ಬೆಂಗಳೂರು: ಪರಿಸರ ಪ್ರೇಮಿ, ವೃಕ್ಷ ಮಾತೆ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ (Saalumarada Thimmakka) ಶನಿವಾರ ಸಂಜೆ ತಮ್ಮ ನಿವಾಸದಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಮಂಜುನಾಥನಗರದ ನಿವಾಸಿಯಾಗಿರುವ ಅವರು ಆಯತಪ್ಪಿ ಬಿದ್ದ ಕಾರಣ ಬೆನ್ನು ಮೂಳೆಗೆ ಪೆಟ್ಟಾಗಿದೆ ಎಂದು ಹೇಳಲಾಗಿದೆ. ತಕ್ಷಣ ಅವರನ್ನು ಹಾಗಾಗಿ ಜಯನಗರ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಆರಂಭಿಸಲಾಗಿದೆ. ತುಮಕೂರಿನ ಗುಬ್ಬಿ ತಾಲೂಕಿ ತಿಮ್ಮಕ್ಕ ಅವರು ಪರಿಸರ ಪ್ರೇಮಿಯಾಗಿದ್ದು, ತಮ್ಮ ಸತ್ಕಾರ್ಯಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಬಡ ಕುಟುಂಬದ ಮಹಿಳೆಯಾಗಿದ್ದ ತಿಮ್ಮಕ್ಕ ಅವರು ಬಡತನದ ನಡುವೆಯೂ ಸಾಲು ಸಾಲು ಗಿಡಗಳನ್ನು ನೆಟ್ಟು ಪೋಷಿಸಿ ಬೆಳೆಸಿದ್ದರು. ಆ ಮೂಲಕ ಅವರು ವೃಕ್ಷಮಾತೆ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದರು 112ರ ವಯಸ್ಸಿನ ತಿಮ್ಮಕ್ಕ ಅವರು ಕಳೆದ 65 ವರ್ಷಗಳಿಂದ ಗಿಡಗಳನ್ನು ನೆಟ್ಟು ಪೋಷಿಸುವಂತಹ ಕಾಯಕದಲ್ಲಿ ತೊಡಗಿದ್ದಾರೆ. ಇಲ್ಲಿಯವರೆಗೂ ಸರಿಸುಮಾರು 8 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು ಖ್ಯಾತಿ ಗಳಿಸಿದ್ದಾರೆ.
ತಿಮ್ಮಕ್ಕ ಅವರು ಪ್ರೀತಿಯಿಂದ ಪೋಷಿಸಿ ನೆಟ್ಟ ಮರಗಳು ಇಂದು ಹೆಮ್ಮರವಾಗಿ ಬೆಳೆದು ನಿಂತಿವೆ. ಪರಿಸರದ ಉಳಿವಿಗಾಗಿ ಅವರ ಸೇವೆಯನ್ನು ಗುರುತಿಸಿದ ಭಾರತ ಸರ್ಕಾರ 2019 ರಲ್ಲಿ ತಿಮ್ಮಕ್ಕನವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದೆ.
ಸಾಲುಮರದ ತಿಮ್ಮಕ್ಕ ಅವರಿಗೆ ವಯೋಸಹಜ ಸಮಸ್ಯೆ ಎದರಾಗಿದೆ. ತಮ್ಮ ನಿವಾಸದಲ್ಲಿ ಜಾರಿ ಬೀಳುವ ಮೂಲಕ ಪೆಟ್ಟು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಅವರಿಗೆ ಉಸಿರಾಟದ ತೊಂದರೆ, ಮಂಡಿ ನೋವು ಸಹ ಕಾಣಿಸಿಕೊಂಡಿತ್ತು.