ಮಂಗಳೂರು: ಬಿಹಾರದಲ್ಲಿ ಕಳೆದ ವರ್ಷ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಹಾಗೂ ಬಿಹಾರದ ಪುಲ್ವಾರಿ ಶರೀಫ್ ಪ್ರಕರಣದ ಹಿನ್ನೆಲೆಯಲ್ಲಿ ಎನ್‌ಐಎ (NIA Raid) (ರಾಷ್ಟ್ರೀಯ ತನಿಖಾ ಸಂಸ್ಥೆ) ಬಿಹಾರ, ಕರ್ನಾಟಕ ಮತ್ತು ಕೇರಳದಲ್ಲಿ ನಡೆಸಿದ್ದ ದಾಳಿ ವೇಳೆ ಒಟ್ಟು 17.5 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬುಧವಾರ ಮೂರು ರಾಜ್ಯಗಳಲ್ಲಿ ಎನ್‌ಐಎ ಅಧಿಕಾರಿಗಳ ತಂಡವು ಏಕಕಾಲಕ್ಕೆ ದಾಳಿ ನಡೆಸಿದ್ದವು. ಒಟ್ಟು 85 ಕಡೆ ದಾಳಿ ನಡೆಸಲಾಗಿತ್ತು. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ, ಶಿವಮೊಗ್ಗದ 25 ಕಡೆ ದಾಳಿ ನಡೆಸಿ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಕೇರಳದ ಕಾಸರಗೋಡು, ಮಲ್ಲಾಪುರಂ, ಕೋಝಿಕೊಡ್, ತಿರುವನಂತಪುರಂನಲ್ಲೂ ದಾಳಿ ನಡೆಸಿದ್ದು, ಕೇರಳದಲ್ಲಿ ಗುರುವಾರವೂ ಕೆಲವು ಕಡೆ ಶೋಧ ಮುಂದುವರಿದಿದೆ.
ಇದನ್ನೂ ಓದಿ: Jet crashes: ಚಾಮರಾಜನಗರದಲ್ಲಿ ಜೆಟ್ ಪತನ; ಪ್ಯಾರಾಚೂಟ್ ಮೂಲಕ ಪ್ರಾಣ ಉಳಿಸಿಕೊಂಡ ಇಬ್ಬರು ಪೈಲೆಟ್
ವಿಟ್ಲದ ಫರ್ನಿಚರ್ ಅಂಗಡಿ ಮಾಲೀಕನ ಮನೆ ತೀವ್ರ ತಪಾಸಣೆ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಬುಧವಾರ ಶೋಧ ನಡೆಸಲಾಗಿತ್ತು. ಎನ್‌ಐಎ ತಂಡದವರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದರು. ಪುತ್ತೂರಿನ ಮೂರು ಕಡೆ ಶೋಧ ನಡೆಸಿದ ವೇಳೆ ನಾಲ್ವರು ಸಿಕ್ಕಿ ಬಿದ್ದಿದ್ದರು. ಕೂರ್ನಡ್ಕ, ತಾರಿಪಡ್ಪು, ಕುಂಬ್ರದ ಭಾಗದ ನಾಲ್ವರನ್ನು ಎನ್‌ಐಎ ವಶಕ್ಕೆ ಪಡೆದುಕೊಂಡಿತ್ತು. ಪುತ್ತೂರು ಸಹಿತ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಶೋಧ ನಡೆದಿತ್ತು. ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ
ಮನೆಯೊಂದರ ಶೋಧ ನಡೆಸಲಾಗಿತ್ತು.
