ಸಾಗರ: “ಮಿಸ್ಟರ್ ಹಾಲಪ್ಪ, ಸಾಗರ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಕೊಡುಗೆಯೇನು? ನಾನು ಮತ್ತು ಕಾಗೋಡು ತಿಮ್ಮಪ್ಪ ಅವರು ನೀಡಿದ ಕೊಡುಗೆ ಏನು ಎನ್ನುವುದನ್ನು ಚರ್ಚೆ ಮಾಡಲು ಗಾಂಧಿ ಮೈದಾನಕ್ಕೆ ಬನ್ನಿ” ಎಂದು ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಸವಾಲು ಹಾಕಿದ್ದಾರೆ.
ಇಲ್ಲಿನ ಮಹಿಳಾ ಸಮಾಜದ ಆವರಣದಲ್ಲಿ ಗುರುವಾರ (ಮಾ.30) ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಸಾಗರಕ್ಕೆ ಕುಡಿಯುವ ನೀರು ತರಲು 70 ಕೋಟಿ ರೂ. ಬಂದಿದ್ದು ನನ್ನ ಹಾಗೂ ಕಾಗೋಡು ತಿಮ್ಮಪ್ಪ ಅವಧಿಯಲ್ಲಿ ಎಂಬುದು ನೆನಪಿರಲಿ. ತಹಸೀಲ್ದಾರ್ ಕಚೇರಿ ನಿರ್ಮಾಣಕ್ಕೆ ಹಣ ಬಂದಿದ್ದು ಕಾಗೋಡು ತಿಮ್ಮಪ್ಪ ಅವರ ಅವಧಿಯಲ್ಲಿ ಎನ್ನುವುದನ್ನು ಮರೆಯಬೇಡಿ. ತಹಸೀಲ್ದಾರ್ ಕಚೇರಿಯನ್ನು ಈತನಕ ಲೋಕಾರ್ಪಣೆ ಮಾಡಲು ಆಗದ ನೀವು ಮಾವ, ಅಳಿಯ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದ್ದು, ಚರ್ಚೆಗೆ ಬನ್ನಿ” ಎಂದು ಸವಾಲು ಎಸೆದರು.
“ನನಗೆ ಟಿಕೆಟ್ ಸಿಗುವುದಿಲ್ಲ ಎಂದು ಹಾಲಪ್ಪ ಹೋದಲ್ಲಿ ಬಂದಲ್ಲಿ ಹೇಳಿದ್ದರು. ಈಗ ನನಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟಿದೆ. ಆದರೆ ಬಿಜೆಪಿಯಲ್ಲಿ ಹಾಲಪ್ಪ ಅವರಿಗೆ ಟಿಕೆಟ್ ಕೊಡಬೇಡಿ ಎಂದು ಸಭೆಗಳನ್ನು ನಡೆಸಲಾಗುತ್ತಿದೆ. ಒಂದೊಮ್ಮೆ ಹಾಲಪ್ಪ ಅವರಿಗೆ ಟಿಕೆಟ್ ಕೊಟ್ಟರೆ ಮತದಾರರ ಕೈ ಕಾಲು ಹಿಡಿದು ಅವರನ್ನು ಸೋಲಿಸುತ್ತೇವೆ ಎಂದು ಬಿಜೆಪಿ ಹಿರಿಯ ನಾಯಕರೇ ಸಭೆ ನಡೆಸಿ ಕರೆ ನೀಡುತ್ತಿದ್ದಾರೆ. ಎಂಡಿಎಫ್‍ನಲ್ಲಿ ಗಲಾಟೆ ಮಾಡಿಸಿ ಬ್ರಾಹ್ಮಣ ಸಮುದಾಯದ ಶ್ರೀಪಾದ ಹೆಗಡೆ, ಲಿಂಗಾಯಿತ ಸಮಾಜದ ಜಗದೀಶ್ ಗೌಡ ಅವರ ಮೇಲೆ ಹಲ್ಲೆ ನಡೆಸಿದ್ದೇ ಹಾಲಪ್ಪ ಅವರ ಸಾಧನೆಯಾಗಿದೆ. ಭ್ರಷ್ಟಾಚಾರದ ಹಣ, ಅಹಂಕಾರವನ್ನು ತುಂಬಿಕೊಂಡಿರುವ ಶಾಸಕ ಹಾಲಪ್ಪ ಅವರ ದಬ್ಬಾಳಿಕೆ ರಾಜಕಾರಣವನ್ನು ಸಾಗರ ಕ್ಷೇತ್ರದ ಜನರು ಸಹಿಸುವುದಿಲ್ಲ” ಎಂದರು.
