Site icon Vistara News

Republic Day: ಗಣರಾಜ್ಯೋತ್ಸವ ಆಚರಣೆ; ಜಿಲ್ಲೆಗಳಿಗೆ ತಲಾ 1 ಲಕ್ಷ ರೂ. ಅನುದಾನ ಬಿಡುಗಡೆ

Republic Day celebrations

ಬೆಂಗಳೂರು: ಜ.26 ರಂದು ಗಣರಾಜ್ಯೋತ್ಸವ (Republic Day) ಆಚರಣೆಗಾಗಿ ಪ್ರತಿ ಜಿಲ್ಲೆಗೆ 1 ಲಕ್ಷ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಮಟ್ಟದ ಗಣರಾಜ್ಯ ದಿನಾಚರಣೆಯು ರಾಜಧಾನಿಯಲ್ಲಿ ನಡೆಯಲಿದ್ದು, ಇದಕ್ಕಾಗಿ ಬೆಂಗಳೂರು ನಗರ ಜಿಲ್ಲೆಗೆ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

ಗಣರಾಜ್ಯೋತ್ಸವ ದಿನಾಚರಣೆ ಆಚರಿಸುವ ಸಂಬಂಧ 30 ಜಿಲ್ಲೆಗಳಿಗೆ ತಲಾ 1,00,000 ರೂ.ಗಳಂತೆ ಒಟ್ಟು 30 ಲಕ್ಷ ಹಾಗೂ 31 ಜಿಲ್ಲೆಗಳಲ್ಲಿನ 232 ತಾಲೂಕುಗಳಿಗೆ ತಲಾ 20 ಸಾವಿರ ರೂ.ಗಳಂತೆ ಒಟ್ಟು 46,40,000 ರೂ.ಗಳನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ.

ಈ ಮೊತ್ತವನ್ನು 2024-25ನೇ ಸಾಲಿನ ಲೆಕ್ಕ ಶೀರ್ಷಿಕೆ: 2070-00-115-1-01-051 ಅಡಿಯಲ್ಲಿ ಒದಗಿಸಿರುವ ಅನುದಾನದಿಂದ ಭರಿಸತಕ್ಕದ್ದು. ಜಿಲ್ಲಾಧಿಕಾರಿಗಳು ಎ.ಸಿ. ಬಿಲ್‌ನಲ್ಲಿ ಹಣವನ್ನು ಪಡೆಯಲು ಅಧಿಕಾರವನ್ನು ಹೊಂದಿದ್ದು, ಹಣವನ್ನು ಪಡೆದ ದಿನಾಂಕದಿಂದ ಒಂದು ತಿಂಗಳೊಳಗಾಗಿ ಮಹಾಲೇಖಪಾಲರಿಗೆ ಎನ್.ಡಿ.ಸಿ. ಬಿಲ್ಲನ್ನು ಕಳುಹಿಸಬೇಕು. ಅಲ್ಲದೆ ಲೆಕ್ಕ ಪತ್ರಗಳನ್ನು ಪೂರ್ಣಗೊಳಿಸಿ, ಕರ್ನಾಟಕ ಆರ್ಥಿಕ ಸಂಹಿತೆಯಲ್ಲಿನ 62(ಬಿ) ನಮೂನೆಯ ವಿವರ ಪತ್ರವನ್ನು ಸರ್ಕಾರಕ್ಕೆ ಒಂದು ತಿಂಗಳೊಳಗಾಗಿ ತಪ್ಪದೇ ಕಳುಹಿಸಬೇಕು ಎಂದು ಸರ್ಕಾರದ ಅಧೀನ ಕಾರ್ಯದರ್ಶಿಗಳು ಸೂಚಿಸಿದ್ದಾರೆ.

ಈ ಸಲ ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಜ್ಯದ ಟ್ಯಾಬ್ಲೋ ಇಲ್ಲ, ನಾಲ್ಕೂ ಮಾದರಿ ರಿಜೆಕ್ಟ್!‌

ಬೆಂಗಳೂರು: ಈ ಬಾರಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ (Republic Day parade) ರಾಜ್ಯದ ಯಾವುದೇ ಸ್ತಬ್ಧಚಿತ್ರಕ್ಕೆ (Karnataka Tableau) ಅವಕಾಶ ಸಿಕ್ಕಿಲ್ಲ. ರಾಜ್ಯ ಸರ್ಕಾರದ ವಾರ್ತಾ ಇಲಾಖೆ‌ ಕಳುಹಿಸಿದ್ದ ಸ್ತಬ್ಧ ಚಿತ್ರಗಳ ನಾಲ್ಕು ಮಾದರಿಗೂ ಪ್ರದರ್ಶನಕ್ಕೆ ಅನುಮತಿ ದೊರೆತಿಲ್ಲ.