ವಿಟ್ಲದಲ್ಲಿ ಫರ್ನಿಚರ್ ಅಂಗಡಿ ಹೊಂದಿರುವ ನೀರಕಟ್ಟೆಯ ಯುವಕನ ಮನೆಗೆ ಬೆಳಗ್ಗೆಯೇ ಎನ್‌ಐಎ ಅಧಿಕಾರಿಗಳ ತಂಡ ದಾಳಿ ನಡೆಸಿ ಸುಮಾರು 2 ತಾಸಿಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿತ್ತು. ಪುತ್ತೂರು ಚಿಕ್ಕಮುಡ್ನೂರು ಗ್ರಾಮದ ಕೆರೆಮೂಲೆ ಎಂಬಲ್ಲಿ ನಾಲ್ಕು ಜೀಪಿನಲ್ಲಿ ಆಗಮಿಸಿದ ಎನ್‌ಐಎ ತಂಡವು ಕೆರೆಮೂಲೆಯಿಂದ ತುಸು ದೂರ ವಾಹನ ನಿಲ್ಲಿಸಿ ಅಲ್ಲಿಂದ ಕೆರೆಮೂಲೆ ಪರಿಸರದಲ್ಲಿ ನಡೆದುಕೊಂಡು ಮುಂದೆ ಹೋಗಿ ವಾಪಸಾಗಿದ್ದರು.
ಭಯೋತ್ಪಾದಕ ಕೃತ್ಯಗಳಿಗೆ ಹವಾಲಾ ಹಣ?
ಭಯೋತ್ಪಾದಕ ಕೃತ್ಯಗಳ ಬಳಕೆಗಾಗಿ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ ಸರಬರಾಜಾಗುತ್ತಿರುವ ಮಾಹಿತಿ ಮೇರೆಗೆ ಹಲವು ಕಡೆ ಶೋಧ ನಡೆಸಲಾಗಿತ್ತು. ದಕ್ಷಿಣ ಭಾರತದ ಪ್ರಬಲ ಸಂಘಟನೆಯಲ್ಲೊಂದಾಗಿದ್ದ, ಈಗ ನಿಷೇಧಕ್ಕೊಳಪಟ್ಟಿರುವ ಪಿಎಫ್ಐ ಸಹ ಇದರಲ್ಲಿ ಭಾಗಿಯಾಗಿರುವ ಶಂಕೆ ಇದ್ದರಿಂದ ಕೆಲವು ಕಡೆ ಪರಿಶೀಲನೆ ನಡೆಸಲಾಗಿತ್ತು. ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು ಸೇರಿ ಹಲವು ಕಡೆಗಳಲ್ಲಿ ಸಾಕಷ್ಟು ಮನೆ, ಕಚೇರಿಗಳ ಜತೆಗೆ ಆಸ್ಪತ್ರೆಯೊಂದರ ಮೇಲೂ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದರು.
ಇದನ್ನೂ ಓದಿ: Bangalore Rain: ಅಬ್ಬಬ್ಬಾ… ಬೆಂಗಳೂರಲ್ಲಿ ದಾಖಲೆ ಬರೆಯಿತು ಮೇ ಮಳೆ; ಇದು 66 ವರ್ಷದಲ್ಲೇ ಅತಿ ಹೆಚ್ಚು!
ಕಳೆದ ಬಾರಿಯೂ ನಡೆದಿತ್ತು ದಾಳಿ
ಈಚೆಗೆ ಹವಾಲಾ, ಫಂಡಿಂಗ್ ಪ್ರಕರಣಗಳಿಗೆ ಸಂಬಂಧಿಸಿ ಬಂಟ್ವಾಳ ಹಾಗೂ ಪುತ್ತೂರಿನಲ್ಲಿ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದರು. ಬಂಟ್ವಾಳ ನಿವಾಸಿ ಮಹಮ್ಮದ್ ಸಿನಾನ್, ಸಜಿಪ ಮೂಡದ ಸರ್ಫ್ರಾಜ್ ನವಾಜ್, ಇಕ್ಬಾಲ್, ಪುತ್ತೂರಿನ ಅಬ್ದುಲ್ ರಫೀಕ್ ಎಂಬುವವರನ್ನು ವಶಕ್ಕೆ ಪಡೆಯಲಾಗಿತ್ತು. ಕೇರಳದ ಕಾಸರಗೋಡಿನ ಕುಂಜತ್ತೂರು ನಿವಾಸಿ ಅಬೀದ್ ಕೆ.ಎಂ. ಎಂಬಾತನನ್ನೂ ಬಂಧಿಸಲಾಗಿತ್ತು.