ಸಾಗರ: ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ (Sagar News ) ಶಿಡ್ಲಿಘಟ್ಟ, ಕಾತೂರು, ತಾಳಗುಪ್ಪ, ಗುಂಡ್ಲ ಗ್ರಾಮದ 140ಕ್ಕೂ ಹೆಚ್ಚು ರೈತರ ಮೇಲೆ ಅರಣ್ಯ ಇಲಾಖೆಯು ಕಾನೂನುಬಾಹಿರವಾಗಿ 64ರ ಕಾಯಿದೆ ಅಡಿ ದಾಖಲಿಸಿರುವ ಪ್ರಕರಣವನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಗುರುವಾರ (ಡಿ.೨೯) ಮಲೆನಾಡು ರೈತ ಹೋರಾಟ ಸಮಿತಿಯ ವತಿಯಿಂದ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್, ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ ಶಿಡ್ಡಿಹಳ್ಳಿ ಕಾತೂರು, ತಾಳಗುಪ್ಪ, ಗೆಂಡ್ಲ ಗ್ರಾಮದ 140 ಕ್ಕೂ ಹೆಚ್ಚು ರೈತರ ವಿರುದ್ಧ ಅರಣ್ಯ ಇಲಾಖೆಯು ಕಾನೂನುಬಾಹಿರವಾಗಿ ಕೇಸು ದಾಖಲಿಸಿರುವ ಕ್ರಮ ಖಂಡನೀಯ. ಜಿಲ್ಲಾಧಿಕಾರಿಗಳು ರೈತರ ಮೇಲೆ ಹಾಕಿರುವ ಕೇಸು ಕಾನೂನುಬಾಹಿರವೆಂದು ಪರಿಶಿಷ್ಟ ಕಲ್ಯಾಣ ಇಲಾಖೆಯ ರಾಜ್ಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಆದರೆ, ಅರಣ್ಯ ಇಲಾಖೆಯು ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 17 ತಿಂಗಳಿನಿಂದ ಈ ಭಾಗದ ರೈತರು ತಮ್ಮ ಮೇಲೆ ಹಾಕಿರುವ ಕೇಸು ಹಿಂದಕ್ಕೆ ಪಡೆದು ಹಕ್ಕುಪತ್ರ ನೀಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಆದರೆ, ಸೊರಬ ಕ್ಷೇತ್ರದ ಶಾಸಕರು ಸಂಕಷ್ಟದಲ್ಲಿರುವ ರೈತರ ಬಗ್ಗೆ ಕಾಳಜಿ ವಹಿಸದೆ ಇರುವುದು ರೈತ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ 90 ಸಾವಿರಕ್ಕೂ ಹೆಚ್ಚು ಜನರು ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿದ್ದಾರೆ. ಅವರು ಯಾರಿಗೂ ನೋಟಿಸು ಕೊಡದೆ ಕೇವಲ ಸೊರಬ ತಾಲೂಕಿನ 140 ರೈತರ ವಿರುದ್ಧ ಕೇಸ್ ದಾಖಲಿಸಿರುವುದು ದುರುದ್ದೇಶಪೂರಿತವಾಗಿದೆ ಎಂದರು.
ಸ್ವತಃ ಜಿಲ್ಲಾಧಿಕಾರಿಗಳೇ ರೈತರ ಮೇಲೆ ದಾಖಲಿಸಿರುವ ಪ್ರಕರಣ ಕಾನೂನುಬಾಹಿರ ಎಂದು ಹೇಳಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ರೈತರನ್ನು ಒಕ್ಕಲೆಬ್ಬಿಸಲು ಪಣತೊಟ್ಟು ನಿಂತಂತೆ ಕಾಣುತ್ತಿದೆ. ಸತ್ತು ಹೋಗಿರುವ ಸರ್ಕಾರ, ಬೇಜವಾಬ್ದಾರಿ ಮುಖ್ಯಮಂತ್ರಿ, ಸಂಸದರು, ಶಾಸಕರಿಂದಾಗಿ ರೈತರು ನೆಮ್ಮದಿಯಿಂದ ನಿದ್ರೆ ಮಾಡಲು ಸಹ ಸಾಧ್ಯವಾಗುತ್ತಿಲ್ಲ. ರೈತರ ಮೇಲೆ ಕಾನೂನುಬಾಹಿರವಾಗಿ ಹಾಕಿರುವ ಕೇಸು ಅನ್ನು ತಕ್ಷಣ ಹಿಂದಕ್ಕೆ ಪಡೆಯದಿದ್ದರೆ ಉಪವಿಭಾಗಾಧಿಕಾರಿ ಕಚೇರಿಗೆ ಬೀಗ ಜಡಿದು ಕಾನೂನುಭಂಗ ಚಳವಳಿ ಹಮ್ಮಿಕೊಳ್ಳುವುದು ಅನಿವಾರ್ಯ ವಾಗುತ್ತದೆ. ನಾವು ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಶಾಮಿಯಾನ ಗುತ್ತಿಗೆ ನೀಡದ್ದಕ್ಕೆ ಪುರುಷೋತ್ತಮ ಬಿಳಿಮಲೆ ಸುಳ್ಳು ಆರೋಪ: ಡಾ. ಮಹೇಶ್ ಜೋಶಿ ಹೇಳಿಕೆ
ಸಮಿತಿಯ ಸಾಗರ ತಾಲೂಕು ಸಂಚಾಲಕ ಧರ್ಮೇಂದ್ರ ಶಿರವಾಳ ಮಾತನಾಡಿದರು. ಸೊರಬ ಸಂಚಾಲಕ ಪರಶುರಾಮ ಶಿಡ್ಲಿಘಟ್ಟ, ಪ್ರಮುಖರಾದ ಅಜೀಜ್ ಸಾಬ್, ನಾಗರಾಜ್, ವೀರೇಶ್ ಗೌಡ, ಮಹಾದೇವಪ್ಪ, ಕಮಲಮ್ಮ, ಪಕೀರಮ್ಮ, ಗೌರಮ್ಮ, ಕೃಷ್ಣಪ್ಪ ಇನ್ನಿತರರು ಹಾಜರಿದ್ದರು.
ಇದನ್ನೂ ಓದಿ | ಹಳೆ ಮೈಸೂರಿನಲ್ಲಿ ಶೇ.50 ಸೀಟು ಗೆಲ್ಲುತ್ತದೆ ಬಿಜೆಪಿ: ಬೂತ್ ವಿಜಯ ಅಭಿಯಾನಕ್ಕೆ ಅಮಿತ್ ಶಾ ಚಾಲನೆ ಎಂದ ಡಿ.ವಿ. ಸದಾನಂದಗೌಡ