ಬೆಂಗಳೂರು: ಶೃಂಗೇರಿ ಮಠ ಒಡೆದ ಹಾಗೂ ಗಾಂಧೀಜಿಯನ್ನು ಕೊಂದ ಬ್ರಾಹ್ಮಣ ಸಮುದಾಯದವರನ್ನು ಸಿಎಂ (Brahmin CM) ಮಾಡಲು ಆರ್‌ಎಸ್‌ಎಸ್ ಹುನ್ನಾರ ಮಾಡಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರೊ. ಎಸ್.ಆರ್.ಲೀಲಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗಾಂಧಿಯನ್ನು ಕೊಂದವನು ಬ್ರಾಹ್ಮಣ, ಅಂತಹ ಬ್ರಾಹ್ಮಣರು ಸಿಎಂ ಆಗಬಾರದು ಎಂದು ಕುಮಾರಣ್ಣನವರು ಹೇಳಿದ್ದಾರೆ. ಗಾಂಧಿಯನ್ನು ಕೊಂದವ ಬ್ರಾಹ್ಮಣ ಆಗಿದ್ದಾರೆ ಎಂದು ಹೇಳುತ್ತೀರಿ. ಆದರೆ, ವಿಶ್ವ ವಿಖ್ಯಾತ ಎಂಜಿನಿಯರ್ ಆಗಿರುವ ಸರ್ ಎಂ.ವಿಶ್ವೇಶ್ವರಯ್ಯ, ನೊಬೆಲ್ ಪ್ರಶಸ್ತಿ ಪಡೆದ ಸರ್ ಸಿ.ವಿ. ರಾಮನ್ ಅವರ ಹೆಸರು ಹೇಳುವಾಗ ನೀವು ಬ್ರಾಹ್ಮಣ ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ತಾವು ಪ್ರಮುಖ ಹೇಳಿಕೆ ನೀಡಿದ್ದೀರಿ. ಜೆಡಿಎಸ್‌ಗೆ ಬಹುಮತ ಬಂದರೆ ಮುಸ್ಲಿಂ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಕೊಡುತ್ತೇವೆ ಎಂದು ಹೇಳಿದ್ದೀರಿ. ಈ ಮಾತು ಕೇಳಿ ಎಲ್ಲರೂ ಆಚ್ಚರಿ ಪಟ್ಟಿದ್ದಾರೆ. ಆದರೆ, ಟಿಪ್ಪುವನ್ನು ಕೊಂದವರು, ಕೊನೆಯಲ್ಲಿ ಹೊಡೆತ ಕೊಟ್ಟವರು ಉರಿಗೌಡ ಹಾಗೂ ನಂಜೇಗೌಡ ಆಗಿದ್ದಾರೆ. ಆ ಗೌಡ ಡಿಎನ್‌ಎ ತಮ್ಮಲ್ಲಿ ಇಲ್ಲವೇ? ಇರಬಹುದಲ್ಲವೇ. ಇನ್ನೂ ನಿಮ್ಮ ಮಾತುಗಳನ್ನು ಮುಸ್ಲಿಂರು ಹೇಗೆ ನಂಬುತ್ತಾರೆ ಅಂದುಕೊಂಡಿದ್ದೀರಾ? ನಿಮ್ಮ ಮಾತುಗಳನ್ನು ನಂಬಿದ್ದರೇ ಜಮೀರ್ ಅಹ್ಮದ್ ಅಂತಹವರು ನಿಮ್ಮ ಪಕ್ಷವನ್ನು ಬಿಟ್ಟು ಹೋಗುತ್ತಿದ್ದರೇ ಎಂದು ಕೇಳಿದ್ದಾರೆ.
