Site icon Vistara News

Captain Pranjal: ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬಕ್ಕೆ 50 ಲಕ್ಷ ಪರಿಹಾರದ ಚೆಕ್‌ ಹಸ್ತಾಂತರ

Captain Pranjal family

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಪಾಕ್‌ ಮೂಲದ ಭಯೋತ್ಪಾದಕರ ಜತೆಗೆ ಗುಂಡಿನ ಕಾಳಗದಲ್ಲಿ (Rajouri Encounter) ಮಡಿದ ಕರ್ನಾಟಕದ ವೀರ ಯೋಧ ಪ್ರಾಂಜಲ್‌ (Captain Pranjal) ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಘೋಷಿಸಿದ್ದ 50 ಲಕ್ಷ ರೂ. ಪರಿಹಾರಧನವನ್ನು ಮಂಗಳವಾರ ಹಸ್ತಾಂತರಿಸಲಾಗಿದೆ. ಜಿಲ್ಲಾಧಿಕಾರಿ ದಯಾನಂದ್ ಅವರು ಅವರು ಪರಿಹಾರಧನದ ಚೆಕ್‌ ಅನ್ನು ಮೃತ ಯೋಧ ಪ್ರಾಂಜಲ್‌ ಕುಟುಂಬಸ್ಥರಿಗೆ ನೀಡಿದ್ದಾರೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು, ನಮ್ಮ ಸರ್ಕಾರ ಘೋಷಿಸಿದಂತೆ ಹುತಾತ್ಮ ಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ಹಸ್ತಾಂತರಿಸಲಾಗಿದೆ. ಪ್ರಾಣವನ್ನು ಪಣಕ್ಕೆ ಇಟ್ಟು ದೇಶ ಕಾಯುವ ಯೋಧರ ಬಗ್ಗೆ ನಮಗೆ ಅಪಾರವಾದ ಗೌರವ-ಅಭಿಮಾನ ಇದೆ, ಅಷ್ಟೇ ಗೌರವ ಮತ್ತು ಕಾಳಜಿ ಯೋಧರ ಕುಟುಂಬ ವರ್ಗದ ಬಗ್ಗೆಯೂ ಇದೆ.

ಇದನ್ನೂ ಓದಿ | CM Siddaramaiah : ಸಿದ್ದರಾಮಯ್ಯರಿಂದ ಮುಸ್ಲಿಂ ಓಲೈಕೆ ಎಂದ ಬಿಜೆಪಿ; ಹೇಳಿದ್ದರಲ್ಲಿ ತಪ್ಪಿಲ್ಲ ಎಂದ ಸಿಎಂ!

ಯೋಧರ ಸಾವು – ನೋವು ಮುಂದಿಟ್ಟುಕೊಂಡು ರಾಜಕಾರಣ ಮಾಡುವವರು ನಾವಲ್ಲ. ಕೆಲವರು ರಾಜಕೀಯ ದುರುದ್ದೇಶದಿಂದ ಸುಳ್ಳು ಸುದ್ದಿ ಸೃಷ್ಟಿಸಿ ಅಪಪ್ರಚಾರ ಮಾಡುವದರಲ್ಲಿಯೇ ವಿಕೃತ ಆನಂದ ಪಡುತ್ತಿದ್ದಾರೆ. ಅಂತಹವರಿಗೆ ದೇವರು ಸದ್ಬುದ್ಧಿ ನೀಡಲಿ ಎಂದಷ್ಟೇ ಹಾರೈಸಬಲ್ಲೆ ಎಂದು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದ ರಜೌರಿಯಲ್ಲಿ ಪಾಕ್‌ ಮೂಲದ ಭಯೋತ್ಪಾದಕರ ಜತೆಗೆ ಗುಂಡಿನ ಕಾಳಗದಲ್ಲಿ (Rajouri Encounter) ಕರ್ನಾಟಕದ ವೀರ ಯೋಧ ಪ್ರಾಂಜಲ್‌ (Captain Pranjal) ಮೃತಪಟ್ಟಿದ್ದರು. ಇವರ ಮನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಸಮೀಪದ ನಿಸರ್ಗ ಬಡಾವಣೆಯಲ್ಲಿದೆ. ಯೋಧನ ಮನೆಯ ಆವರಣದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಸಂಸ್ಕಾರ ನಡೆದಿತ್ತು. ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವಾರು ಗಣ್ಯರು ಅಲ್ಲಿಗೆ ಭೇಟಿ ನೀಡಿ, ಹುತಾತ್ಮ ಯೋಧನ ಅಂತಿಮ ದರ್ಶನ ಪಡೆದಿದ್ದರು. ಸಂಬಂಧಿಕರು ಹಾಗೂ ಸಹಸ್ರಾರು ಸಾರ್ವಜನಿಕರ ಉಪಸ್ಥಿತಿಯಲ್ಲಿ ಅಂತ್ಯಸಂಸ್ಕಾರ ನಡೆದಿತ್ತು.

ಹುತಾತ್ಮ ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌

ಇದನ್ನೂ ಓದಿ | Elephant Arjuna: ಮಾವುತರಿಗೆ ಪ್ರತಿ ವರ್ಷ ಅರ್ಜುನ ಹೆಸರಲ್ಲಿ ಪ್ರಶಸ್ತಿ ನೀಡಿ: ದಿನೇಶ್‌ ಗೂಳಿಗೌಡ ಒತ್ತಾಯ

ಉಗ್ರರ ಜತೆಗಿನ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಬಡಿದಾಡಿ ಪ್ರಾಣ ತ್ಯಾಗ ಮಾಡಿದ ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ ಅವರು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ (MRPL) ನಿವೃತ್ತ ಆಡಳಿತ ನಿರ್ದೇಶಕ ವೆಂಕಟೇಶ್ ಅವರ ಏಕೈಕ ಪುತ್ರ. (MRPL) ನ ಮಾಜಿ ನಿರ್ದೇಶಕ ಎಂ.ವೆಂಕಟೇಶ್ ಅವರ ಪುತ್ರ. ಎಂಆರ್‌ಪಿಎಲ್‌ನ ಬಳಿಯೇ ಇರುವ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲೇ ಪ್ರಾಂಜಲ್‌ ವಿದ್ಯಾಭ್ಯಾಸ ಮಾಡಿದ್ದರು. ಕರಾವಳಿಯವರೇ ಆದ ವೆಂಕಟೇಶ್ ಅವರು ಮೇ 31ರಂದು ಸೇವಾ ನಿವೃತ್ತರಾಗಿದ್ದರು. ಕೆಲಕಾಲ ಮೈಸೂರಲ್ಲೂ ಇದ್ದರು. ತಂದೆಯ ನಿವೃತ್ತ ಸಮಾರಂಭಕ್ಕೆ ಪ್ರಾಂಜಲ್ ಆಗಮಿಸಿದ್ದರು. ನಿವೃತ್ತಿ ಬಳಿಕ ವೆಂಕಟೇಶ್ ಅವರು ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version