ನಾಲ್ಕು ಮಾದರಿಯ ಸ್ತಬ್ಧಚಿತ್ರಗಳನ್ನು ರಾಜ್ಯ ಸರ್ಕಾರ ಕಳುಹಿಸಿತ್ತು. ಬ್ರಾಂಡ್ ಬೆಂಗಳೂರು (Brand bengaluru), ನಾಲ್ವಡಿ ಕೃಷ್ಣರಾಜ ಒಡೆಯರ್ (Nalvadi Krishnaraja Wadiyar), ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2 (Bengaluru Airport Terminal 2), ಅಣ್ಣಮ್ಮ ದೇವಸ್ಥಾನದ (Annamma Temple) ಮಾದರಿಗಳನ್ನು ಕಳುಹಿಸಲಾಗಿತ್ತು. ರಾಜ್ಯದ ಸ್ತಬ್ಧ ಚಿತ್ರಕ್ಕೆ ಈ ಬಾರಿ ಅನುಮತಿ ನಿರಾಕರಣೆ ಮಾಡಿದೆ ಎಂದು ರಾಜ್ಯದ ವಾರ್ತಾ ಇಲಾಖೆಯ ದೆಹಲಿ ಮೂಲಗಳು ಮಾಹಿತಿ ತಿಳಿಸಿವೆ.

ಸುಮಾರು 14 ವರ್ಷಗಳಿಂದ ನಿರಂತರವಾಗಿ ಕರ್ನಾಟಕ ರಾಜ್ಯದ ಸ್ತಬ್ಧ ಚಿತ್ರ ಪ್ರದರ್ಶನವಾಗಿದೆ. ಈ ಸಲ ಬೇರೆ ರಾಜ್ಯದ ಮಾದರಿ ಪ್ರದರ್ಶನಕ್ಕೆ ಅವಕಾಶ ಕೊಡಬೇಕು ಎಂದು ಕೇಂದ್ರ ಸರ್ಕಾರ ಕಾರಣ ತಿಳಿಸಿದೆ.

ಈ ಬಾರಿ ತೆಲಂಗಾಣ ಮತ್ತು ಕರ್ನಾಟಕ ರಾಜ್ಯದ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅನುಮತಿ ಸಿಕ್ಕಿಲ್ಲ. ಆದರೆ ತೆಲಂಗಾಣದಲ್ಲಿ ಕೇಂದ್ರ ಸರ್ಕಾರದ ನಡೆಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮರುಪರಿಶೀಲನೆ ನಡೆಸಿ ಮತ್ತೆ ಅನುಮತಿ ನೀಡಲಾಗಿದೆ. ಆದರೆ ರಾಜ್ಯದ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡದಿದ್ದರೂ ಈ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ, ಬದಲಾಗಿ ಮಾಹಿತಿ ಮುಚ್ಚಿಡುವ ಕೆಲಸ ಮಾಡಿದೆ. ಮಾಧ್ಯಮಗಳಿಗೂ ತಿಳಿಯದಂತೆ ಮಾಹಿತಿ ಮುಚ್ಚಿಡಲಾಗಿದೆ.

ಇದನ್ನೂ ಓದಿ | Women Agniveers: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಹಿಳಾ ಅಗ್ನಿವೀರರು ಭಾಗಿ; ಇದೇ ಮೊದಲು

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೂ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡಲಾಗಿತ್ತು. ಉತ್ತರ ಪ್ರದೇಶ ಸೇರಿದಂತೆ ಬೇರೆ ರಾಜ್ಯಗಳಿಗೆ ಅವಕಾಶ ನೀಡಬೇಕು ಎಂಬ ಕಾರಣ ನೀಡಿ ಕಳೆದ ವರ್ಷ ರಾಜ್ಯದ ಟ್ಯಾಬ್ಲೋಗೆ ಅವಕಾಶ ನಿರಾಕರಣೆ ಮಾಡಲಾಗಿತ್ತು. ಬಳಿಕ ಆಗಿನ ಸಿಎಂ ಬೊಮ್ಮಾಯಿ ಹಾಗೂ ಜನರ ಒತ್ತಡದ ಮೇರೆಗೆ, ಹಾಗೂ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದ್ದ ಕಾರಣ ರಾಜ್ಯಕ್ಕೆ ಕೊನೆ ಗಳಿಗೆಯಲ್ಲಿ ಅವಕಾಶ ದೊರೆತಿತ್ತು. ಗಣರಾಜ್ಯೋತ್ಸವ ಪರೇಡ್‌ಗೆ 15 ದಿನ ಬಾಕಿ ಇರುವಾಗ ಪುನಃ ಅನುಮತಿ ದೊರೆತಿತ್ತು.

Exit mobile version