Site icon Vistara News

Bengaluru Rain: ಮೃತ ಯುವತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ; ಅಂಡರ್ ಪಾಸ್‌ ಸರಿಪಡಿಸುತ್ತೇವೆ: ಸಿಎಂ

CM Siddaramaiah visit KR circal

ಬೆಂಗಳೂರು: ನಾವು ಈಗಷ್ಟೇ ಅಧಿಕಾರಕ್ಕೆ ಬಂದಿದ್ದೇವೆ. ಬೆಂಗಳೂರಿನಲ್ಲಿ ಸಾಕಷ್ಟು ಅವೈಜ್ಞಾನಿಕ ಅಂಡರ್ ಪಾಸ್‌ಗಳಿವೆ. ನಾವು ಅವುಗಳನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ. ಅವರು ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ಭೇಟಿ ನೀಡಿ ಬೆಂಗಳೂರಿನ ಕೆ.ಆರ್‌. ಸರ್ಕಲ್‌ ಬಳಿ ಇರುವ ಅಂಡರ್‌ ಪಾಸ್‌ನಲ್ಲಿ ಮಳೆ (Bengaluru Rain) ನೀರಿಗೆ ಸಿಲುಕಿ ಮೃತಪಟ್ಟ ಯುವತಿಯ ಕುಟುಂಬದವರೊಂದಿಗೆ ಮಾತನಾಡಿದ್ದು, ಕುಟುಂಬದವರಿಗೆ 5 ಲಕ್ಷ ಪರಿಹಾರವನ್ನು ಕೊಡುವುದಾಗಿ ಘೋಷಣೆ ಮಾಡಿದ್ದಾರೆ.

ಪ್ರತಿ ವರ್ಷ ಬೆಂಗಳೂರಿನಲ್ಲಿ ಮಳೆ ಅವಾಂತರಗಳು ಮುಂದುವರಿದಿದ್ದು, ಪ್ರಾಣಹಾನಿಗಳು ಆಗುತ್ತಲೇ ಇರುತ್ತವೆ. ಭಾನುವಾರ (ಮೇ 21) ಮಧ್ಯಾಹ್ನದ ವೇಳೆಗೆ ಭಾರಿ ಮಳೆ ಸುರಿದಿದ್ದು, ಕೆ.ಆರ್‌. ಸರ್ಕಲ್‌ ಬಳಿ ಇರುವ ಅಂಡರ್‌ ಪಾಸ್‌ ಜಲಾವೃತಗೊಂಡಿದ್ದು, ಕಾರಿನೊಳಗಿದ್ದ ಯುವತಿಯೊಬ್ಬಳು ಮೃತಪಟ್ಟಿದ್ದರೆ, ಆರು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೆ.ಆರ್‌. ಸರ್ಕಲ್‌ ಅಂಡರ್‌ ಪಾಸ್‌ ಬಳಿ ಬಂದು ಪರಿಶೀಲನೆ ನಡೆಸಿ, ಅಲ್ಲಿಂದ ಆಸ್ಪತ್ರೆಗೆ ತೆರಳಿ ವಿಚಾರಿಸಿದ್ದಾರೆ.

ಇದನ್ನೂ ಓದಿ: Weather Report: ಬೆಂಗಳೂರಲ್ಲಿ ಬಿರುಗಾಳಿ ಮಳೆ; ಅಂಡರ್‌ಪಾಸ್‌ನಡಿ ಸಿಲುಕಿ ಮಹಿಳೆ ಸಾವು, ಐವರು ಪಾರು

ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಅವರು ಮೃತಳ ಕುಟುಂಬಸ್ಥರ ಆರೋಗ್ಯ ವಿಚಾರಿಸಿದರು.

