Site icon Vistara News

Karnataka Election 2023: ಶಿಗ್ಗಾಂವಿಯಲ್ಲಿ ಕೇಸರಿ ಮೇನಿಯಾ; ಕಿಚ್ಚನ ಅಬ್ಬರದ ನಡುವೆ ಭಾವುಕರಾದ ಬೊಮ್ಮಾಯಿ

Saffron Mania in Shiggaon Bommai gets emotional amidst the fury of kichcha sudeep Karnataka Election 2023 updates

ಹಾವೇರಿ: ಪ್ರಸಕ್ತ ಬಾರಿಯ ವಿಧಾನಸಭಾ ಚುನಾವಣಾ (Karnataka Election 2023) ಕಣ ಬಿರುಸುಗೊಳ್ಳುತ್ತಿದೆ. ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ನಡೆಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ನಟ ಕಿಚ್ಚ ಸುದೀಪ್ ನೇತೃತ್ವದಲ್ಲಿ ಬೃಹತ್‌ ರೋಡ್‌ ಶೋ ನಡೆಸುವ ಮೂಲಕ ಅಧಿಕೃತವಾಗಿ ಕ್ಯಾಂಪೇನ್‌ಗೆ ಚಾಲನೆ ನೀಡಲಾಯಿತು. ಇತ್ತ ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಕೆಗೂ ಮೊದಲು ನಡೆದ ಸಮಾವೇಶದಲ್ಲಿ ಮತ್ತೊಮ್ಮೆ ಜನರೆದುರು ಭಾವುಕರಾಗಿದ್ದು ಕಂಡುಬಂತು.

ಬುಧವಾರ ಮುಖ್ಯಮಂತ್ರಿ ಕ್ಷೇತ್ರ ಶಿಗ್ಗಾಂವಿ ಪಟ್ಟಣವು ಸಂಪೂರ್ಣ ಕೇಸರಿಮಯವಾಗಿತ್ತು. ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆಗೂ ಮುನ್ನ ಪಟ್ಟಣದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಆ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮುಂದೆ ಶಕ್ತಿ ಪ್ರದರ್ಶನ ಮಾಡಿದರು.

ಇದನ್ನೂ ಓದಿ: Karnataka Election 2023: ಕಾಂಗ್ರೆಸ್ ಅಂದರೆ ಕರಪ್ಷನ್, ಕಮಿಷನ್, ಕ್ರಿಮಿನಲೈಸೇಷನ್: ಗುಡುಗಿದ ಜೆ.ಪಿ. ನಡ್ಡಾ

ಕಿಚ್ಚನ ಸಖತ್‌ ಎಂಟ್ರಿ

ಇನ್ನು ಖ್ಯಾತ ನಟ ಕಿಚ್ಚ ಸುದೀಪ್‌ ಅವರನ್ನು ಬಿಜೆಪಿಯಲ್ಲಿ ಪ್ರಚಾರಕ್ಕೆ ಒಪ್ಪಿಸುವಲ್ಲಿ ಸಫಲರಾಗಿದ್ದ ಬೊಮ್ಮಾಯಿ ಅವರಿಗೆ ನಾಮಪತ್ರ ಸಲ್ಲಿಕೆ ದಿನ ತಾರಾ ಮೆರಗು ಬಂದಿತ್ತು. ಸುದೀಪ್‌ ಅವರು ಹೆಲಿಕಾಪ್ಟರ್‌ನಲ್ಲಿ ಶಿಗ್ಗಾಂವಿ ಪಟ್ಟಣಕ್ಕೆ ಸಖತ್ ಎಂಟ್ರಿ ಕೊಟ್ಟರು. ಕೊರಳಲ್ಲಿ ಕೇಸರಿ ಶಾಲು ಹಾಕಿಸಿಕೊಂಡು‌ ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿದ ಸುದೀಪ್‌, ತಮ್ಮನ್ನು ನೋಡಲು ಸೇರಿದ್ದ ಜನರತ್ತ ಕೈ ಬೀಸಿ ಅಭಿಮಾನಿಗಳನ್ನು ಖುಷಿಗೊಳಿಸಿದರು.

ಮೊದಲಿಗೆ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ, ನಡ್ಡಾ ಹಾಗೂ ಸುದೀಪ್ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಅಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ರೋಡ್ ಶೋ ವೇಳೆ ಜನರತ್ತ ಕೈ ಬೀಸಿದ ಸುದೀಪ್ ಅವರನ್ನು ನೋಡಲು ಜನರು ಮುಗಿಬಿದ್ದಿದ್ದರು.

ಬಳಿಕ ವೇದಿಕೆಯಲ್ಲಿ ಮಾತನಾಡಿದ ಕಿಚ್ಚ ಸುದೀಪ್‌, ತಾವು ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡಿದ್ದಾಗಿ ಹೇಳಿಕೊಂಡರು. ಅಲ್ಲದೆ, ಬೊಮ್ಮಾಯಿ ಮಾಮ ಈಗ ಒಬ್ಬರೇ ಇಲ್ಲ, ಅವರ ಜತೆಗೆ ನಾನೂ ಇದ್ದೇನೆ ಎಂದು ಸಿಎಂ ಪರ ಪ್ರಚಾರ ಮಾಡುವ ಮೂಲಕ ಅವರಿಗೇ ಮತ ಹಾಕುವಂತೆ ಜನರಿಗೆ ಕೋರಿದರು.

ಭಾವುಕರಾದ ಸಿಎಂ ಬೊಮ್ಮಾಯಿ

ರೋಡ್ ಶೋ ಬಳಿಕ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಮತ್ತೊಮ್ಮೆ ಜನರೆದುರು ಭಾವುಕರಾದರು. ನನ್ನ‌ ಸಾವಾದಾರೆ ಶಿಗ್ಗಾಂವಿ ಮಣ್ಣಲ್ಲಿ ಹೂಳಬೇಕು ಎಂದು ಹೇಳಿ ಕಣ್ಣೀರು ಹಾಕಿದರು. ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಾತನಾಡಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಅಂದರೆ ಕಮಿಷನ್, ಭ್ರಷ್ಟಾಚಾರ ಎಂದು ಹರಿಹಾಯ್ದರು.

ಇದನ್ನೂ ಓದಿ: Karnataka Elections 2023 : ಜೆಡಿಎಸ್‌ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ದೇವೇಗೌಡರ ಕುಟುಂಬದ 8 ಮಂದಿ, ಭವಾನಿ ರೇವಣ್ಣಗೂ ಸ್ಥಾನ

ಬಹಿರಂಗ ಸಮಾವೇಶದ ಬಳಿಕ ಶಿಗ್ಗಾಂವಿ ತಹಸೀಲ್ದಾರ್‌ ಕಚೇರಿಗೆ ತೆರಳಿದ ಬಸವರಾಜ ಬೊಮ್ಮಾಯಿ ಅವರು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಅವರಿಗೆ ಜೆ.ಪಿ. ನಡ್ಡಾ, ಸುದೀಪ್, ಗೋವಿಂದ ಕಾರಜೋಳ ಸಾಥ್ ನೀಡಿದರು.

Exit mobile version