ಇದನ್ನೂ ಓದಿ: Indore Temple Tragedy: ಇಂದೋರ್ ದೇಗುಲದಲ್ಲಿ ಮೆಟ್ಟಿಲುಬಾವಿ ಕುಸಿದು 13 ಜನ ಸಾವು; ಮೋದಿ ಸಂತಾಪ
“ಹಿಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಕಾರಣಕ್ಕೆ ಜನರು ಹಾಲಪ್ಪ ಅವರ ಕೈ ಹಿಡಿದಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ಬಿಜೆಪಿ ವರ್ತನೆಯನ್ನು ರಾಜ್ಯದ ಜನರು ಯಾವತ್ತೂ ಕ್ಷಮಿಸುವುದಿಲ್ಲ. ಸಾಗರ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದೂ ನಿವೇಶನ ಕೊಟ್ಟಿಲ್ಲ, ತಮ್ಮ ನೆಂಟರಿಗೆ ಬಗರ್ ಹುಕುಂ ಭೂಮಿ ಕೊಟ್ಟಿದ್ದಾರೆ. ಎಲ್ಲೆಂದರಲ್ಲಿ ಮದ್ಯದಂಗಡಿ ತೆರೆದು ಸಾಗರವನ್ನು ಗೋವಾವನ್ನಾಗಿ ಮಾರ್ಪಡಿಸುತ್ತಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರ ಜನ ವಿರೋಧಿಯಾಗಿದೆ. ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯವಿದ್ದರೂ ಕಾಗೋಡು ನೇತೃತ್ವದಲ್ಲಿ ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತೇವೆ. ಮೇ 10ರಂದು ನಡೆಯುವ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸುವ ಮೂಲಕ ಎಲ್ಲ ವರ್ಗದ ಹಿತ ಕಾಯುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ” ಎಂದು ಮನವಿ ಮಾಡಿದರು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, “ರಾಜ್ಯದಲ್ಲಿ ಕಾಂಗ್ರೆಸ್ ಮಾತ್ರ ಎಲ್ಲ ವರ್ಗವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ, ಸಾಮಾಜಿಕ ನ್ಯಾಯ ಕಲ್ಪಿಸುವ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜನರಿಗೆ ಏನೆಲ್ಲ ಸೌಲಭ್ಯ ಕೊಡುತ್ತೇವೆ ಎಂದು ಗ್ಯಾರೆಂಟಿ ಕಾರ್ಡ್ ಮೂಲಕ ಭರವಸೆ ನೀಡಿದ್ದಾರೆ. ಸಾಗರ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ” ಎಂದರು.
ಇದನ್ನೂ ಓದಿ: Karnataka Election: ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿ; ನಗದು, ಮದ್ಯ ಸೇರಿ 53.28 ಲಕ್ಷ ರೂ.ಮೌಲ್ಯದ ವಸ್ತುಗಳ ವಶ
ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ರಮೇಶ್ ಮಾತನಾಡಿದರು. ವೇದಿಕೆಯಲ್ಲಿ ಸುರೇಶ ಬಾಬು, ಮಧು ಮಾಲತಿ, ಸುಮಂಗಲ ರಾಮಕೃಷ್ಣ, ಜ್ಯೋತಿ ಕೋವಿ, ರವಿ ಕುಮಾರ್, ಕೆ.ಹೊಳೆಯಪ್ಪ, ಮಕ್ಬೂಲ್ ಅಹ್ಮದ್, ಎಲ್.ಟಿ. ತಿಮ್ಮಪ್ಪ ಹೆಗಡೆ, ಗಣಪತಿ ಮಂಡಗಳಲೆ, ಸಬೀನಾ ತನ್ವೀರ್, ಅಣ್ಣಪ್ಪ ಭೀಮನೇರಿ, ತಸ್ರೀಫ್ ಇಬ್ರಾಹಿಂ, ಎಲ್.ಚಂದ್ರಪ್ಪ, ಅಜೀಂ ಇನ್ನಿತರರು ಹಾಜರಿದ್ದರು.