ಬೆಂಗಳೂರು: ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರ ನಿವಾಸದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಸಚಿವರ ಪರವಾಗಿ ಲಂಚ ಸ್ವೀಕರಿಸಿ (Corruption Case), ಅರ್ಹತೆ ಇಲ್ಲದ ಸಂಸ್ಥೆಗೆ 1,260 ಕೋಟಿ ರೂ. ಮೊತ್ತದ ಟೆಂಡರ್ ನೀಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಡಾ.ಕೆ.ಸುಧಾಕರ್ ಸೇರಿ ಆರೋಗ್ಯ ಇಲಾಖೆ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಮುಖಂಡರು ರಮೇಶ್ ಬಾಬು, ರಾಮಚಂದ್ರ, ಮನೋಹರ್ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಆರೋಗ್ಯ ಇಲಾಖೆಯಲ್ಲಿ 1,260 ಕೋಟಿ ರೂ. ಮೊತ್ತದ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ. ಸಚಿವರ ಪರವಾಗಿ ಸರ್ಕಾರಿ ಉದ್ಯೋಗಿ ಹಣ ಪಡೆದಿದ್ದಾರೆ. ಈ ಹಗರಣದಲ್ಲಿ ಸಿಎಂ ಬೊಮ್ಮಾಯಿ ಮೊದಲ ಆರೋಪಿ, ಸಚಿವ ಸುಧಾಕರ್ ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆಪಾದಿಸಿದ್ದಾರೆ.
ಇದನ್ನೂ ಓದಿ | Karnataka Election 2023: ಚಿಂತಾಮಣಿಯಲ್ಲಿ ಸಿಕ್ತು 12 ಲಕ್ಷ ರೂ.; ಹುಬ್ಬಳ್ಳಿ ಕಾಂಗ್ರೆಸ್ ನಾಯಕಿ ಮನೇಲಿ ಏನೂ ಸಿಗಲಿಲ್ಲ!
ಕಾಂಗ್ರೆಸ್ ಮುಖಂಡ ರಮೇಶ್ ಬಾಬು ಮಾತನಾಡಿ, ಸರ್ಕಾರದ ವಿರುದ್ಧ 40% ಕಮಿಷನ್ ಆರೋಪವನ್ನು ಕಾಂಗ್ರೆಸ್ ಮಾಡುತ್ತಾ ಬಂದಿದೆ. ಈ ಸರ್ಕಾರ ಭ್ರಷ್ಟಾಚಾರದ ಸರ್ಕಾರ ಎಂದು ಜನರಿಗೂ ಸ್ಪಷ್ಟವಾಗಿದೆ. ಆರೋಗ್ಯ ಇಲಾಖೆಯಲ್ಲಿ 1260 ಕೋಟಿ ಮೊತ್ತದ ಟೆಂಡರ್‌ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ಒಬ್ಬ ಮಂತ್ರಿಯ ಪರವಾಗಿ ಡೆಪ್ಯೂಟಿ ಡೈರೆಕ್ಟರ್ ಆಫ್ ಹೆಲ್ತ್ ಮಿಷನ್ ನಾರಾಯಣ್ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿರುವ 12 ಸಾವಿರ ಆಂಬ್ಯುಲೆನ್ಸ್‌ಗೆ ಜಿಪಿಎಸ್ ಸೇರಿ ಇನ್ನಷ್ಟು ವ್ಯವಸ್ಥೆ ಮಾಡಬೇಕೆಂದು ನ್ಯಾಯಾಲಯ ಆದೇಶ ನೀಡಿತ್ತು. ಆ ಆದೇಶವನ್ನು ಉಪಯೋಗಿಸಿಕೊಂಡು ಸರ್ಕಾರ ಅರ್ಹತೆ ಇಲ್ಲದ ಸಂಸ್ಥೆಗೆ 1,260 ಕೋಟಿ ಮೊತ್ತದ ಟೆಂಡರ್ ನೀಡಿದೆ. ತಾಂತ್ರಿಕ, ಆರ್ಥಿಕ ಯಾವುದೇ ಅನುಮೋದನೆ, ಪರಾಮರ್ಶೆ ಮಾಡದೇ ಟೆಂಡರ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇಲ್ಲಿ ಓದಿ | Karnataka Election 2023 : ಕಣದಲ್ಲಿರುವ ಸಣ್ಣ-ಪುಟ್ಟ ಪಕ್ಷಗಳಲ್ಲಿ ಯಾರಾಗಬಹುದು ಗೇಮ್ ಚೇಂಜರ್?
ಸಚಿವರ ಪರ ಅಧಿಕಾರಿ ಹಣ ಪಡೆದುಕೊಂಡಿದ್ದ ಫೋಟೊ ಬಿಡುಗಡೆ ಮಾಡಲಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿ, ಸಚಿವರು, ಸಿಎಂ ಮೇಲೆ ತನಿಖೆಯಾಗಬೇಕು. ಜತೆಗೆ ಖಾಸಗಿ ಸಂಸ್ಥೆಗೆ ಕೊಟ್ಟಿರುವ ಟೆಂಡರ್ ರದ್ದು ಮಾಡಬೇಕೆಂದು ಎಂದು ಮನವಿ ಮಾಡಲಾಗಿದೆ. ಹಗರಣದ ಸಂಪೂರ್ಣ ದಾಖಲೆಯನ್ನು ಸಿಎಸ್, ಸಿಸಿಬಿ, ಲೋಕಾಯುಕ್ತಕ್ಕೆ ದೂರಿನ ರೂಪದಲ್ಲಿ ನೀಡಲಾಗಿದೆ. ಅದರ ಆಧಾರವಾಗಿ ತನಿಖೆ ಮಾಡಬೇಕು ಎಂದು ತಿಳಿಸಿದ್ದಾರೆ.