ಬೆಳಗಾವಿ: ಈ ಹಿಂದೆ ಕ್ವಿಂಟಾಲ್ ಕೊಬ್ಬರಿಗೆ 1250 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಅದಕ್ಕೆ 250 ರೂಪಾಯಿ ಸೇರಿಸಿ 1500 ರೂಪಾಯಿ ಕೊಡುತ್ತೇವೆ. ಜತೆಗೆ ಕೊಬ್ಬರಿ ಖರೀದಿ ಬಗ್ಗೆ ಮನವಿ ಮಾಡಲು ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಬಳಿ ನಿಯೋಗ ಕೊಂಡೊಯ್ಯಲು ಸಿದ್ಧ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು.
ವಿಧಾನಸಭೆಯಲ್ಲಿ ಕೊಬ್ಬರಿ ಬೆಲೆ ಬಗ್ಗೆ ಚರ್ಚೆ ವೇಳೆ ಮಾತನಾಡಿದ ಅವರು, ಐದಾರು ಬಾರಿ ನಾವು ಕೇಂದ್ರಕ್ಕೆ ಪತ್ರ ಬರೆದಿದ್ದೆವು, ಮೊನ್ನೆ ಇನ್ನೊಮ್ಮೆ ಕೂಡ ಪತ್ರ ಬರೆದು ಮನವಿ ಮಾಡಿದ್ದೆವು. ಆದರೆ ಅದಕ್ಕೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 1/4 ರಷ್ಟು ಕೊಬ್ಬರಿ ಕೂಡ ಅವರು ಖರೀದಿ ಮಾಡಿಲ್ಲ, ಬೆಳಗ್ಗೆ ತಾನೇ ನಾನು ಸಿಎಂ ಜತೆ ಮಾತಾಡಿದ್ದೇನೆ. ರಾಜ್ಯ ಸರ್ಕಾರದಿಂದ ಏನಾದರೂ ಕೊಡಬೇಕು ಎಂದು ಮನವಿ ಮಾಡಿದ್ದೇನೆ. ಕೇಂದ್ರ ಸರ್ಕಾರಕ್ಕೆ ನಿಯೋಗದೊಂದಿಗೆ ಹೋಗಲು ಸಿದ್ಧ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು.
ರಾಜ್ಯದಲ್ಲಿ 2 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಇದೆ. ಹೀಗಾಗಿ ವರ್ಷದ ಎಲ್ಲ ಕೊಬ್ಬರಿ ಖರೀದಿ ಮಾಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.
ಈ ವೇಳೆ ಮಧ್ಯಪ್ರದೇಶ ಮಾಡಿದ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರು, ದೇವೇಗೌಡರಿಂದ ಕೇಂದ್ರಕ್ಕೆ ಪತ್ರದ ವ್ಯವಹಾರ ಮಾಡಿದ್ದೇವೆ ಎಂದರು. ಆಗ ನಿಮ್ಮ ಮಗನಿಂದ ಮನವಿ ಮಾಡಿಸಿ ಎಂದು ಕೈ ಸದಸ್ಯರು ಕೂಗಿದರು. ಇದಕ್ಕೆ ಆಕ್ರೋಶಗೊಂಡ ರೇವಣ್ಣ, ನಿಮಗೆ ಮಾನ ಮರ್ಯಾದೆ ಇದ್ದರೆ ಬೆಲೆ ಕೊಡಿಸಿ ಎಂದು ಕಿಡಿಕಾರಿದರು.
ಇದನ್ನೂ ಓದಿ | Belagavi Winter Session: ವಿಧೇಯಕ ಮಂಡನೆ; ಆನ್‌ಲೈನ್ ಗೇಮಿಂಗ್ ಆಡ್ತೀರಾ? ಇನ್ಮುಂದೆ ತೆರಿಗೆ ಕಟ್ಟಿ!
3 ಸಾವಿರ ರೂ. ಪ್ರೋತ್ಸಾಹ ಧನಕ್ಕೆ ಒತ್ತಾಯ
ಶಾಸಕ ಶಿವಲಿಂಗೇಗೌಡ ಮಾತನಾಡಿ, ಶೇ. 70 ಕೊಬ್ಬರಿ ತಿನ್ನಲು ಹೋಗಲ್ಲ, ಆಯಿಲ್‌ಗೆ ಹೋಗುತ್ತೆ. ಹೀಗಾಗಿ ಕೊಬ್ಬರಿ ಬೆಳಗಾರರಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ಧನ ಕೊಡಬೇಕು. ರಾಜ್ಯ ಸರ್ಕಾರ 1250 ರೂ. ಘೋಷಣೆ ಮಾಡಿದೆ. ಬೆಲೆ ಬಿದ್ದಾಗ ಕೇಂದ್ರ ಸರ್ಕಾರ ರೈತರ ಸಹಾಯಕ್ಕೆ ಬರಬೇಕು. ರೈತನ ಸಂಕಷ್ಟ ಯಾವ ರೀತಿ ಇದೆ ಅಂತ ತಿಳಿದಿದ್ದೇನೆ. ಅದರಿಂದ ಮಾತನಾಡುತ್ತಿದ್ದೇನೆ. ರಾಜ್ಯ ಸರ್ಕಾರ ಕೂಡ ಪ್ರೋತ್ಸಾಹ ಧನ ಹಿಂದೆ ಕೊಡುತ್ತಿತ್ತು. ಈಗ 3 ಸಾವಿರ ಸಹಾಯ ಧನ ಕೊಡಬೇಕು ಅಂತ ಒತ್ತಾಯ ಮಾಡುತ್ತೇನೆ. ಸಿಎಂ ಅವರು ಇದಕ್ಕೆ ಉತ್ತರ ಕೊಡಲೇಬೇಕು ಎಂದು ಮನವಿ ಮಾಡಿದರು.
