ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಪೋಷಕರು ಮಾಸಿಕವಾಗಿ ೧೦೦ ರೂಪಾಯಿ ವಂತಿಗೆ ನೀಡಬೇಕೆಂಬ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಸುತ್ತೋಲೆಯನ್ನು ಶನಿವಾರ (ಅ.೨೨) ಸರ್ಕಾರ ವಾಪಸ್ ಪಡೆದುಕೊಂಡಿದೆ. ಶಿಕ್ಷಣ ತಜ್ಞರು ಹಾಗೂ ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆ, ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಈ ಬಗ್ಗೆ ಶನಿವಾರ ಬೆಳಗ್ಗೆಯಷ್ಟೇ ಪ್ರತಿಕ್ರಿಯೆ ನೀಡಿದ್ದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಈ ಆದೇಶಕ್ಕೂ ತಮಗೆ ಮತ್ತೆ ಮುಖ್ಯಮಂತ್ರಿಗೆ ಸಂಬಂಧವೇ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಆದರೆ, ಸರ್ಕಾರದ ನಡೆಗೆ ವ್ಯಾಪಕ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಆದೇಶವನ್ನು ವಾಪಸ್ ಪಡೆದುಕೊಳ್ಳಲಾಗಿದೆ. ಆದೇಶವನ್ನು ವಾಪಸ್ ಪಡೆಯುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ನೂತನ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಏನಿದು ಸುತ್ತೋಲೆ?
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅಗತ್ಯವಿರುವ ಖರ್ಚುವೆಚ್ಚಗಳಿಗಾಗಿ ಮಕ್ಕಳ ಪೋಷಕರಿಂದ ದೇಣಿಗೆ ರೂಪದಲ್ಲಿ ಪ್ರತಿ ತಿಂಗಳು 100 ರೂಪಾಯಿ ಸಂಗ್ರಹಿಸಲು ಎಸ್‌ಡಿಎಂಸಿಗೆ ಅನುಮತಿ ನೀಡಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಸರ್ಕಾರದ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದು ಶಿಕ್ಷಣದ ಮೂಲಭೂತ ಹಕ್ಕಿನ ಉಲ್ಲಂಘನೆ, ಕಡ್ಡಾಯ ಶಿಕ್ಷಣ ಹಕ್ಕು ಮೊಟಕುಗೊಳಿಸುವ ಹುನ್ನಾರ ಎಂದು ಶಿಕ್ಷಣ ತಜ್ಞರು ಸೇರಿದಂತೆ ಪ್ರತಿಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ಸಂವಿಧಾನದ 21 ಎ ವಿಧಿ ಪ್ರಕಾರ ಮಕ್ಕಳಿಗೆ ಶಿಕ್ಷಣ ನೀಡುವುದು ಆಯಾ ಸರ್ಕಾರಗಳ ಹೊಣೆ. ಆರ್‌ಟಿಇ ಸೆಕ್ಷನ್ 3ರ ಪ್ರಕಾರ 8ನೇ ತರಗತಿಯವರೆಗೆ ಯಾವುದೇ ಅಡ್ಡಿ ಆತಂಕ ಇಲ್ಲದೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಬಹುತೇಕ ಸರ್ಕಾರಿ ಶಾಲೆಗಳು ಈಗಾಗಲೇ ಮಕ್ಕಳಿಲ್ಲದೆ ಮುಚ್ಚುವ ಹಂತ ತಲುಪಿವೆ. ಪರಿಶಿಷ್ಟರು, ಕೂಲಿ ಕಾರ್ಮಿಕರು, ಬಡವರ ಮಕ್ಕಳಷ್ಟೇ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಇಂತಹ ಆದೇಶ ಹೊರಡಿಸಿದ್ದು ಎಷ್ಟು ಸರಿ? ಮೊದಲೇ ಕಡುಬಡತನದಲ್ಲಿರುವ ಪೋಷಕರು ಸರ್ಕಾರದ ಹಣವಸೂಲಿ ನೀತಿಗೆ ಬೇಸತ್ತು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿದರೆ ಅದಕ್ಕೆ ಹೊಣೆ ಯಾರು? ಎಂದು ಶಿಕ್ಷಣ ತಜ್ಞರು ಸರ್ಕಾರವನ್ನು ಪ್ರಶ್ನೆ ಮಾಡಿದ್ದರು.
ಸುತ್ತೋಲೆಯಲ್ಲಿ ಇರೋದೇನು?
ಎಸ್‌ಡಿಎಂಸಿಯವರು ಪೋಷಕರಿಂದ ಪ್ರತಿ ತಿಂಗಳು ಪಡೆಯುವ ೧೦೦ ರೂಪಾಯಿಯನ್ನು ಅಭಿವೃದ್ಧಿಗೆ ಪೂರಕ ಕಾರ್ಯಗಳಿಗೆ ಬಳಕೆ ಮಾಡಬಹುದು. ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಗೆ, ಶಾಲೆಯ ಸಣ್ಣ ಪುಟ್ಟ ದುರಸ್ತಿ ಕಾರ್ಯಗಳಿಗೆ, ಶಾಲಾ ಶುಚಿತ್ವ, ಶೈಕ್ಷಣಿಕ ಚಟುವಟಿಕೆಗೆ ಸೇರಿದಂತೆ ಇತ್ಯಾದಿ ತುರ್ತು ವೆಚ್ಚಗಳಿಗೆ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಬಿಲ್, ಬಿಸಿಯೂಟ ಸೇವಿಸಲು ಮಕ್ಕಳಿಗೆ ಪೂರಕವಾದ ವಸ್ತುಗಳ ಖರೀದಿಗೆ, ಅಗತ್ಯ ಬೋಧನಾ ಉಪಕರಣಗಳ ಖರೀದಿ, ಗಣಕಯಂತ್ರ ಖರೀದಿ ಸೇರಿದಂತೆ ಹೆಚ್ಚುವರಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡರೆ ಅವರಿಗೆ ಗೌರವ ಸಂಭಾವನೆ ನೀಡಲು ಈ ಹಣವನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಈ ಆದೇಶಕ್ಕೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ | ಸರ್ಕಾರಿ ಶಾಲೆಯಲ್ಲಿ ಮಾಸಿಕ ₹100 ವಂತಿಗೆ; ಈ ಆದೇಶಕ್ಕೂ ನನಗೂ, ಸಿಎಂಗೂ ಸಂಬಂಧವಿಲ್ಲ: ಬಿ.ಸಿ. ನಾಗೇಶ್