Site icon Vistara News

Gulihatty Shekhar: ಜಾತಿ ಕಾರಣಕ್ಕೆ ಕಚೇರಿ ಪ್ರವೇಶ ಸಿಗಲಿಲ್ಲ ಎಂಬ ಗೂಳಿಹಟ್ಟಿ ಆರೋಪ ತಳ್ಳಿಹಾಕಿದ ಆರ್‌ಎಸ್‌ಎಸ್‌

Goolihatti shekhar

ಬೆಂಗಳೂರು: ಜಾತಿ ಕಾರಣಕ್ಕೆ ನಾಗಪುರದ ಆರ್‌ಎಸ್‌ಎಸ್‌ ಕಚೇರಿಯೊಳಗೆ ತಮಗೆ ಪ್ರವೇಶ ನಿರಾಕರಿಸಲಾಯಿತು ಎಂಬ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್‌ (Gulihatty D Shekhar) ಆರೋಪವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಸ್ಪಷ್ಟವಾಗಿ ತಳ್ಳಿಹಾಕಿದೆ. ನಾಗಪುರದಲ್ಲಿ ಸಂಘ ಕಾರ್ಯಾಲಯವನ್ನು ನೋಡಲು ಬಂದವರ ಹೆಸರನ್ನು ನೋಂದಾಯಿಸಿ ಪ್ರವೇಶ ನೀಡುವ ವ್ಯವಸ್ಥೆಯೇ ಇಲ್ಲ. ಇದೊಂದು ನಿರಾಧಾರದ ಹಾಗೂ ಹುರುಳಿಲ್ಲದ ಆರೋಪ ಎಂದು ಆರ್‌ಎಸ್‌ಎಸ್‌ ತಿಳಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಆರ್‌ಎಸ್‌ಎಸ್‌ ದಕ್ಷಿಣ-ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಅವರು, ಹೊಸದುರ್ಗದ ಮಾಜಿ ಶಾಸಕರಾದ ಗೂಳಿಹಟ್ಟಿ ಶೇಖರ್ ಅವರ ಆಡಿಯೊ ಹೇಳಿಕೆಯಲ್ಲಿ ‘ತಮಗೆ ಜಾತಿ ಕಾರಣಕ್ಕೆ ನಾಗಪುರದ ಡಾ. ಹೆಡಗೇವಾರ್ ಸ್ಮಾರಕ ಕಟ್ಟಡದಲ್ಲಿ ಪ್ರವೇಶ ನಿರಾಕರಿಸಲಾಯಿತು’ ಎಂದು ಆರೋಪಿಸಿದ್ದಾರೆ. ಆದರೆ, ನಾಗಪುರದಲ್ಲಿ ಸಂಘ ಕಾರ್ಯಾಲಯ ನೋಡಲು ಬಂದವರ ಹೆಸರನ್ನು ನೋಂದಾಯಿಸಿ ಪ್ರವೇಶ ನೀಡುವ ವ್ಯವಸ್ಥೆಯೇ ಇಲ್ಲ. ಇದೊಂದು ನಿರಾಧಾರದ ಹಾಗೂ ಹುರುಳಿಲ್ಲದ ಆರೋಪ ಎಂದು ಹೇಳಿದ್ದಾರೆ.

ಆರೆಸ್ಸೆಸ್‌ನ ಯಾವುದೇ ಕಚೇರಿಯಲ್ಲಾಗಲಿ ಅಥವಾ ಈ ರೀತಿಯ ಸ್ಮಾರಕ ಕಟ್ಟಡಗಳಲ್ಲಾಗಲಿ, ಎಲ್ಲರಿಗೂ ಮುಕ್ತ ಪ್ರವೇಶವಿದೆ. ಎಲ್ಲಾ ಜಾತಿ, ವರ್ಗದ ಸಾವಿರಾರು ಜನ ನಿತ್ಯ ಬಂದು ಹೋಗುತ್ತಲೇ ಇದ್ದಾರೆ. ಯಾರಿಗೂ ಪ್ರವೇಶ ನಿರಾಕರಣೆಯ ಪ್ರಶ್ನೆಯೇ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ | Pralhad Joshi: ರಾಜಸ್ಥಾನದಲ್ಲಿ ಬಿಜೆಪಿ ಗೆಲುವು; ಪ್ರಲ್ಹಾದ್‌ ಜೋಶಿ ಉಸ್ತುವಾರಿಯಲ್ಲಿ ಮತ್ತೊಂದು ಯಶಸ್ಸು

ರಾಜ್ಯ ವಿಧಾನಸಭಾ ಚುನಾವಣೆಗೆ ನಾಲ್ಕು ತಿಂಗಳು ಮೊದಲು ಈ ಘಟನೆ ನಡೆದಿತ್ತು ಎನ್ನುವ ಗೂಳಿಹಟ್ಟಿ ಶೇಖರ್ ಅವರು, ಆನಂತರ ಅನೇಕ ಸಂಘದ ಪ್ರಮುಖರನ್ನು ಭೇಟಿಯಾದರೂ ಎಲ್ಲಿಯೂ ತಮಗೆ ಹೀಗಾಗಿತ್ತು ಎಂಬ ಬಗ್ಗೆ ಹೇಳಿರಲಿಲ್ಲ. ಈಗ 10 ತಿಂಗಳ ನಂತರ ಈ ರೀತಿ ಹೇಳಿಕೆ ನೀಡಿರುವುದು ಆಶ್ಚರ್ಯಕರವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಎಲ್ಲರನ್ನೂ ಸದಾ ತೆರೆದ ಮನಸ್ಸಿನಿಂದ ಸ್ವಾಗತಿಸುತ್ತದೆ ಎಂದು ತಿಪ್ಪೇಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್‌ ಆರೋಪವೇನು?

