕೈಗಾರಿಕಾ ಇಲಾಖೆಗೆ ಮಾರ್ಗದರ್ಶನ ನೀಡಲು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯತಂತ್ರ ಹೂಡಿಕೆ ಸಮಿತಿ ರಚಿಸಲಾಗಿದೆ. ವೈಮಾಂತರಿಕ್ಷ ಮತ್ತು ರಕ್ಷಣೆ, ಇಎಸ್‌ಡಿಎಂ, ಆಟೊ / ವಿದ್ಯುತ್ ಚಾಲಿತ ವಾಹನ (ಇವಿ), ಮಷಿನ್ ಟೂಲ್ಸ್, ಔಷಧಿ, ತಯಾರಿಕೆ, ಕೈಗಾರಿಕೆ 5.0, ಜವಳಿ ಮತ್ತು ಪರಿಸರ ಸ್ನೇಹಿ ಇಂಧನ ವಲಯಗಳಲ್ಲಿ ಒಂಬತ್ತು ’ವಿಷನ್ ಗ್ರೂಪ್’ಗಳನ್ನು ಸ್ಥಾಪಿಸಲಾಗಿದೆ.
’ಕರ್ನಾಟಕವನ್ನು ಕೈಗಾರಿಕೆ ಸ್ನೇಹಿ ರಾಜ್ಯವನ್ನಾಗಿ ಮಾಡಲು ನಮ್ಮ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಎಲ್ಲಾ ಕ್ಷೇತ್ರಗಳು ಪ್ರಗತಿ ಪಥದಲ್ಲಿ ಸಾಗಲು ನೆರವಾಗುವ ಅನುಕೂಲಕರ ವಾತಾವರಣ ಸೃಷ್ಟಿಸುವ ಗುರಿಯನ್ನು ನಾವು ಹೊಂದಿದ್ದೇವೆ. ’ಇನ್ವೆಸ್ಟ್ ಕರ್ನಾಟಕ ಫೋರಂ’ (ಐಕೆಎಫ್) ಪುನರ್‌ರಚನೆ, ಕಾರ್ಯತಂತ್ರದ ಹೂಡಿಕೆ ಸಮಿತಿ ರಚನೆ ಮತ್ತು ಒಂಬತ್ತು ನಿರ್ದಿಷ್ಟ ವಲಯಗಳ ’ವಿಷನ್ ಗ್ರೂಪ್’ ರಚನೆಗಳಂತಹ ಕ್ರಮಗಳು ಹೂಡಿಕೆದಾರರಿಗೆ ಕರ್ನಾಟಕವನ್ನು ಪ್ರಮುಖ ಆದ್ಯತೆಯ ರಾಜ್ಯವನ್ನಾಗಿ ಆಕರ್ಷಿಸಲು ನೆರವಾಗಲಿವೆ’ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
’ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಒಲವು ಹೊಂದಿರುವ ಫಾಕ್ಸ್‌ಕಾನ್, ಐಬಿಸಿ, ಎಎಂಡಿ, ಕ್ವಾಲ್‌ಕಾಂ, ಅಪ್ಲೈಡ್ ಮಟೇರಿಯಲ್ಸ್, ಮಾರುಬೇನಿ ಮತ್ತು ಟಾಟಾ ಟೆಕ್ನಾಲಜೀಸ್ ಮುಂತಾದ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ದೊಡ್ಡ ಮೊತ್ತದ ಹೂಡಿಕೆ ಪ್ರಸ್ತಾವಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿವೆ. ಒಟ್ಟಾರೆ ₹ 50,000 ಕೋಟಿ ಮೌಲ್ಯದ ಹೂಡಿಕೆಯ ಪ್ರಸ್ತಾವನೆಗಳನ್ನು ನಾವು ಹೊಂದಿದ್ದೇವೆ’ ಎಂದು ಹೇಳಿದ್ದಾರೆ.
