Site icon Vistara News

ಬರೀ ಮಾತಲ್ಲಿ ʼಸಬ್ ಕಾ ಸಾಥ್‌, ಸಬ್ ಕಾ ವಿಕಾಸ್ʼ: ಮೋದಿ ವಿರುದ್ಧ ಸಿದ್ದರಾಮಯ್ಯ ವ್ಯಂಗ್ಯ

CM Siddaramaiah

ಸಿಂಧನೂರು: ತಿಮ್ಮಾಪುರ ಏತ ನೀರಾವರಿ ಯೋಜನೆ ಲೋಕಾರ್ಪಣೆ, ಜಲ ಜೀವನ್ ಮಿಷನ್ (DBOT) ಯೋಜನೆಯ ಶಂಕುಸ್ಥಾಪನೆ ಸೇರಿ ಸಿಂಧನೂರು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.

ವೇದಿಕೆ‌ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಬರ ಪರಿಹಾರ ನೀಡಲು ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿಶ್ ಶಾ, ಹಣಕಾಸು ಸಚಿವರನ್ನು ಭೇಟಿ ಮಾಡಿದ್ದೆವು. ಸಭೆ ಮಾಡಿ ಹಣ ಕೊಡುತ್ತೇವೆ ಎಂದಿದ್ದರು. ಆದರೆ, ಇದುವರೆಗೂ ಹಣವೂ ಕೊಟ್ಟಿಲ್ಲ, ಸಭೆಯನ್ನೂ ಮಾಡಿಲ್ಲ. ಅವರೇನೂ ತಮ್ಮ ದುಡ್ಡು ಕೊಡಲ್ಲ, ನಮ್ಮ ತೆರಿಗೆ ದುಡ್ಡು ಕೊಡುವುದು. 4 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ರಾಜ್ಯದಿಂದ ಕೊಡುತ್ತೇವೆ. 52 ಸಾವಿರ ಕೋಟಿ ಮಾತ್ರ ನಮಗೆ ವಾಪಸ್ ಬರುತ್ತೆ. ಬರೀ ಮಾತಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ ಎಂದು ವ್ಯಂಗ್ಯವಾಡಿದರು.

ಐದು ಗ್ಯಾರಂಟಿಟಿಗಳನ್ನು ಚುನಾವಣೆ ಮುನ್ನ ಘೋಷಣೆ ಮಾಡಿದ್ದೆವು. 7 ತಿಂಗಳಲ್ಲಿ 4 ಯೋಜನೆ ಜಾರಿಯಾಗಿವೆ. ಯುವನಿಧಿ ನೋಂದಣಿ ಶುರುವಾಗಿದೆ. ಪದವೀಧರ ನಿರುದ್ಯೋಗಿಗಳಿಗೆ 3000 ರೂ., ಡಿಪ್ಲೊಮಾ ಅಭ್ಯರ್ಥಿಗಳಿಗೆ 1500 ರೂ. ನೀಡಲಾಗುತ್ತದೆ. ಆದರೆ, ಗ್ಯಾರಂಟಿ ಅನುಷ್ಠಾನ ಸಾಧ್ಯವಿಲ್ಲ ಎಂದು ಪ್ರಧಾನಿ ಸೇರಿ ಬಹಳ ಜನ ಹೇಳಿದ್ದರು, ಜಾರಿಯಾದರೆ ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದರು. ಆದರೆ, ನಾವು 7 ತಿಂಗಳಲ್ಲಿ 4 ಜಾರಿ ಮಾಡಿದ್ದೇವೆ, ರಾಜ್ಯ ಆರ್ಥಿಕವಾಗಿ ಸುಭದ್ರವಾಗಿದೆ. ಇದನ್ನು ಬಿಜೆಪಿಯವರಿಗೆ ಹೇಳಬೇಕು ಎಂದು ಹೇಳಿದರು.

