ಬೆಂಗಳೂರು: ಭಕ್ತರ ಪಾಲಿಗೆ ನಡೆದಾಡುವ ದೇವರಾಗಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ದೇಹಾಂತ್ಯವಾದ ಹಿನ್ನೆಲೆ ಆರ್ಎಸ್ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮತ್ತು ಕ್ಷೇತ್ರೀಯ ಸಂಘಚಾಲಕ್ ವಿ.ನಾಗರಾಜ್ ಅವರು ಸಂತಾಪ-ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಖಾವಿ ತೊಡದೆಯೂ ಅಧ್ಯಾತ್ಮ ಆರಾಧನೆ ಮಾಡಬಹುದು ಎಂದು ತೋರಿಸಿ, ಪ್ರವಚನಗಳ ಮೂಲಕ ಜನರ ಬದುಕಲ್ಲಿ ಹೊಸ ಭರವಸೆ ಮೂಡಿಸುತ್ತಿದ್ದ, ಲಕ್ಷಾಂತರ ಭಕ್ತದ ಮನೆದೇವರಂತೆ ಇದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೈಕುಂಠ ಏಕಾದಶಿಯಂದೇ ದೇಹಾಂತ್ಯ ಮಾಡಿ, ಭಗವಂತನ ಪಾದ ಸೇರಿದರು. ಈ ಬಗ್ಗೆ ಆರ್ಆಸ್ಎಸ್ ಪ್ರಮುಖರಾದ ದತ್ತಾತ್ರೇಯ ಹೊಸಬಾಳೆ ಮತ್ತು ವಿ.ನಾಗರಾಜ್ ಸಂತಾಪ ಸೂಚಿಸಿ ಪ್ರಕಟಣೆ ಹೊರಡಿಸಿದ್ದಾರೆ.
‘ಶ್ರೀ ಸಿದ್ದೇಶ್ವರ ಸ್ವಾಮೀಜಿಯವರನ್ನು ಭಕ್ತರು ನಡೆದಾಡುವ ದೇವರು ಎಂದೇ ಕರೆದು ಪೂಜಿಸುತ್ತಿದ್ದರು. ತಮ್ಮ ಇಹಲೋಕ ಜೀವನ ಅಂತ್ಯಗೊಳಿಸಿದ ಪೂಜ್ಯ ಶ್ರೀಗಳಿಗೆ ಗೌರವಪೂರ್ವಕ ನಮನಗಳು. ಅಧ್ಯಾತ್ಮ ಸಾಧನೆಯಲ್ಲಿ ಶಿಖರದೆತ್ತರಕ್ಕೆ ಏರಿ, ಅದೆಷ್ಟೋ ಜನರ ನೈತಿಕ ಮತ್ತು ಧಾರ್ಮಿಕ ಜೀವನವನ್ನು ಬೆಳಗಿದ ಸಿದ್ದೇಶ್ವರ ಶ್ರೀಗಳೆಂದ ಸಾತ್ವಿಕ ದೀಪ ಈಗ ಆರಿತು. ಇಡೀ ಸಮಾಜ ಕಣ್ಣೀರಾಗಿದೆ. ಅಸಂಖ್ಯಾತ ಜನರಿಗೆ ಧರ್ಮದೀಕ್ಷೆ ಮತ್ತು ಮೌಲ್ಯಾಧಾರಿತ ಜೀವನ ಸಂದೇಶ-ಉಪದೇಶ ನೀಡಿದ ಸಿದ್ದೇಶ್ವರ ಸ್ವಾಮೀಜಿ ಬದುಕು ಪ್ರತಿಯೊಬ್ಬರನ್ನೂ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತದೆ. ಜ್ಞಾನ, ಸೇವೆ, ಪ್ರೀತಿ ಮತ್ತು ಕರುಣೆಯ ಮೂರ್ತರೂಪವಾಗಿದ್ದ ದಾರ್ಶನಿಕರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿನಯಪೂರ್ವಕ ಶ್ರದ್ಧಾಂಜಲಿ’ ‘ಶಿವಾಯ ನಮಃ’ -ಈ ಬರಹದ ಮೂಲಕ ಆರ್ಎಸ್ಎಸ್ ಪ್ರಮುಖರು ಸಿದ್ದೇಶ್ವರ ಸ್ವಾಮೀಜಿಯವರನ್ನು ಸ್ಮರಿಸಿ, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: Siddheshwar Swamiji | ನಡೆದಾಡುವ ದೇವರ ದೇಹಾಂತ್ಯ, ಕಂಬನಿ ಮಿಡಿದ ಪ್ರಧಾನಿ ನರೇಂದ್ರ ಮೋದಿ