ಆದ್ಯತಾ ವಲಯಗಳ ಕಡೆಗೆ ಹೂಡಿಕೆದಾರರನ್ನು ಆಕರ್ಷಿಸಲು, ವಿಶ್ವ ದರ್ಜೆಯ ಕೈಗಾರಿಕಾ ಮೂಲಸೌಕರ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರವು ಹತ್ತಾರು ಕ್ರಮಗಳನ್ನು ಕೈಗೊಂಡಿದೆ. ಬಳಕೆಗೆ ಸಿದ್ಧವಿರುವ ಕಾರ್ಖಾನೆಗಳು, ಕೈಗಾರಿಕಾ ಪಾರ್ಕ್‌ಗಳು, ಕೈಗಾರಿಕಾ ಸಮೂಹಗಳು (ಕ್ಲಸ್ಟರ್) ಮತ್ತು ಸಾಮಾನ್ಯ ಬಳಕೆಯ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಇ2ಇ (ಆದಿಯಿಂದ ಅಂತ್ಯದವರೆಗೆ) ಅರ್ಜಿ ಸಲ್ಲಿಸುವ ಮತ್ತು ಅನುಮೋದನೆಗಳ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಿ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಭೂ – ಬ್ಯಾಂಕ್‌ನ ವಾಸ್ತವ ಚಿತ್ರಣವನ್ನು ಒದಗಿಸಲಾಗುವುದು. ಇತರ ಕ್ರಮಗಳ ಪೈಕಿ, ಸರ್ಕಾರವು ಉದ್ಯಮ-ಶೈಕ್ಷಣಿಕ ವಲಯದ ಸಹಯೋಗವನ್ನು ಕಾರ್ಯಗೊಳಿಸುತ್ತಿದೆ. ಪಾಲಿಟೆಕ್ನಿಕ್‌ಗಳನ್ನು ಸುಧಾರಿತ ಉಪಕರಣಗಳು ಮತ್ತು ಮೂಲಸೌಕರ್ಯಗಳೊಂದಿಗೆ ನವೀಕರಿಸುತ್ತಿದೆ.
ಹೊಸ ಕಾರ್ಯತಂತ್ರಗಳು
ರಾಜ್ಯದಲ್ಲಿನ ಕೈಗಾರಿಕಾ ಬೆಳವಣಿಗೆ ದರವನ್ನು ಸುಸ್ಥಿರವಾಗಿ ಉಳಿಸಿಕೊಳ್ಳಲು ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇವುಗಳಲ್ಲಿ ಇತ್ತೀಚೆಗಷ್ಟೇ ಕೊನೆಗೊಂಡ ಕೈಗಾರಿಕೆಗಳ ಇಲಾಖೆ ನಿಯೋಗದ ಅಮೆರಿಕದ ಯಶಸ್ವಿ ಭೇಟಿಯೂ ಸೇರಿದೆ. ಈ ಭೇಟಿಯ ಸಂದರ್ಭದಲ್ಲಿ, ನಿಯೋಗವು ಅಮೆರಿಕದಲ್ಲಿ ತಂತ್ರಜ್ಞಾನ, ಸೆಮಿಕಂಡಕ್ಟರ್, ವಿದ್ಯುತ್ ಚಾಲಿತ ವಾಹನಗಳು (ಇವಿ), ವೈಮಾಂತರಿಕ್ಷ ಮತ್ತು ವೈದ್ಯಕೀಯ ಕ್ಷೇತ್ರದ ದೈತ್ಯ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ, ಕರ್ನಾಟಕದಲ್ಲಿನ ಹೂಡಿಕೆಯ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದೆ.
ಇನ್ವೆಸ್ಟ್ ಕರ್ನಾಟಕ ಫೋರಮ್ (ಐಕೆಎಫ್) ವ್ಯಾಪ್ತಿಯಲ್ಲಿ ಬರುವ ಕಾರ್ಯತಂತ್ರದ ಹೂಡಿಕೆ ಸಮಿತಿಯು ಸರ್ಕಾರದ ಹೊಸ ಚಿಂತನೆಗೆ ಮತ್ತೊಂದು ಉದಾಹರಣೆಯಾಗಿದೆ. ಬಂಡವಾಳ ಹೂಡಿಕೆಯ ಕೇಂದ್ರವಾಗಿ ರಾಜ್ಯದ ಖ್ಯಾತಿಯನ್ನು ಇದು ಹೆಚ್ಚಿಸಲಿದೆ. ಪುನರ್‌ರಚನೆಗೊಂಡಿರುವ ಹೊಸ ಅವತಾರದಲ್ಲಿ, ಪ್ರಮುಖ ತಯಾರಿಕಾ ಚಟುವಟಿಕೆಗಳು ಒಳಗೊಂಡಂತೆ ಕೈಗಾರಿಕಾ ವಲಯಗಳಲ್ಲಿ ಪ್ರಮುಖ ಕಂಪನಿಗಳ ಭಾಗವಹಿಸುವಿಕೆಯಿಂದ ಹೆಚ್ಚಿನ ಅನುಕೂಲ ಆಗಲಿದೆ.