ಇದನ್ನೂ ಓದಿ | CM Siddaramaiah : ಅಸಮಾನತೆ ತೊಲಗಿದಾಗ ಮಾತ್ರ ಸ್ವಾತಂತ್ರ್ಯಕ್ಕೆ ಬೆಲೆ ಎಂದ ಸಿಎಂ ಸಿದ್ದರಾಮಯ್ಯ

ಮಿಸ್ಟರ್ ನರೇಂದ್ರ ಮೋದೀಜಿ ರಾಜ್ಯವು ಆರ್ಥಿಕವಾಗಿ ಸುಭದ್ರವಾಗಿದೆ. ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ ಅಂತ ಹೇಳಿದ್ದೇವೆ, ಅದೇ ರೀತಿ ನಡೆದುಕೊಂಡಿದ್ದೇವೆ. ಜನರ ನಿರೀಕ್ಷೆ ಹುಸಿ ಮಾಡದಂತೆ 7 ತಿಂಗಳಿಂದ ಆಡಳಿತ ಕೊಟ್ಟಿದ್ದೇವೆ, ಮುಂದೆಯೂ ಮಾಡುತ್ತೇವೆ. ಕೋಟ್ಯಂತರ ಮಹಿಳೆಯರು ಫ್ರೀಯಾಗಿ ಓಡಾಡುತ್ತಿದ್ದಾರೆ. ಇದು ಎಲ್ಲೂ ಸಾಧ್ಯವಾಗಿಲ್ಲ. ಗೃಹಲಕ್ಷ್ಮಿ ಯೋಜನೆಯಿಂದ 1 ಕೊಟಿ 16 ಲಕ್ಷ ಮಹಿಳೆಯರ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದೇವೆ. ಗ್ಯಾರೆಂಟಿ ಯೋಜನೆಗಳಿಂದ 4 ರಿಂದ 5 ಸಾವಿರ ರೂಪಾಯಿ ಪ್ರತೀ ತಿಂಗಳು ಬಡ‌ ಕುಟುಂಬಗಳಿಗೆ ಸಿಗುತ್ತಿದೆ ಎಂದು ತಿಳಿಸಿದರು.

ಕವನದ ಮೂಲಕ ವ್ಯಂಗ್ಯವಾಡಿದ ಡಿಕೆಶಿ

ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಐದು ಬೆರಳು ಸೇರಿದಂತೆ ಐದು ಗ್ಯಾರಂಟಿಯಿಂದ ಸರ್ಕಾರ ಬಂತು. ಅರಳಿದ ಕಮಲ ಮುದುಡಿ ಹೋಯ್ತು, ಗ್ಯಾರಂಟಿ ನೋಡಿ ತೆನೆ ಹೊತ್ತ ಮಹಿಳೆ, ತೆನೆ ಎಸೆದು ಹೋದ್ಲು ಎಂದು ಕವನದ ಮೂಲಕ ಮತ್ತೊಮ್ಮೆ ಪರೋಕ್ಷವಾಗಿ ಬಿಜೆಪಿ ಹಾಗೂ ಜೆಡಿಎಸ್‌ ಬಗ್ಗೆ ವ್ಯಂಗ್ಯವಾಡಿದರು.

ನನ್ನ 40 ವರ್ಷದ ರಾಜಕೀಯ ಇತಿಹಾಸದಲ್ಲಿ ಇಂತಹ ಗ್ಯಾರಂಟಿ ಅನುಷ್ಠಾನಕ್ಕೆ ಬಂದಿದೆ. ಈ ಹಿಂದೆ ಬಿಜೆಪಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ನಿರುದ್ಯೋಗ ಹೋಗಲಾಡಿಸುತ್ತೇವೆ ಎಂದಿದ್ದರು. ಅಕೌಂಟ್‌ಗೆ 15 ಲಕ್ಷ ರೂ. ಹಾಕುತ್ತೇವೆ ಎಂದು ಹೇಳಿದ್ದರು. ಯಾವುದೂ ಆಗಲಿಲ್ಲ. ಜನವರಿಯಲ್ಲಿ ಯುವನಿಧಿ ಹಣ ಖಾತೆಗೆ ತಲುಪುತ್ತದೆ. 1 ಕೋಟಿ ಹೆಣ್ಣು ಮಕ್ಕಳಿಗೆ ಗೃಹಲಕ್ಷ್ಮಿ ಯೋಜನೆ ಹಣ ಹಾಕುತ್ತಿದ್ದೇವೆ ಎಂದರು.