ರಾಜಕಾಲುವೆ ಒತ್ತುವರಿ ತೆರವು

ಬೆಂಗಳೂರಿನಲ್ಲಿ ಮಳೆ ಅವಾಂತರ ಹೆಚ್ಚಾಗುವ ಹಿನ್ನೆಲೆಯಲ್ಲಿ ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ರಾಜಕಾಲುವೆ ಒತ್ತುವರಿ ತೆರವಿಗೆ ಚಾಲನೆ ನೀಡಿದ್ದೆ. ಆದರೆ, ಬಳಿಕ ಬಂದ ಸರ್ಕಾರ ಆ ಕೆಲಸವನ್ನು ಮಾಡಿಲ್ಲ. ನಾನು ಈಗ ಮತ್ತೆ ಅಧಿಕಾರಕ್ಕೆ ಬಂದಿದ್ದು, ಪುನಃ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ದುರಸ್ತಿ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಬ್ಯಾರಿಕೇಡ್‌ ಎಳೆಯದ ಬಗ್ಗೆ ಸಿದ್ದರಾಮಯ್ಯ ಗರಂ

ಅಂಡರ್ ಪಾಸ್‌ನಲ್ಲಿ ನೀರು ಹೋಗಲ್ಲ ಅಂತ ಗೊತ್ತಾದ ಬಳಿಕವೂ ಯಾಕೆ ಬ್ಯಾರಿಕೇಡ್ ಅಡ್ಡ ಎಳೆದಿಲ್ಲ? ಮಳೆ ವಾತಾವರಣ ಇದ್ದಾಗ ನಿರ್ಲಕ್ಷ್ಯ ವಹಿಸಿದ್ದು ಸರಿಯಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಚಾರಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆ ಪಾಯಿಂಟ್‌ನಲ್ಲಿ ಇದ್ದ ಟ್ರಾಫಿಕ್ ಪೊಲೀಸ್ ಏನು ಮಾಡ್ತಿದ್ದ ಎಂದು ಪ್ರಶ್ನೆ ಮಾಡಿದ್ದು, ತುಂಬಾ ಸಿಟ್ಟಾಗಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಯುವಕನ ಜತೆ ಬಿಜೆಪಿ ನಾಯಕನ ಪುತ್ರಿ ವಿವಾಹ, ಜಾಲತಾಣಗಳಲ್ಲಿ ಆಕ್ರೋಶದ ಬೆನ್ನಲ್ಲೇ ಮದುವೆ ರದ್ದು

ಮೃತರಿಗೆ ಐದು ಲಕ್ಷ ಪರಿಹಾರ ಘೋಷಣೆ

ಯುವತಿ ಮಳೆ ನೀರಿನಿಂದ ಮುಳುಗಿ ಮೃತಪಟ್ಟಿದ್ದರೆ, ಉಳಿದವರು ಪಾರಾಗಿದ್ದಾರೆ. ಹೀಗಾಗಿ ಮೃತಳ ಕುಟುಂಬದವರಿಗೆ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುತ್ತದೆ. ಉಳಿದವರಿಗೆ ಏನೂ ಆಗಿಲ್ಲ. ಅವರ ಚಿಕಿತ್ಸೆಗೆ ಆಸ್ಪತ್ರೆ ಖರ್ಚು ಇದ್ದರೆ, ಅದನ್ನು ಸರ್ಕಾರ ಭರಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಆಸ್ಪತ್ರೆಯಿಂದ ನಿರ್ಲಕ್ಷ್ಯ ಆಗಿದ್ದರೆ ಕ್ರಮ

ತೀವ್ರ ಅಸ್ವಸ್ಥಗೊಂಡಿದ್ದ ಯುವತಿ ಭಾನುರೇಖಾರನ್ನು ಆಸ್ಪತ್ರೆಗೆ ಕರೆತಂದರೆ ವೈದ್ಯರು ಸಕಾಲಕ್ಕೆ ಚಿಕಿತ್ಸೆ ನೀಡಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಸ್ಪತ್ರೆಯಿಂದ ನಿರ್ಲಕ್ಷ್ಯ ಆಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ರೋಗಿ ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ದಾಖಲಾದ ಕೂಡಲೇ ಇಸಿಜಿ ಮಾಡಲಾಗಿದೆ. ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಳು ಎಂದು ವೈದ್ಯರು ಹೇಳಿದ್ದಾರೆ. ಏನೇ ಆಗಿದ್ದರೂ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?; ಇಲ್ಲಿದೆ ವಿಡಿಯೊ