ವಿಷನ್ ಗ್ರೂಪ್‌ಗಳ ರಚನೆ
ತನ್ನ ಕೈಗಾರಿಕಾ ವಲಯದ ಒಟ್ಟಾರೆ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್) ಹೆಚ್ಚಿಸಲು, ಸರ್ಕಾರವು ಒಂಬತ್ತು ನಿರ್ದಿಷ್ಟ ವಲಯಗಳಾದ ಜವಳಿ, ಔಷಧ , ರಕ್ಷಣೆ, ಯಂತ್ರೋಪಕರಣಗಳು, ಇಎಸ್‌ಡಿಎಂ, ವಾಹನ ತಯಾರಿಕೆ / ವಿದ್ಯುತ್‌ಚಾಲಿತ ವಾಹನಗಳು, ಪ್ರಮುಖ ತಯಾರಿಕೆ, ಹೊಸ ತಂತ್ರಜ್ಞಾನಗಳು, ಉದ್ಯಮ 5.0, ಮತ್ತು ಪರಿಸರ ಸ್ನೇಹಿ ಇಂಧನ ಉತ್ಪಾದನೆಗೆ ಸಂಬಂಧಿಸಿದಂತೆ ’ವಿಷನ್ ಗ್ರೂಪ್’ ಗಳನ್ನು ರಚಿಸಿದೆ. ರಾಜ್ಯದಲ್ಲಿನ ಇತರ ಜಿಲ್ಲೆಗಳಲ್ಲಿ ಇರುವ ಅವಕಾಶಗಳನ್ನು ಬಳಸಿಕೊಳ್ಳಲು ‘ಬೆಂಗಳೂರಿನ ಆಚೆಗೆ’ ಕೈಗಾರಿಕೆಗಳನ್ನು ಸ್ಥಾಪಿಸಲು ಹೊಣೆಗಾರಿಕೆಯನ್ನು ಈ ’ವಿಷನ್ ಗ್ರೂಪ್”ಗಳಿಗೆ ಒಪ್ಪಿಸಲಾಗಿದೆ.
ಕರ್ನಾಟಕದಲ್ಲಿನ ಅನುಕೂಲತೆಗಳು
ಪ್ರಮುಖ ಕೊಡುಗೆಗಳನ್ನು ನೀಡಬಲ್ಲ ರಾಜ್ಯವಾಗಿದ್ದು, ದೇಶದಲ್ಲೇ ಅತ್ಯಂತ ಆಕರ್ಷಕ ಹೂಡಿಕೆಯ ತಾಣವಾಗಿದೆ. ಹೂಡಿಕೆದಾರ ಸ್ನೇಹಿ ನೀತಿಗಳು, ಸಹಾಯ ಸವಲತ್ತುಗಳು, ಭೂಮಿಯೂ ಸೇರಿದಂತೆ ಬಳಕೆಗೆ ಸಿದ್ಧ ಇರುವ ಕೈಗಾರಿಕಾ ಸೌಲಭ್ಯಗಳು ಹೂಡಿಕೆದಾರರನ್ನು ಆಕರ್ಷಿಸಲಿವೆ.
ಇದನ್ನೂ ಓದಿ | Bheemanna Khandre: ರಾಜ್ಯದಲ್ಲೇ ಬೀದರ್ ಉಳಿಯಲು ಭೀಮಣ್ಣ ಖಂಡ್ರೆ ಹೋರಾಟವೂ ಕಾರಣ: ಸಿಎಂ
ರಾಜ್ಯವು ಕೈಗಾರಿಕಾ ಮೂಲಸೌಕರ್ಯಗಳು ಹಾಗೂ ಸಹಾಯ ಸವಲತ್ತುಗಳನ್ನು ಒದಗಿಸುವುದರ ಜತೆಗೆ ಗರಿಷ್ಠ ಕೌಶಲದ ಮತ್ತು ತರಬೇತಿ ಪಡೆದ ಕಾರ್ಮಿಕ ಪಡೆಯನ್ನೂ ಹೊಂದಿದೆ. ಸಮರ್ಥ ಹಾಗೂ ದಕ್ಷ ಸರಕು ಸಾಗಣೆ ಜಾಲದ ನೆರವಿನಿಂದ ಬೇಡಿಕೆ ಕೇಂದ್ರಗಳಿಗೆ ಉತ್ತಮ ಸಂಪರ್ಕ ಸೌಲಭ್ಯ ಹೊಂದಿದೆ. ಉದ್ಯಮಗಳ ಸ್ಥಾಪನೆಯನ್ನು ಸುಲಲಿತಗೊಳಿಸಲು ರಾಜ್ಯ ಸರ್ಕಾರವು ನಿಯಮಾವಳಿಗಳನ್ನು ಪರಿಷ್ಕರಿಸಿದೆ. ಕೈಗಾರಿಕಾ ಪರಿಸರ ವ್ಯವಸ್ಥೆಗೆ ವಿಶ್ವದರ್ಜೆಯ ಸಾಮಾಜಿಕ ಮೂಲಸೌಕರ್ಯದ ಉತ್ತಮ ಬೆಂಬಲವೂ ಇದೆ.