Site icon Vistara News

Rudset academy | ಕನ್ನಡದ ಮಕ್ಕಳು ಉದ್ಯಮಿಗಳಾಗಬೇಕು: ರುಡ್‌ಸೆಟ್‌ ಕಟ್ಟಡ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

CM Basavaraja bommai and veerendra heggade

ಬೆಂಗಳೂರು: ರುಡ್ ಸೆಟ್‌ನಂತಹ ಉತ್ತಮ ತರಬೇತಿ ಕೇಂದ್ರದಿಂದ ಕರ್ನಾಟಕದ ಮಕ್ಕಳು ಲಾಭವನ್ನು ಪಡೆದು, ಉದ್ಯಮಿಗಳಾಗಿ, ಇತರರಿಗೆ ಉದ್ಯೋಗ ನೀಡುವಂತಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಶನಿವಾರ ಕೆಂಗೇರಿ ಹೋಬಳಿಯ ಕುಂಬಳಗೋಡು ಗ್ರಾಮದಲ್ಲಿ ರುಡ್‍ಸೆಟ್ ರಾಷ್ಟ್ರೀಯ ಅಕಾಡೆಮಿ ಹಾಗೂ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪ್ರಯೋಜಕತ್ವದಲ್ಲಿ ಆಯೋಜಿಸಿರುವ ರುಡ್‍ಸೆಟ್ ರಾಷ್ಟ್ರೀಯ ಅಕಾಡೆಮಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ʻʻಪ್ರಧಾನ ಮಂತ್ರಿಗಳು ಕೌಶಲ್ಯ ಭಾರತದಡಿ ಶೇ. 44ರಷ್ಟಿರುವ ಯುವಕರಿಗೆ ಕೌಶಲ ತರಬೇತಿಯನ್ನು ನೀಡಿ, ಎಲ್ಲಾ ಉದ್ಯೋಗಕ್ಕೆ ಅರ್ಹತೆ ಗಳಿಸಿಕೊಳ್ಳಲು ನೆರವು ಒದಗಿಸುತ್ತಿದ್ದಾರೆ. ಸಣ್ಣ ಕೆಲಸದಿಂದ ಹಿಡಿದು ಆರ್.ಅಂಡ್ ಡಿ ವರೆಗೆ ಕೌಶಲ ಅಗತ್ಯ. ಕರ್ನಾಟಕ ಕೌಶಲ್ಯ ಹಾಗೂ ಮಾನವ ಬಂಡವಾಳದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಬೇಕು. ಇದನ್ನು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಸಿ, ಕರ್ನಾಟಕ ವನ್ನು ಕಟ್ಟಲು ಬಳಕೆ ಮಾಡುತ್ತೇವೆ.. ಇದರ ಮೂಲಕ ನವ ಕರ್ನಾಟಕದಿಂದ ನವಭಾರತ ನಿರ್ಮಿಸೋಣʼʼ ಎಂದರು.