ಬ್ರಾಹ್ಮಣ ಬ್ರಾಹ್ಮಣ ಎನ್ನುತ್ತೀರಿ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹಲವು ಬ್ರಾಹ್ಮಣರಿದ್ದಾರೆ. ಝಾನ್ಸಿರಾಣಿ ಲಕ್ಷ್ಮಿ ಬಾಯಿ, ಅವಳ ಸೇನಾಪತಿಯಾಗಿದ್ದ ತಾತ್ಯಾ ಟೋಪೆ, 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಸಿಪಾಯಿ ಮಂಗಲ್ ಪಾಂಡೆ ಬ್ರಾಹ್ಮಣರಾಗಿದ್ದಾರೆ. ಸಿಪಾಯಿ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದ ವೀರ ಸಾವರ್ಕರ್ ಕೂಡ ಬ್ರಾಹ್ಮಣರಾಗಿದ್ದಾರೆ ಎಂದಿದ್ದಾರೆ.
ಮಹಾತ್ಮ ಗಾಂಧಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಬ್ರಾಹ್ಮಣ ಎಂದು ಹೇಳುತ್ತೀರಿ. ಆದರೆ ಗಾಂಧಿ ಹತ್ಯೆ ಬಳಿಕ ಅಹಿಂಸೆ ಅಹಿಂಸೆ ಎಂದು ಹೇಳುವ ನಿಮ್ಮಂತಹವರು, ಈಗ ಸುದ್ದಿಯಾಗುತ್ತಿರುವ ಚೇತನ್ ಅಹಿಂಸಾ ಅವರಂತಹ ಜನರು ದೇಶಾದ್ಯಂತ 3 ದಿನಗಳಲ್ಲಿ 3000 ಚಿತ್ಪಾವನ ಬ್ರಾಹ್ಮಣರನ್ನು ಕೊಂದರು. ಗಾಂಧಿಯನ್ನು ಗೋಡ್ಸೆ ಕೊಂದ ರೀತಿ ದೊಡ್ಡ ದೊಡ್ಡವರು ಸೇರಿ ಬ್ರಾಹ್ಮಣರನ್ನು ಕೊಂದರು. ಈ ಬಗ್ಗೆಯೂ ಮಾತನಾಡಬೇಕು ಎಂದರು.
ಎಚ್.ಡಿ. ದೇವೇಗೌಡರಿಗೆ ಮತಾಂತರವಾಗಲು ಅವಕಾಶ ನೀಡಿ
ಇನ್ನು ತಾತನಿಂದ ಮೊಮ್ಮಗನವರೆಗೆ ಎಲ್ಲರಿಗೂ ನಿಮ್ಮ ಕುಟುಂಬದಲ್ಲಿ ಮುಸ್ಲಿಂರ ಬಗ್ಗೆ ಸಾಕಷ್ಟು ಪ್ರೀತಿ ಇದೆ. ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮುಂದಿನ ಜನ್ಮದಲ್ಲಾದರೂ ಮುಸಲ್ಮಾನನಾಗಿ ಜನಿಸಬೇಕು ಎಂದು ಹೇಳಿದ್ದರು. ಅಷ್ಟು ದೊಡ್ಡವರು ಆಸೆಪಡುವಾಗ ನೀವು ಅವರಿಗೆ ಈಗಲೇ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಲು ಅವಕಾಶ ಮಾಡಿಕೊಡಬೇಕು ಎಂದಿರುವ ಅವರು, ಮರಾಠರಲ್ಲಿ ಪೇಶ್ವೆಗಳು ಭಾರತದಲ್ಲಿ ಹಿಂದು ಸಾಮ್ರಾಜ್ಯ ನೆಲೆಸಲು ಶ್ರಮಿಸಿದ್ದರು. ಪೇಶ್ವೆ ಒಂದನೇ ಬಾಜಿರಾಯ ಸೇರಿ ಹಲವರು ಹಿಂದು ಸಾಮ್ರಾಜ್ಯಕ್ಕಾಗಿ ಹೋರಾಡಿದ್ದಾರೆ. ಹೀಗಾಗಿ ಇತಿಹಾಸ ಓದುವ ಮೂಲಕ ಪೇಶ್ವೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.