ಸಾಗರ: ಇಲ್ಲಿನ ಮಾಜಿ ಶಾಸಕ ಬಿ.ಧರ್ಮಪ್ಪ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 87ವರ್ಷ ವಯಸ್ಸಾಗಿತ್ತು ಮತ್ತು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಇವರಿಗೆ ಪತ್ನಿ ಸುನಂದಮ್ಮ, ಪುತ್ರ ಸಂತೋಷ್ ಮತ್ತು ಪುತ್ರಿ ರೂಪಾ ಇದ್ದಾರೆ. ಬಿ.ಧರ್ಮಪ್ಪ ನಿಧನಕ್ಕೆ ಅವರ ಅಪಾರ ಅಭಿಮಾನಿಗಳು, ಬಂಧುಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಸ್ವಗ್ವಾಮ ಗಿಳಾಲಗುಂಡಿಯಲ್ಲಿ ಶನಿವಾರ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ನಂತರ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಧರ್ಮಪ್ಪನವರು ವೃತ್ತಿಯಲ್ಲಿ ವಕೀಲರಾಗಿದ್ದರು. ರಾಮಕೃಷ್ಣ ಹೆಗಡೆ, ಕಾಗೋಡು ತಿಮ್ಮಪ್ಪನವರ ಸಮಕಾಲೀನರು. 80ರ ದಶಕದಲ್ಲಿ ಜನತಾದಳದಿಂದ ಸ್ಪರ್ಧಿಸಿ, ಕಾಂಗ್ರೆಸಿನ ಎಲ್.ಟಿ. ತಿಮ್ಮಪ್ಪ ಹೆಗಡೆಯವರನ್ನು ಸೋಲಿಸಿ ಸಾಗರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಶಾಸಕರಾಗಿದ್ದ ಸಂದರ್ಭದಲ್ಲಿ ಸಾಗರದ ಮುಳುಗಡೆ ಪ್ರಾಂತ್ಯವಾದ ತುಮರಿ, ಬ್ಯಾಕೋಡು ಭಾಗದಲ್ಲಿ ಸಾಕಷ್ಟು ಕೆಲಸ ಮಾಡಿ ಜನಮನ್ನಣೆ ಪಡೆದುಕೊಂಡಿದ್ದರು. ಆಗಿನ ತಾಲೂಕು ಬೋರ್ಡ್‍ಗೆ (ಈಗಿನ ತಾಲೂಕು ಪಂಚಾಯತ್) ಆನಂದಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು, ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ: ಪತ್ನಿ-ಮಕ್ಕಳನ್ನು ನೋಡಿ ಬರುತ್ತೇನೆ ಎಂದು ಅಮೆರಿಕಕ್ಕೆ ಹೊರಟ ಶಾಸಕ; 10 ದಿನ ಲಭ್ಯವಿರೋಲ್ಲ ಇವರು
ಇವರ ನಿಧನಕ್ಕೆ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಮಾಜಿ ವಿಧಾನ ಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯೆ ಪ್ರಫುಲ್ಲ ಮಧುಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಆರ್. ಜಯಂತ್,ನಗರಸಭಾ ಸದಸ್ಯ ತಸ್ರೀಫ್ ಇಬ್ರಾಹಿಂ, ಮಹಮ್ಮದ್ ಖಾಸಿಂ,ಸಾಗರ ವಕೀಲರ ಸಂಘದ ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.