ನಾಗಪುರದ ಆರ್‌ಎಸ್‌ಎಸ್‌ ಕಚೇರಿ ಭೇಟಿಯ ಸಂದರ್ಭದಲ್ಲಿ ಉಂಟಾದ ಕಹಿ ಅನುಭವದ ಬಗ್ಗೆ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್‌ ಅವರು ಆಡಿಯೊ ರೂಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಪರಿಶಿಷ್ಟ ಜಾತಿ ವ್ಯಕ್ತಿ ಎಂದು ಸ್ಪಷ್ಟವಾಗಿದ್ದರಿಂದ ನನಗೆ ನಾಗಪುರದ ಆರ್‌ಎಸ್‌ಎಸ್‌ನ ಹೆಡಗೇವಾರ್ ವಸ್ತುಸಂಗ್ರಹಾಲಯ ಪ್ರವೇಶ ನಿರಾಕರಿಸಲಾಗಿತ್ತು. ಇದಕ್ಕೆ ಕಾರಣವೇನು ಎಂಬುವುದು ಸ್ಪಷ್ಟಪಡಿಸಬಲ್ಲಿರಾ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಗೂಳಿಹಟ್ಟಿ ಶೇಖರ್‌ ಪ್ರಶ್ನಿಸಿದ್ದರು.

ಚುನಾವಣೆ ಘೋಷಣೆಯಾಗುವುದಕ್ಕೂ ಮೂರು ತಿಂಗಳ ಹಿಂದೆ ಮಹಾರಾಷ್ಟ್ರದ ನಾಗಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಗೆ ಭೇಟಿ ನೀಡಿದ್ದೆ. ಪರಿಶಿಷ್ಟ ಜಾತಿಗೆ ಸೇರಿದವನಾದರೂ ಹಿಂದುತ್ವದ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಖುಷಿಯಿಂದ ಅಲ್ಲಿಗೆ ತೆರಳಿದ್ದೆ. ಆದರೆ, ಹೆಡಗೇವಾರ್ ವಸ್ತುಸಂಗ್ರಹಾಲಯ ಪ್ರವೇಶದ ಸಂದರ್ಭದಲ್ಲಿ ಕಹಿ ಅನುಭವ ಉಂಟಾಯಿತು ಎಂದು ಬೇಸರ ಹೊರಹಾಕಿದ್ದರು.

‘ಮ್ಯೂಸಿಯಂ ವೀಕ್ಷಣೆಗೆ ಬರುವವರ ಮಾಹಿತಿಯನ್ನು ಪ್ರವೇಶದ್ವಾರದಲ್ಲಿ ಸಂಗ್ರಹಿಸಲಾಗುತ್ತಿತ್ತು. ಪುಸ್ತಕದಲ್ಲಿ ಹೆಸರು ನೋಂದಾಯಿಸಿ ಒಳಗೆ ಹೆಜ್ಜೆ ಇಡುತ್ತಿದ್ದಾಗ ವ್ಯಕ್ತಿಯೊಬ್ಬರು ತಡೆದರು. ಪರಿಶಿಷ್ಟ ಜಾತಿಗೆ ಸೇರಿದವರಿಗೆ ಪ್ರವೇಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ನನ್ನೊಂದಿಗೆ ಇದ್ದ ಮೋಹನ್ ವೈದ್ಯ ಹಾಗೂ ಮಂಜು ಎಂಬುವರು ಮಾತ್ರ ಒಳಗೆ ಹೋದರು. ನಾನು ಹೊರಗೆ ಕಾಯುತ್ತ ಕುಳಿತುಕೊಳ್ಳಬೇಕಾಯಿತು ಎಂದು ಹೇಳಿದ್ದರು.

ಇದನ್ನೂ ಓದಿ | CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

‘ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಪರಿಶಿಷ್ಟ ಜಾತಿಗೆ ಸೇರಿದ ಎ.ನಾರಾಯಣಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ನಾರಾಯಣಸ್ವಾಮಿ ಹಾಗೂ ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಇಲ್ಲಿಗೆ ಪ್ರವೇಶ ಪಡೆದಿದ್ದಾರೆ ಎಂಬ ಅನುಮಾನ ಇದೆ. ನನ್ನನ್ನು ಒಳಗೆ ಬಿಡದಿರುವ ಬಗ್ಗೆ ಬಿ.ಎಲ್.ಸಂತೋಷ್ ಅವರು ಸ್ಪಷ್ಟನೆ ನೀಡಬಲ್ಲಿರಾ ಎಂದು ಗೂಳಿಹಟ್ಟಿ ಪ್ರಶ್ನಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version