ಸಿಂಧನೂರಿನಲ್ಲಿ ಡಿಗ್ರಿ ಕಾಲೇಜುಗಳು ಇದೆ ಅಂತ ಇವತ್ತೇ ಗೊತ್ತಾಗಿದ್ದು ಎಂದ ಅವರು, ಕಲ್ಯಾಣ ಕರ್ನಾಟಕ ಅಂತ ಹೇಳಿ ಕಿವಿ ಮೇಲೆ ಹೂವು ಇಡುತ್ತಿದ್ದೀರಿ, ನಮ್ಮ ತಾಲೂಕಿಗಿಂ ನಿಮ್ಮಲ್ಲೇ ಅಭಿವೃದ್ಧಿ ಜಾಸ್ತಿ ಆಗಿದೆ. ನೀರಾವರಿ ಮಾಡಿಕೊಂಡಿದ್ದೀರಿ, 100 ಕೋಟಿ ವೆಚ್ಚದ ತಿಮ್ಮಾಪುರ ಏತ ನೀರಾವರಿ ಯೋಜನೆ ಲೋಕಾರ್ಪಣೆಗೊಂಡಿದೆ. ಸದ್ಯ 30 ಟಿಎಂಸಿ ನೀರು ವ್ಯರ್ಥವಾಗುತ್ತಿದೆ. ಈ ಭಾಗದಲ್ಲಿ ಬ್ಯಾಲೆನ್ಸಿಂಗ್ ರಿಸರ್ವೈಯರ್ ಅನ್ನು ನವಲಿಯಲ್ಲಿ ಮಾಡಲು ಇಚ್ಛಿಸಿದ್ದೇವೆ‌. ಆಂಧ್ರ, ತೆಲಂಗಾಣದಲ್ಲಿ ಸಂಪರ್ಕ ಇಟ್ಟುಕೊಂಡು ಮೂರು ಕಡೆಯವರು ಸೇರಿಕೊಂಡು ಕೆಲಸ ಮಾಡಬೇಕು ಎಂದರು.

ತಿಮ್ಮಾಪೂರ ಏತ ನೀರಾವರಿ ಯೋಜನೆ ಉದ್ಘಾಟನೆ, ಜಲ ಜೀವನ್ ಮಿಷನ್ ಶಂಕುಸ್ಥಾಪನೆ, ಸರಕಾರಿ ಪದವಿ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ, ಕರ್ನಾಟಕ ಸಂಭ್ರಮ-50ರ ಪ್ರಯುಕ್ತ ಕನ್ನಡ ರಥದ ಮೆರವಣಿಗೆಗೆ ಚಾಲನೆ, ಹದಿಹರೆಯದ ಹೆಣ್ಣುಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ವಿತರಣೆ, ಸಿಂಧನೂರು ನಗರ ಸಂಚಾರ ಪೊಲೀಸ್ ಠಾಣೆ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಭಾಗವಹಿಸಿದ್ದರು.

ಇದನ್ನೂ ಓದಿ | DK Shivakumar: ನಿಗಮ ಮಂಡಳಿಗಳಲ್ಲಿ ಶಾಸಕರಷ್ಟೇ ಕಾರ್ಯಕರ್ತರಿಗೂ ಸ್ಥಾನಮಾನ: ಡಿಕೆಶಿ

ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಜಿಲ್ಲೆಯ ಶಾಸಕರುಗಳಾದ ಹಂಪಯ್ಯ ನಾಯಕ್, ಮಾನಪ್ಪ ಡಿ.ವಜ್ಜಲ್, ಬಸವನಗೌಡ ದದ್ದಲ್, ಡಾ.ಎಸ್.ಶಿವರಾಜ್ ಪಾಟೀಲ್, ಆರ್. ಬಸವನಗೌಡ ತುರ್ವಿಹಾಳ, ಶರಣಗೌಡ ಪಾಟೀಲ್ ಬಯ್ಯಾಪುರ ಸೇರಿ ಹಲವು ಮುಖಂಡರು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version