Site icon Vistara News

Illegal cash found : ವಿಧಾನಸೌಧದಲ್ಲಿ 10 ಲಕ್ಷ ಪತ್ತೆ; 40% ಕಮಿಷನ್‌ಗೆ ಇನ್ನೇನು ಸಾಕ್ಷಿ ಬೇಕು: ಡಿಕೆಶಿ ಪ್ರಶ್ನೆ

tipu sultan DK Shivakumar alleges bjp for spreading false history

ಬೆಂಗಳೂರು: ವಿಧಾನಸೌಧದಲ್ಲಿ ಪಿಡಬ್ಲ್ಯು ಎಂಜಿನಿಯರ್‌ ಜಗದೀಶ್‌ ದಾಖಲೆ ಇಲ್ಲದೆ ೧೦.೫ ಲಕ್ಷ ರೂಪಾಯಿಯನ್ನು (Illegal cash found) ತೆಗೆದುಕೊಂಡು ಹೋಗುವಾಗ ಪೊಲೀಸರಿಗೆ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದು, ಈ ಸರ್ಕಾರದಲ್ಲಿ ಕಾಸಿಲ್ಲದೆ ಯಾವುದೂ ನಡೆಯುವುದಿಲ್ಲ ಎಂಬುದು ವಿಧಾನಸೌಧದ ಪ್ರತಿಯೊಂದು ಗೋಡೆಗೂ ಗೊತ್ತಿದೆ. ೪೦ ಪರ್ಸೆಂಟ್‌ ಕಮಿಷನ್‌ಗೆ ಇನ್ನೇನು ಸಾಕ್ಷಿ ಬೇಕು ಎಂದು ಪ್ರಶ್ನಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ವಿಧಾನಸೌಧದಲ್ಲಿ ಫೈಲ್ ಮೂವ್‌ ಮಾಡಬೇಕೆಂದರೂ ಕಮಿಷನ್ ನೀಡಬೇಕು. ಹೀಗಾಗಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ದಯಾಮರಣ ಕೇಳಿದ್ದಾರೆ. ವಿರೋಧ ಪಕ್ಷಕ್ಕೆ ಈ ಬಗ್ಗೆ ಎಲ್ಲ ಮಾಹಿತಿ ಬಂದಿದೆ. ನಾವು‌ ಇದನ್ನು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ. ಸತ್ಯ ಹೊರಗೆ ಬರಬೇಕು, ತನಿಖೆಯಾಗಬೇಕು ಎಂದು ನಾವು ಒತ್ತಾಯ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯಕ್ಕೆ ಭ್ರಷ್ಟಾಚಾರ ಕಳಂಕ ಬಂದಿದೆ. ಇನ್ನು ೬೦ ದಿನ ಮಾತ್ರ ಈ ಸರ್ಕಾರ ಇರಲಿದೆ. ಆಮೇಲೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಬರಲಿದೆ. ದಾಖಲೆ ಕೊಡಿ ಅಂತಾರೆ ಇದು ದಾಖಲೆ ಅಲ್ವಾ? ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತರ ‌ಮನೆಯಲ್ಲಿ ಹಣ ಸಿಗಲಿಲ್ಲವೇ? ದುಡ್ಡನ್ನು ಜೇಬಿನಿಂದ ತೆಗೆದು ಕೊಡೋದಾಗಿದೆ. ಇದಕ್ಕೆ ಸಾಕ್ಷಿ ಕೊಡಲು ಆಗುತ್ತದೆಯೇ? 40% ಕಮಿಷನ್‌ಗೆ ದಾಖಲೆಯಾಗಿ ಇವೆಲ್ಲ ಸಾಕಲ್ಲವೇ ಎಂದು ಡಿಕೆಶಿ ಪ್ರಶ್ನಿಸಿದರು.

ಇದನ್ನೂ ಓದಿ | Illegal cash found : ವಿಧಾನಸೌಧಕ್ಕೆ ದಾಖಲೆ ಇಲ್ಲದೆ ಹಣ ತಂದಿದ್ದ ಎಂಜಿನಿಯರ್; 10 ಲಕ್ಷ ರೂಪಾಯಿ ಜಪ್ತಿ

ದಲಿತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿ ವಂಚಿಸಿದ ಪ್ರಕರಣದಲ್ಲಿ ಆರೋಪಿ ಎಂದು ಗುರುತಿಸಲಾದ ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆರೋಪ ಮಾಡಿರುವ ವಿಚಾರದ ಬಗ್ಗೆ ಡಿ.ಕೆ. ಶಿವಕುಮಾರ್‌ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ, ಈ ಹೆಸರನ್ನೇ ನಾನು ಕೇಳಿಲ್ಲ. ಕುಮಾರಸ್ವಾಮಿ ಆರೋಪ ‌ಮಾಡುತ್ತಾ ಇದ್ದಾರೆ. ಅವರಿಗೇ ಮಾಹಿತಿ ಗೊತ್ತಿರಬೇಕು ಎಂದು ಹೇಳಿದರು.

ಏನಿದು 10 ಲಕ್ಷ ರೂಪಾಯಿ ಜಪ್ತಿ ಪ್ರಕರಣ?
ಕೆಲಸ ನಿಮಿತ್ತ ಬುಧವಾರ (ಜ.೪) ಸಂಜೆ ವಿಕಾಸಸೌಧಕ್ಕೆ ಇಂಜಿನಿಯರ್ ಜಗದೀಶ್ ಹಣವನ್ನು ಒಯ್ಯುತ್ತಿದ್ದರು. ಅವರು ವಿಧಾನಸೌಧ ವೆಸ್ಟ್‌ ಗೇಟ್‌ ಬಳಿ ಪ್ರವೇಶಿಸುವಾಗ ಪೊಲೀಸರು ತಪಾಸಣೆ ನಡೆಸಿದ್ದಾರೆ. ಆಗ ಅವರ ಬಳಿ ೧೦.೫ ಲಕ್ಷ ರೂಪಾಯಿ ಪತ್ತೆಯಾಗಿದೆ. ಈ ಹಣವನ್ನು ಯಾಕೆ, ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಇಷ್ಟು ಮೊತ್ತದ ಹಣವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ತಂದಿದ್ದೇನೆ. ಕೆಲವು ಬಿಲ್‌ ಕ್ಲಿಯರ್‌ ಮಾಡಬೇಕಿತ್ತು ಎಂದು ಜಗದೀಶ್ ಹೇಳಿಕೆ ನೀಡಿದ್ದಾರೆ. ದಾಖಲೆ ಕೇಳಿದರೆ ಅವರ ಬಳಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಹಣವನ್ನು ಜಪ್ತಿ ಮಾಡಿ ಕೋರ್ಟ್‌ಗೆ ಒಪ್ಪಿಸಲಾಗಿದೆ. ಕೋರ್ಟ್‌ಗೆ ದಾಖಲೆ ಸಲ್ಲಿಸಿ ಹಿಂಪಡೆಯುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ | Siddeshwar Swamiji | ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ಸಂಗ್ರಹ ಕಾರ್ಯಕ್ಕೆ ಸಿದ್ಧತೆ

Exit mobile version