ಉದ್ಯೋಗದಾತರಾಗುವ ಸ್ವಯಂಉದ್ಯೋಗಿಗಳು
ʻʻದೇಶ ಕಟ್ಟಲು ಅಲ್ಲಿನ ಜನರಿಗೆ ಶಿಕ್ಷಣ, ಉದ್ಯೋಗವನ್ನು ನೀಡಬೇಕು. ತಳಹಂತದ ದುಡಿಯುವ ವರ್ಗ ರಾಜ್ಯದ ಆರ್ಥಿಕತೆಯನ್ನು ಬೆಳೆಸುತ್ತಾರೆ. ಗ್ರಾಮೀಣ ಭಾಗದ ಯುವಕರಿಗೆ ಬುದ್ಧಿಶಕ್ತಿಯಿದ್ದರೂ ವಿವಿಧ ರಂಗಗಳಲ್ಲಿ ಅವರಿಗೆ ತರಬೇತಿ ನೀಡಿದರೆ ,ಅದ್ಭುತ ಕೆಲಸಗಳನ್ನು ಮಾಡಲು ಶಕ್ತರಾಗಿರುತ್ತಾರೆ. ರುಡ್ ಸೆಟ್ ನ ಕಾರ್ಯಕ್ರಮದಡಿ ಯುವಕರಿಗೆ ತರಬೇತಿ ನೀಡುವ ಸಂಸ್ಥೆಗಳಲ್ಲಿ ಸುಮಾರು 45 ಲಕ್ಷ ಜನರಿಗೆ ತರಬೇತಿಯನ್ನು ನೀಡಲಾಗಿದ್ದು, ಅದರಲ್ಲಿ 30 ಲಕ್ಷ ಜನ ಈಗಾಗಲೇ ಸ್ವಯಂ ಉದ್ಯೋಗದಲ್ಲಿ ತೊಡಗಿದ್ದಾರೆ. ತರಬೇತಿ ಸಂಸ್ಥೆಯೊಂದು ಈ ರೀತಿಯ ಯಶಸ್ಸನ್ನು ಪಡೆದಿರುವುದು ಅಭಿನಂದನೀಯ. ದೇಶ ಕಟ್ಟಲು ಕೌಶಲ್ಯಭರಿತ ಉದ್ಯೋಗಿಗಳು ಬೇಕು. 10 ನೇ ತರಗತಿ, ಪಿಯುಸಿಗಳ ನಂತರ ಇಂತಹ ಕೌಶಲ್ಯ ತರಬೇತಿ ದೊರೆತರೆ, ಈಗ ಸ್ವಯಂಉದ್ಯೋಗ ಮಾಡುವವರು ನಂತರ ಉದ್ಯೋಗದಾತರಾಗುತ್ತಾರೆʼʼ ಎಂದು ಸಿಎಂ ಹೇಳಿದರು.

ಡಾ. ಹೆಗ್ಗಡೆಯವರಿಗೆ ಅಭಿನಂದನೆ
ʻʻಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಗ್ರಾಮೀಣಾಭಿವೃದ್ಧಿಯಲ್ಲಿ ತೊಡಗಿರುವ ಧರ್ಮಸ್ಥಳದ ಸಂಸ್ಥೆ ಸಾವಿರಾರು ಸಂಘಗಳನ್ನು ಕಟ್ಟಿ ಸ್ವಯಂ ಉದ್ಯೋಗಕ್ಕೆ ತರಬೇತಿ ನೀಡಿದೆ. ಸ್ತ್ರೀ ಶಕ್ತಿ ಸಂಘಕ್ಕೆ ಹಣಕಾಸಿನ ನೆರವು ನೀಡಿ ದೊಡ್ಡ ಕ್ರಾಂತಿಯನ್ನು ಮಾಡುತ್ತಿದ್ದಾರೆʼʼ ಎಂದು ಸಿಎಂ ಹೇಳಿದರು. ʻʻರುಡ್ ಸೆಟ್ ಒಂದು ಉತ್ತಮ ತರಬೇತಿ ಕೇಂದ್ರವಾಗಿದೆ. ಇಲ್ಲಿ ದೇಶದ ವಿವಿಧ ಭಾಗಗಳಿಂದ ಜನ ಬಂದು ಕರ್ನಾಟಕದ ಸಂಸ್ಕೃತಿ, ಜನ ಹಾಗೂ ಕೌಶಲ್ಯದ ಪರಿಚಯವಾಗುತ್ತದೆ. ದೇಶದಲ್ಲಿ ಅವರು ರಾಜ್ಯದ ರಾಯಭಾರಿಗಳಾಗುತ್ತಾರೆ. ಈ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ್ದಕ್ಕಾಗಿ ಡಾ: ವೀರೇಂದ್ರ ಹೆಗ್ಗಡೆಯವರನ್ನು ಅಭಿನಂದಿಸುತ್ತೇನೆʼʼ ಎಂದರು ಬೊಮ್ಮಾಯಿ.

ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಸಚಿವ ಎಸ್.ಟಿ. ಸೋಮಶೇಖರ್, ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಕಾರ್ಯದರ್ಶಿ ಶೈಲೇಶ್ ಕುಮಾರ್ ಸಿಂಗ್, ಜಂಟಿ ಕಾರ್ಯದರ್ಶಿ ಕರ್ಮ ಜಿಹ್ಪಾಂ ಭೂಟಿಯಾ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ | Nijalingappa memory | ನಿಜಲಿಂಗಪ್ಪ ಅಧಿಕಾರದ ಹಿಂದೆ ಹೋಗಲಿಲ್ಲ, ಅದೇ ಅವರ ಹಿಂದೆ ಬಂತು: ಬೊಮ್ಮಾಯಿ

Exit mobile version