Site icon Vistara News

ಶ್ರೀರಾಮುಲು ವಿರುದ್ಧ ಭೂ ಕಬಳಿಕೆ ಆರೋಪ; ಸಂಪುಟದಿಂದ ಕೈಬಿಡಿ ಎಂದ ಎಸ್.ಆರ್.ಹಿರೇಮಠ್

ಎಸ್.ಆರ್.ಹಿರೇಮಠ್

ಬಳ್ಳಾರಿ: ಸಚಿವ ಬಿ. ಶ್ರೀರಾಮುಲು ವಿರುದ್ಧ ಬಳ್ಳಾರಿಯಲ್ಲಿ 27.25 ಎಕರೆ ಭೂ ಕಬಳಿಕೆ ಆರೋಪವಿದೆ. ಹೀಗಾಗಿ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು, ಈ ವಿಷಯವಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೂಲಕ ತನಿಖೆ ನಡೆಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಗೆ ಒಂದು ವಾರದೊಳಗೆ ಪತ್ರ ಬರೆದು ಶ್ರೀರಾಮುಲು ಅವರನ್ನು ಸಚಿವ ಸ್ಥಾನದಿಂದ ಕೈಬಿಡುವಂತೆ ಒತ್ತಾಯಿಸಲಾಗುತ್ತದೆ. ಕ್ರಮವಹಿಸದಿದ್ದರೆ ನ್ಯಾಯಾಂಗ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ | ಒಂದು ವರ್ಷಕ್ಕಾಗಿ ಚಿಂಚನಸೂರುಗೆ ಟಿಕೆಟ್‌ ನೀಡಿದ ಬಿಜೆಪಿ: MLA ಆಗ್ತೀನಿ ಎಂದ ಮಾಜಿ ಸಚಿವ

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದಾರೆ. ಆದರೆ ಸಕ್ಷಮ ಪ್ರಾಧಿಕಾರದ ಪರವಾನಗಿ ಇಲ್ಲದೆ ಮಾಡಿದ್ದಾರೆಂದು ಶ್ರೀರಾಮುಲು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯವು ಇವರ ಮನವಿಯನ್ನು ತಿರಸ್ಕರಿಸಿ ಪ್ರಕರಣ ವಿಚಾರಣೆ ನಡೆಸಲಿ ಎಂದು ತಿಳಿಸಿದರು.

ಗಣಿ ಬಾಧಿತ ವಲಯದ ಸಮಗ್ರ ಪರಿಸರ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸಲು, ಉಸ್ತುವಾರಿ ನೋಡಲು ನಿವೃತ್ತ ಸುಪ್ರೀಂಕೋರ್ಟ್ ಜಸ್ಟೀಸ್ ಬಿ. ಸುದರ್ಶನ ರೆಡ್ಡಿ ಅವರ ನೇಮಕವನ್ನು ನಾವು ಸ್ವಾಗತಿಸುತ್ತೇವೆ. ಹಣ ದುರುಪಯೋಗವಾಗದಂತೆ ನಿಗಾವಹಿಸಲು ಈಗಾಗಲೇ ಸಮಾಜ ಪರಿವರ್ತನಾ ಸಮುದಾಯ ಪಿಐಎಲ್ ಮೂಲಕ ಕೋರ್ಟ್‌ಗೆ ವಿನಂತಿಸಿದೆ ಎಂದರು.

ಸಾವಿರಾರು ಕೋಟಿ ರೂಪಾಯಿ ಹಣವನ್ನು ಗಣಿ ಬಾಧಿತ ವಲಯಗಳ ಅಭಿವೃದ್ದಿಗಾಗಿಯೇ ಬಳಸಬೇಕು. ಈ ಅಭಿವೃದ್ಧಿ ಕಾರ್ಯದ ವರದಿಯನ್ನು ಮೂರು ತಿಂಗಳಿಗೊಮ್ಮೆ ಪರಿಶೀಲಿಸುವಂತೆ ಆದೇಶದಲ್ಲಿದೆ‌. ಉಸ್ತುವಾರಿ ಸಮಿತಿಯು ಸಿಎಜೆ ಅವರನ್ನು ಸಂಪರ್ಕಿಸಿ ಲೆಕ್ಕಪತ್ರವನ್ನು ಸರಿಯಾಗಿ ಇಡುವಂತೆ ಸಲಹೆ ಪಡೆಯಲು ತಿಳಿಸಿದೆ ಎಂದರು.

ನಮ್ಮ ಉದ್ದೇಶ ಗಣಿ ಬಾಧಿತ ವಲಯದ ಸಮಗ್ರ ಪರಿಸರ ಅಭಿವೃದ್ಧಿ ಯೋಜನೆ ಹಾಗೂ ಸ್ಥಳೀಯ ಜನರ ಆರೋಗ್ಯ, ಪಶುಸಂಗೋಪನೆ, ಕೃಷಿಯನ್ನು ಒತ್ತುಕೊಟ್ಟು ಸಮಗ್ರ ಮಾನವೀಯ ವಿಕಾಸ ಆಗಬೇಕು. ಬೇರೆ ಕೆಲಸಗಳಿಗೆ ಈ ಹಣವನ್ನು ಬಳಸಬಾರದು ಎಂದು ಒತ್ತಾಯಿಸಿದರು.

ಇದನ್ನೂ ಓದಿ | ಸಿದ್ದರಾಮೋತ್ಸವ ಮಾಡಬೇಡಿ, ಸಿದ್ದರಾಮೇಶ್ವರ ಉತ್ಸವ ಮಾಡಿ: ಸಿಎಂ ಬೊಮ್ಮಾಯಿ

Exit mobile version