ಶಾಸಕ ಷಡಕ್ಷರಿ ಮಧ್ಯ ಪ್ರವೇಶ ಮಾಡಿ, ಕೊಬ್ಬರಿ ಬೆಲೆ ಕೇಂದ್ರ ಸರ್ಕಾರ ವ್ಯಾಪ್ತಿಗೆ ಬರುತ್ತದೆ, 15 ಸಾವಿರ ಇದ್ದ ಕೊಬ್ಬರಿ 7 ಸಾವಿರಕ್ಕೆ ಬಂದಿದೆ. ರಾಜ್ಯದಲ್ಲಿ ಬರಗಾಲ ಬಂದಿದೆ, ರೈತರು ಯಾವ ರೀತಿ ಬದುಕಬೇಕು. ಇದರಿಂದ ಕೇಂದ್ರ ಸರ್ಕಾರ ಕೊಬ್ಬರಿ ಕೊಂಡುಕೊಳ್ಳುವ ಕೆಲಸ ಮಾಡಬೇಕು. ರಾಜ್ಯ ಸರ್ಕಾರದವರು ಕೇಂದ್ರಕ್ಕೆ ಮನವಿ ಮಾಡುವಂತೆ ಮನವಿ ಮಾಡಬೇಕು ಎಂದರು.
ಶಾಸಕ ಎಚ್.ಡಿ.ರೇವಣ್ಣ ಪ್ರತಿಕ್ರಿಯಿಸಿ, ಕೊಬ್ಬರಿ ಬೆಲೆ ಕಡಿಮೆ ಆಗಿದೆ, ತೆಂಗಿನ ಮರಗಳು ನಾಶ ಆಗುತ್ತಿವೆ. ಕೊಬ್ಬರಿ ಬೆಲೆ ನಿರ್ಧಾರ ಕೇಂದ್ರ ಅಥವಾ ರಾಜ್ಯ ಸರ್ಕಾರದ್ದೋ ನನಗೆ ಗೊತ್ತಿಲ್ಲ, ನಾನು ಅಷ್ಟು ಬುದ್ಧಿವಂತ ಅಲ್ಲ. ತಿಪಟೂರಿನಲ್ಲಿ ಷಡಕ್ಷರಿ ಗೆಲ್ಲಲು ನಮ್ಮ ಸರ್ಕಾರ ಬಂದರೆ 15 ಸಾವಿರ ಕೊಬ್ಬರಿ ಬೆಲೆ ಕೊಡುತ್ತೇವೆ ಎಂದು ಡಿಕೆಶಿ ಹೇಳಿದ್ದರು. ಆದರೆ, ಬೆಲೆ ಹೆಚ್ಚಿಸಿಲ್ಲ. ಚುನಾವಣೆಗಾಗಿ ಆ ಮಾತು ಹೇಳಿದ್ದು, ಈಗ ಕೊಡಲು ಆಗಲ್ಲ, ಸಮಸ್ಯೆ ಇದೆ ಎಂದರೆ ಒಕೆ, ನನಗೆ ಯಾವುದೇ ತಕರಾರು ಇಲ್ಲ ವ್ಯಂಗ್ಯವಾಡಿದರು.
ಇದನ್ನೂ ಓದಿ | Health Card: ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗೆ ಹೊಸ ರೂಪ; ಸಿಎಂ ಚಾಲನೆ
ಮತ್ತೆ ನಿಮ್ಮ ಮಗನಿಂದ ಕೇಂದ್ರಕ್ಕೆ ಮನವಿ ಮಾಡಿಸಿ ಎಂದು ಕಾಂಗ್ರೆಸ್ ಸದಸ್ಯರು ಕೂಗಿದಾಗ, ಮಧ್ಯ ಪ್ರವೇಶ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಒಂದು ಕಾಲದಲ್ಲಿ ಕರ್ನಾಟಕದಿಂದ 28 ಸೀಟ್ ಗೆದ್ದು ಹೋಗುತ್ತಿದ್ದರಲ್ಲಾ, ಯಾವತ್ತಾದರೂ ನೀರಾವರಿ ಬಗ್ಗೆ ಮಾತನಾಡಿದ್ದೀರಾ? ಕೇಂದ್ರ ಹತ್ತಿರ ಮಾತನಾಡಿ ಅಂತ ಹೇಳುತ್ತಿದ್ದೀರಿ? ನೀವು ಕರ್ನಾಟಕದ ರೈತರಿಗೆ ಏನು ಕೊಟ್ಟಿದ್ದೀರಾ ಎಂದು ಕೈ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