ಅಂಡರ್‌ ಪಾಸ್‌ ಕೆಳಗೆ ನಿಲ್ಲಿಸಬಾರದಿತ್ತು: ಸಿಎಂ ಸಿದ್ದರಾಮಯ್ಯ

ಕಾರಿನ ಚಾಲಕ ಮಳೆ ಎಂಬ ಕಾರಣಕ್ಕೆ ಅಂಡರ್‌ ಪಾಸ್‌ ಕೆಳಗೆ ನಿಲ್ಲಿಸಿದ್ದಾನೆ. ಸಾಮಾನ್ಯವಾಗಿ ಮಳೆ ಬಂದಾಗ ಯಾರೂ ಅಂಡರ್‌ಪಾಸ್‌ನಲ್ಲಿ ಹೋಗುವುದಿಲ್ಲ. ಆದರೂ ಈ ಚಾಲಕ ಅಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಹೀಗೆ ಹೋಗಬಾರದಿತ್ತು. ಈ ವೇಳೆ ನೀರು ತುಂಬಿ ಸಮಸ್ಯೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿವರಣೆ ನೀಡಿದ್ದಾರೆ.

ಅಂಡರ್‌ಪಾಸ್‌ನಲ್ಲಿ ಈಜಿದ ಪೊಲೀಸ್‌; ವಿಡಿಯೊ ಇಲ್ಲಿದೆ

ಅಂಡರ್‌ಪಾಸ್‌ನಲ್ಲಿ ಕಾರನ್ನು ನಿಲ್ಲಿಸದೆ ಮುಂದಕ್ಕೆ ಚಲಾಯಿಸಿಕೊಂಡು ಹೋಗದ ಕಾರಣ ಕಾರಿನೊಳಗೆ ನೀರು ತುಂಬಿಕೊಂಡಿದೆ. ಒಳಗಿದ್ದವರಿಗೆ ಬಾಗಿಲು ತೆಗೆಯಲೂ ಆಗದೇ ಒಳಗೆ ಸಿಲುಕಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿದ್ದ ಭಾನುರೇಖಾ ಗಂಭೀರವಾಗಿದ್ದಾರೆ. ಉಳಿದವರನ್ನು ರಕ್ಷಣೆ ಮಾಡಿ, ಭಾನುರೇಖಾ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆತರಲಾಯಿತಾದರೂ ಪರೀಕ್ಷೆ ಮಾಡುವುದರೊಳಗೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆಂದು ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಳೆ ಅವಘಡ ಪ್ರದೇಶಕ್ಕೆ ಸಿಎಂ ಭೇಟಿ

ಇದನ್ನೂ ಓದಿ: Accident compensation : ಅಪಘಾತದಿಂದ ಕಾಲು ಕಳೆದುಕೊಂಡು, ನಿರುದ್ಯೋಗಿಯಾದ ವ್ಯಕ್ತಿಗೆ 1.5 ಕೋಟಿ ರೂ. ಪರಿಹಾರ

ಪೊಲೀಸರಿಂದ ದಾಖಲೆ ಪರಿಶೀಲನೆ

ಅಸ್ವಸ್ಥ ಯುವತಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲಾಗಿಲ್ಲ ಎಂಬ ಆರೋಪ ಬಂದಿರುವುದರಿಂದ ಆಸ್ಪತ್ರೆಗೆ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿ ವಿಚಾರಣೆ ಕೈಗೊಂಡಿದೆ.

Exit mobile version