ಬೆಂಗಳೂರು: ಯಾವುದೇ ಸ್ವಾರ್ಥವಿಲ್ಲದೆ ನೂರಾರು ಮರಗಳಿಗೆ ನೀರೆರೆದು ಪೋಷಿಸಿದ ಸಾಲುಮರದ ತಿಮ್ಮಕ್ಕ ಅವರನ್ನು ಕರ್ನಾಟಕ ರಾಜ್ಯದ ಪರಿಸರ ರಾಯಭಾರಿಯನ್ನಾಗಿ ರಾಜ್ಯ ಸರ್ಕಾರ ಘೋಷಿಸಿ ಅಧಿಸೂಚನೆ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ರಾಜ್ಯ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಜೂನ್ 30ರಂದು ಶ್ರೀ ಸಿದ್ಧಾರ್ಥ ಎಜುಕೇಶನ್ ಸೊಸೈಟಿ ತುಮಕೂರು ಹಾಗೂ ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಶನ್ ಇವರ ವತಿಯಿಂದ ವಸಂತನಗರದ ಡಾ. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಾಲು ಮರದ ತಿಮ್ಮಕ್ಕ ಅವರ 111ನೇ ಜನ್ಮದಿನ ಸಂಭ್ರಮ ಹಾಗೂ ನ್ಯಾಷನಲ್ ಗ್ರೀನರಿ ಅವಾರ್ಡ್-2020ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಈ ಘೋಷಣೆ ಮಾಡಿದ್ದರು.
ತಿಮ್ಮಕ್ಕ ವೆಬ್ ಸೈಟ್ ಅಭಿವೃದ್ಧಿಪಡಿಸಿ ಭಾರತದದೆಲ್ಲೆಡೆ ಪ್ರಚುರಪಡಿಸಲು ವಾರ್ತಾ ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು. ಸಾಲುಮರದ ತಿಮ್ಮಕ್ಕ ಅಲ್ಲದೇ ಈ ರೀತಿಯ ಸೇವೆಗಳನ್ನು ಮಾಡಿರುವವರ ವೆಬ್ ಸೀರೀಸ್ ಅನ್ನು ವಾರ್ತಾ ಇಲಾಖೆ ನಿರ್ಮಿಸಲಿದೆ ಎಂದು ತಿಳಿಸಿದ್ದರು.
ತಿಮ್ಮಕ್ಕನ ಊರಿನ ಬಳಿ 10 ಎಕರೆ ಸ್ಥಳ ನಿಗದಿ ಮಾಡಿ ಆದೇಶವನ್ನು ಶೀಘ್ರವಾಗಿ ಹೊರಡಿಸಲಾಗುವುದು. ತಿಮ್ಮಕ್ಕ ಅವರಿಗೆ ಈಗಾಗಲೇ ಬಿಡಿಎ ನಿವೇಶನ ನೀಡಿ ನೋಂದಣಿಯನ್ನು ಮಾಡಿಕೊಡಲಾಗಿದೆ. ನಿವೇಶನವನ್ನು ಭದ್ರಪಡಿಸಲು ತಂತಿಬೇಲಿ ಹಾಕಬೇಕು. ಶೀಘ್ರವಾಗಿ ಮನೆಯನ್ನು ಕಟ್ಟಿಕೊಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು.
ಸಾಲು ಮರದ ತಿಮ್ಮಕ್ಕನಿಗೆ ಪರಿಸರದ ರಾಯಭಾರಿ ಎಂಬ ವಿಶೇಷ ಬಿರುದು ನೀಡಿ ಆಕೆ ಬಯಸಿದಲ್ಲಿ ಹೋಗಿ ಪ್ರಚಾರ ಕೈಗೊಳ್ಳಲು ರಾಜ್ಯ ಸಚಿವರ ಸ್ಥಾನ ನೀಡಿ , ವಾಹನ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುವುದು. ತಿಮ್ಮಕ್ಕ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋದರೆ ಅದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಬೊಮ್ಮಾಯಿ ಭರವಸೆ ನೀಡಿದ್ದರು.
ಇದನ್ನೂ ಓದಿ ಸಾಲು ಮರದ ತಿಮ್ಮಕ್ಕಗೆ ಕೊನೆಗೂ ಸಿಕ್ತು ಸರಕಾರದಿಂದ ನಿವೇಶನ, ಸಿಎಂರಿಂದ ಕ್ರಯಪತ್ರ ಹಸ್ತಾಂತರ