Site icon Vistara News

Safety Rules: ರಾಜಧಾನಿಯ 243 ರೂಫ್‌ ಟಾಪ್‌ ಬಾರ್, ರೆಸ್ಟೋರೆಂಟ್‌ಗಳಲ್ಲಿ ಸೇಫ್ಟಿ ರೂಲ್ಸ್‌ ಬ್ರೇಕ್‌!

Fire accident in koramangala

ಬೆಂಗಳೂರು: ಕೋರಮಂಗಲದ ಮಡ್‌ಪೈಪ್‌ ಕೆಫೆ ಅಗ್ನಿ ಅವಘಡದ ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ ಹಾಗೂ ಅಗ್ನಿಶಾಮಕ ಇಲಾಖೆ, ನಗರದಲ್ಲಿನ ಪಬ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸುರಕ್ಷತಾ ಕ್ರಮಗಳನ್ನು ತಪಾಸಣೆ ಮಾಡುತ್ತಿವೆ. ಈ ನಡುವೆ ರಾಜಧಾನಿಯಲ್ಲಿ 243 ಕೆಫೆ, ಬಾರ್, ರೆಸ್ಟೋರೆಂಟ್‌ಗಳಲ್ಲಿ ಸುರಕ್ಷತಾ ಮಾನದಂಡ ಮತ್ತು ಪರವಾನಗಿ ನಿಯಮಗಳನ್ನು (Safety Rules) ಉಲ್ಲಂಘಿಸಿರುವುದು ಕಂಡುಬಂದಿದೆ.

ಅಗ್ನಿಶಾಮಕ ಇಲಾಖೆಯಿಂದ ನಗರದ ರೂಫ್‌ ಟಾಪ್‌ ಬಾರ್‌, ರೆಸ್ಟೋರೆಂಟ್‌ಗಳಲ್ಲಿ ಸುರಕ್ಷತೆ ಕ್ರಮಗಳನ್ನು ತಪಾಸಣೆ ನಡೆಸಿದ ವೇಳೆ ಹಲವರ ಕಳ್ಳಾಟ ಬಯಲಾಗಿದೆ. ಅನುಮತಿ ಇಲ್ಲದೆ ವಾಣಿಜ್ಯ ಕಟ್ಟಡಗಳಲ್ಲಿ ರೂಫ್‌ಟಾಪ್ ರೆಸ್ಟೋರೆಂಟ್‌ಗಳು ನಡೆಯುತ್ತಿರುವುದು, ಸುರಕ್ಷತಾ ಕ್ರಮಗಳು ಪಾಲಿಸದಿರುವುದು ಕಂಡುಬಂದಿದೆ. ಹೀಗಾಗಿ ಇವುಗಳ ಮೇಲೆ ಬಿಬಿಎಂಪಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಇತ್ತೀಚೆಗೆ ಕೋರಮಂಗಲದಲ್ಲಿ ಸಂಭವಿಸಿದ ಅಗ್ನಿ ಅವಘಡದ ಬಳಿಕ, ರೂಫ್‌ಟಾಪ್ ರೆಸ್ಟೋರೆಂಟ್‌ಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದೇವೆ. ಅಕ್ಟೋಬರ್ 26ರವರೆಗೆ ಅಗ್ನಿ ಸುರಕ್ಷತಾ ಮಾನದಂಡ ಮತ್ತು ಪರವಾನಗಿ ನಿಯಮಗಳನ್ನು ಉಲ್ಲಂಘಿಸಿರುವ 243 ರೆಸ್ಟೋರೆಂಟ್‌ಗಳನ್ನು ಅಗ್ನಿಶಾಮಕ ಇಲಾಖೆಯು ಗುರುತಿಸಿದೆ ಎಂದು ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾರದ ಕೆಲಸದ ದಿನಗಳಲ್ಲಿ ಪ್ರತಿದಿನವೂ ತಪಾಸಣೆ ನಡೆಸಲಾಗುತ್ತಿದೆ. ಅಗ್ನಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವ ರೆಸ್ಟೋರೆಂಟ್‌ಗಳ ಪಟ್ಟಿಯನ್ನು ಮುಂದಿನ ಕ್ರಮ ಕೈಗೊಳ್ಳಲು, ಬಿಬಿಎಂಪಿ ಆಯುಕ್ತರ ಕಚೇರಿಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ | Kochi Blast : ಕೇರಳ ಸ್ಫೋಟ ಬೆನ್ನಲ್ಲೇ ರಾಜ್ಯದಲ್ಲಿ ಹೈ ಅಲರ್ಟ್‌; ಕರಾವಳಿ, ಗಡಿಭಾಗದಲ್ಲಿ ತೀವ್ರ ನಿಗಾ

ಅ. 18ರಂದು ಕೋರಮಂಗಲದ ನೆಕ್ಸಾ ಶೋ ರೂಂ ಕಟ್ಟಡದ ಮೇಲಿರುವ ಮಡ್ ಪೈಪ್ ಕೆಫೆಯಲ್ಲಿ ಸಿಲಿಂಡರ್‌ ಸ್ಫೋಟಗೊಂಡು ಅಗ್ನಿ ಅವಘಡ ಸಂಭವಿಸಿತ್ತು. ಅಡುಗೆ ಕೋಣೆಯಲ್ಲಿ ಸಿಲಿಂಡ್‌ ಸ್ಫೋಟವಾಗಿ ಕಟ್ಟಡದಲ್ಲಿ ಬೆಂಕಿ ಆವರಿಸಿತ್ತು. ನೋಡನೋಡುತ್ತಿದ್ದಂತೆ ನಾಲ್ಕನೇ ಮಹಡಿಯಲ್ಲಿದ್ದ ಕೆಫೆ ಸುಟ್ಟು ಕರಕಲಾಗಿತ್ತು. ಈ ವೇಳೆ ವ್ಯಕ್ತಿಯೊಬ್ಬ ಪ್ರಾಣ ಉಳಿಸಿಕೊಳ್ಳಲು ನಾಲ್ಕನೇ ಮಹಡಿಯಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯಲ್ಲಿ ಒಂದು ಕಾರು ಹಾಗೂ ನಾಲ್ಕೈದು ಬೈಕ್‌ಗಳು ಬೆಂಕಿಗಾಹುತಿಯಾಗಿದ್ದವು.

Exit mobile version