ಪ್ರಯಾಗರಾಜ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳಿಯ (ಎಬಿಕೆಎಂ) ನಾಲ್ಕು ದಿನಗಳ ಸಭೆ ಭಾನುವಾರ ಪ್ರಯಾಗರಾಜ್‌ನಲ್ಲಿ ಆರಂಭವಾಗಲಿದ್ದು, 2024ರ ಮಾರ್ಚ್ ವೇಳೆಗೆ ಶಾಖೆಗಳ ಸಂಖ್ಯೆಯನ್ನು 1 ಲಕ್ಷಕ್ಕೆ ಹೆಚ್ಚಿಸುವುದೂ ಸೇರಿ ಅನೇಕ ವಿಚಾರಗಳ ಚರ್ಚೆ ನಡೆಯಲಿದೆ.
ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳಿಯ ಸಭೆಯು ಪ್ರಯಾಗರಾಜ್ ಜಿಲ್ಲೆಯ ಟ್ರಾನ್ಸ್ ಯಮುನಾ ಪ್ರದೇಶದ ಗೌಹಾನಿಯಾ ಬಳಿಯ ವಾತ್ಸಲ್ಯ ಸಂಸ್ಥೆಯಲ್ಲಿ ನಡೆಯುತ್ತಿದೆ. ಅಕ್ಟೋಬರ್ 19 ರಂದು ಈ ಸಭೆ ಮುಕ್ತಾಯವಾಗಲಿದೆ.
ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ್ ಈ ಕುರಿತು ಮಾಹಿತಿ ನೀಡಿದ್ದು, ಸಂಘದ ಎಲ್ಲಾ 45 ಪ್ರಾಂತಗಳ ಸಂಘಚಾಲಕರು, ಕಾರ್ಯವಾಹರು, ಪ್ರಚಾರಕರು, ಸಹ ಪ್ರಾಂತಕಾರ್ಯವಾಹ, ಸಹ ಪ್ರಾಂತಪ್ರಚಾರಕರು ಈ ವಾರ್ಷಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹ ಸರಕಾರ್ಯವಾಹರು ಸೇರಿ ಅಖಿಲ ಭಾರತ ಮಟ್ಟದ ಇತರ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ತಿಳಿಸಿದರು.
ಮಾರ್ಚ್‌ನಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ರೂಪಿಸಲಾದ ವಾರ್ಷಿಕ ಕಾರ್ಯಯೋಜನೆಯ ಪ್ರಗತಿಯನ್ನು ಈ ನಾಲ್ಕು ದಿನಗಳ ಸಭೆಯಲ್ಲಿ ಪರಾಮರ್ಶಿಸಲಾಗುವುದು. ಸಂಘಟನಾ ಕಾರ್ಯಗಳ ವಿಸ್ತರಣೆ ಮತ್ತು ಸಂಘ ಶಿಕ್ಷಾ ವರ್ಗದ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಇದರ ಜತೆಗೆ, ದೇಶದ ಪ್ರಮುಖ ಸಮಕಾಲೀನ ಸಮಸ್ಯೆಗಳ ಕುರಿತು ಕೂಡ ಚರ್ಚೆ ನಡೆಯಲಿದೆ.
ಇತ್ತೀಚೆಗೆ ವಿಜಯದಶಮಿಯ ಭಾಷಣದಲ್ಲಿ ಸರಸಂಘಚಾಲಕ ಮೋಹನ್ ಭಾಗವತ್ ಪ್ರಸ್ತಾಪಿಸಿದ ಪ್ರಮುಖ ವಿಷಯಗಳ ಅನುಷ್ಠಾನದ ಮಾರ್ಗಗಳು ಮತ್ತು ವಿಧಾನಗಳನ್ನು ಕುರಿತು ಸಭೆಯು ಚರ್ಚಿಸುತ್ತದೆ. RSS ಸ್ಥಾಪನೆಯಾಗಿ 2025ಕ್ಕೆ ನೂರು ವರ್ಷಗಳನ್ನು ಪೂರ್ಣಗೊಳಿಸಲಿದೆ. ದೇಶಾದ್ಯಂತ ತನ್ನ ಶಾಖೆಗಳ ಸಂಖ್ಯೆಯನ್ನು ವಿಸ್ತರಿಸುವ ಯೋಜನೆಗಳನ್ನು ಸಭೆ ಪರಿಗಣಿಸುತ್ತದೆ. ಪ್ರಸ್ತುತ 55,000 ಶಾಖೆಗಳಿದ್ದು, ಮಾರ್ಚ್ 2024ರ ವೇಳೆಗೆ ಅದರ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಏರಿಸುವ ಗುರಿಯನ್ನು ಹೊಂದಿದೆ. ಇದೆಲ್ಲದರ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದರು.
ಇದನ್ನೂ ಓದಿ | ಪಿಎಫ್ಐ ಹಿಟ್ಲಿಸ್ಟ್: ಕೇರಳ ಆರ್ಎಸ್ಎಸ್ನ ಐವರು ಪ್ರಮುಖರಿಗೆ ಕೇಂದ್ರದಿಂದ ವೈ ಶ್ರೇಣಿ ಭದ್ರತೆ