ಬೆಂಗಳೂರು: ವಿಶ್ವವಿದ್ಯಾಲಯಗಳ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಎಸ್.ಸಿ.ಎಸ್.ಪಿ-ಟಿ.ಎಸ್.ಪಿ ಅಡಿ ಲ್ಯಾಪ್‌ಟಾಪ್ ವಿತರಣೆ (Laptop Distribution) ಮಾಡಲು 230 ಕೋಟಿ ರೂ. ಒದಗಿಸಲು ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಸಿಎಂ ಮಾತನಾಡಿದ್ದು, ಲ್ಯಾಪ್‌ಟಾಪ್ ವಿತರಿಸುವ ಸಂಬಂಧ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ. ಅಡಿ 230 ಕೋಟಿ ರೂ. ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರಿಗೆ ಸಭೆ ನಡೆಯುವಾಗಲೇ ದೂರವಾಣಿ ಮೂಲಕ ಸೂಚನೆ ನೀಡಿದರು.
ಇದನ್ನೂ ಓದಿ | Gruha Lakshmi Scheme : ಆಗಸ್ಟ್ 30ಕ್ಕೆ ಗೃಹಲಕ್ಷ್ಮಿ ದುಡ್ಡು ಬರುತ್ತೆ, ನಿಮ್ಗೂ ಹಣ ಬೇಕೆಂದ್ರೆ ತಕ್ಷಣವೇ ಹೀಗೆ ಮಾಡಿ!
ವಿವಿಗಳಲ್ಲಿರುವ ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್ ವಿತರಿಸಬೇಕಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ರಾಜ್ಯದ ವಿವಿಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಶೇ. 50 ಕ್ಕೂ ಹೆಚ್ಚು ಖಾಲಿ ಇದ್ದು, 1882 ಹುದ್ದೆಗಳಷ್ಟೇ ಭರ್ತಿಯಾಗಿವೆ. ವಿಶ್ವವಿದ್ಯಾಲಯಗಳ ಸಂಪನ್ಮೂಲದಿಂದಲೇ 2865 ಅತಿಥಿ ಉಪನ್ಯಾಸಕರಿಗೆ ವೇತನ ಭರಿಸುವ ಕಾರಣ, ಅವರಿಗೆ ಆರ್ಥಿಕ ಹೊರೆಯಾಗಿದೆ ಎಂಬುದನ್ನು ಕುಲಪತಿಗಳು ಮತ್ತು ಅಧಿಕಾರಿಗಳು ಮುಖ್ಯಮಂತ್ರಿಯವರ ಗಮನಕ್ಕೆ ತಂದರು.
ವಿವಿಗಳು ವಿಭಜನೆಯಾದರೂ ಹಳೆಯ ವಿವಿಗಳು ಮಾತ್ರ ನಿವೃತ್ತಿ ವೇತನ ಪಾವತಿಸುತ್ತಿವೆ. ಇದರಿಂದ ಹಳೆಯ ವಿವಿಗಳ ಆರ್ಥಿಕ ಹೊರೆ ಹೆಚ್ಚಾಗಿದೆ. ಪ್ರಸಕ್ತ ಆಯವ್ಯಯದಲ್ಲಿ ಒಟ್ಟಾರೆಯಾಗಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ 5470 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, 2474 ಕೋಟಿ ರೂ. ಹೆಚ್ಚುವರಿ ಅನುದಾನದ ಅಗತ್ಯವಿದೆ ಎಂದು ಕುಲಪತಿಗಳು ಮುಖ್ಯಮಂತ್ರಿಗಳ ಬಳಿ ಸಮಸ್ಯೆ ಹೇಳಿಕೊಂಡರು.
ಇದನ್ನೂ ಓದಿ | Chaluvaraya Swami : ಕೃಷಿ ಸಚಿವರ ವಿರುದ್ಧ ನಕಲಿ ಲಂಚ ಪತ್ರ ಸೃಷ್ಟಿ: ಇಬ್ಬರಿಗೆ ಮೂರು ದಿನ ಪೊಲೀಸ್ ಕಸ್ಟಡಿ
ಆಯವ್ಯಯ ಹಂಚಿಕೆ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ವೆಚ್ಚ ಹೆಚ್ಚಾಗುತ್ತಿದೆ. ಇದರಿಂದ ನಾವು ಗುಣಮಟ್ಟದ ಶಿಕ್ಷಣವನ್ನು ನಿರೀಕ್ಷಿಸಲು ಹೇಗೆ ಸಾಧ್ಯ? ಇದಲ್ಲದೆ ಉನ್ನತ ಶಿಕ್ಷಣ ಇಲಾಖೆಯ ಆಯವ್ಯಯದಲ್ಲಿ ಶೇ. 88 ರಷ್ಟು ಅನುದಾನ ವೇತನಕ್ಕೆ ಬಳಕೆಯಾಗುತ್ತಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯು ಕೈಗಾರಿಕೋದ್ಯಮಗಳ ಬೇಡಿಕೆಗೆ ಅನುಗುಣವಾದ ಪಠ್ಯಕ್ರಮ ರೂಪಿಸಿ, ಎಂಜಿನಿಯರಿಂಗ್ ಪದವೀಧರರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸಲು ಅನುವಾಗುವಂತಹ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಮುಖ್ಯಮಂತ್ರಿ ಸೂಚಿಸಿದರು.