ಜೈಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದ ನಾಯಕರಾಗಿರುವ ದತ್ತಾತ್ರೇಯ ಹೊಸಬಾಳೆ (Dattatreya Hosabale) ಅವರು, ”ನಾವು ಬಲಪಂಥೀಯರೂ ಅಲ್ಲ, ಎಡ ಪಂಥೀಯರೂ ಅಲ್ಲ. ನಾವು ರಾಷ್ಟ್ರೀಯವಾದಿಗಳು. ಸಂಘವು ಯಾವಾಗಲೂ ದೇಶದ ಹಿತಕ್ಕಾಗಿ ಕೆಲಸ ಮಾಡುತ್ತದೆ,” ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯೂ ಭಾರೀ ಚರ್ಚೆಗೆ ಕಾರಣವಾಗಿದೆ. ಯಾಕೆಂದರೆ, ಮೊದಲಿನಿಂದಲೂ ಆರ್‌ಎಸ್ಎಸ್ ಎಂದರೆ, ಬಲಪಂಥದ ಸಂಘಟನೆಯಾಗಿ ಗುರುತಿಸಿಕೊಂಡು ಬಂದಿದೆ.
ಏಕಾತ್ಮ ಮಾನವ ದರ್ಶನ ಅನುಸಂಧಾನ ಏವಂ ವಿಕಾಸ್ ಪ್ರತಿಷ್ಠಾನವು ಬಿರ್ಲಾ ಸಭಾಂಗಣದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ಸ್ವಯಂಸೇವಕ ಸಂಘ: ನಿನ್ನೆ, ಇಂದು ಮತ್ತು ನಾಳೆ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಭಾರತದಲ್ಲಿ ವಾಸಿಸುವ ಎಲ್ಲರೂ ಹಿಂದುಗಳು. ಯಾಕೆಂದರೆ, ಅವರ ಪೂರ್ವಿಕರು ಹಿಂದುಗಳಾಗಿದ್ದರು. ಅವರ ಪೂಜಾ ವಿಧಾನಗಳ ಬೇರೆ ಬೇರೆಯಾಗಿರಬಹುದು. ಆದರೆ, ಎಲ್ಲರೂ ಒಂದೇ ಡಿಎನ್ಎ ಹೊಂದಿದ್ದಾರೆ. ಭಾರತವು ವಿಶ್ವಗುರುವಾಗುವ ಮೂಲಕ ಜಗತ್ತನ್ನು ಮುನ್ನಡೆಸಬಹುದು. ಇದು ಎಲ್ಲರ ಪ್ರಯತ್ನದಿಂದ ಮಾತ್ರವೇ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: RSS Baithak | ಭಾರತವನ್ನು ಹಿಂದು ರಾಷ್ಟ್ರ ಎಂದು ಘೋಷಿಸಬೇಕಿಲ್ಲ, ಅದು ಈಗಲೂ ಹಿಂದು ರಾಷ್ಟ್ರವೇ: ಆರೆಸ್ಸೆಸ್ ಪ್ರತಿಪಾದನೆ
ಭಾರತದ ಎಲ್ಲ ಧರ್ಮಗಳು, ಪಂಥಗಳನ್ನು ಒಂದೇ ಎಂದು ಸಂಘವು ಪರಿಗಣಿಸುತ್ತದೆ. ಜನರು ತಮ್ಮ ಪಂಥದಲ್ಲೇ ಇದ್ದುಕೊಂಡು ಸಂಘಕ್ಕಾಗಿ ಕೆಲಸ ಮಾಡಬಹುದು. ಸಂಘವೇನೂ ಕಾಠಿಣ್ಯವನ್ನು ಪ್ರದರ್ಶಿಸುವುದಿಲ್ಲ. ಅದು ಹೊಂದಾಣಿಕೆ ಮಾಡಿಕೊಳ್ಳುತ್ತದೆ ಎದು ಹೊಸಬಾಳೆ ಅವರು ಹೇಳಿದರು. ಜಾರಿ ಮಾಡುವ ಅಧಿಕಾರದಲ್ಲಿರುವವರು ಕೆಟ್ಟವರಾಗಿದ್ದರೆ ಒಳ್ಳೆಯ ಸಂವಿಧಾನ ಇದ್ದೂ ಪ್ರಯೋಜನವಿಲ್ಲ ಎಂದು ಅವರು ಇದೇ ವೇಳೆ ಅಭಿಪ್ರಾಯಪಟ್ಟರು.