Site icon Vistara News

ಲೇಖಕ ಕೆ.ಕೆ.ಗಂಗಾಧರನ್‌ಗೆ 2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ

sahitya akademi award for translation 2023 writer KK Gangadharan

ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಅನುವಾದಿತ ಕೃತಿಗಳಿಗೆ ನೀಡಲಾಗುವ 2023ನೇ ಸಾಲಿನ ಪ್ರಶಸ್ತಿಗಳನ್ನು (kendra sahitya akademi award for translation 2023) ಘೋಷಣೆ ಮಾಡಿದ್ದು, ಲೇಖಕ ಕೆ.ಕೆ.ಗಂಗಾಧರನ್ ಅವರ ‘ಮಲಯಾಳಂ ಕತೆಗಳು’ ಕನ್ನಡ ವಿಭಾಗದಿಂದ ಆಯ್ಕೆಯಾಗಿದೆ. ಕನ್ನಡದ ಲೇಖಕ ಕೆ.ಕೆ.ಗಂಗಾಧರನ್ ಅವರ ಕೃತಿ ಸೇರಿ 24 ಭಾಷೆಗಳ ಅನುವಾದಿತ ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪ್ರಶಸ್ತಿಯು 50 ಸಾವಿರ ನಗದು, ಸ್ಮರಣಿಕೆಯನ್ನು ಒಳಗೊಂಡಿದೆ.

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರ ‘ಮಕ್ಕಳಿಗೆ ನನ್ನ ನೆಚ್ಚಿನ ಕತೆಗಳು’ ಕೃತಿಯ ಸಂಸ್ಕೃತ ಅನುವಾದ ‘ರುಚಿರಃ ಬಾಲಕಥಹಃ’ (ಅನುವಾದಕಿ: ನಾಗರತ್ನ ಹೆಗಡೆ) ಪ್ರಶಸ್ತಿಗೆ ಆಯ್ಕೆಯಾಗಿದೆ. ಕೋಟ ಶಿವರಾಮ ಕಾರಂತ ಅವರ ‘ಚೋಮನ ದುಡಿ’ ಕೃತಿಯ ಕಶ್ಮೀರಿ ಭಾಷೆಯ ಅನುವಾದ ‘ಚೋಮ ಸುನ್ ದೋಲ್’ (ಅನುವಾದಕ: ಗುಲ್‌ಝರ್ ಅಹ್ಮದ್ ರಥರ್) ಕೃತಿಯೂ ಆಯ್ಕೆಯಾಗಿದೆ.

ಡಾ. ಎಂ.ಎಸ್ ಆಶಾದೇವಿ, ಕೇಶವ ಮಳಗಿ ಮತ್ತು ಪ್ರೊ ಎಸ್. ಸಿರಾಜ್ ಅಹ್ಮದ್ ಅವರು ಕನ್ನಡ ವಿಭಾಗದ ತೀರ್ಪುಗಾರರಾಗಿದ್ದರು.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ: ಇತಿಹಾಸದ ಸಂಕ್ರಮಣ ಕಾಲದಲ್ಲಿ ಹಿಂದೂಗಳ ಸಹಾಯ ನಿರೀಕ್ಷಿಸಿದ್ದ ಪರ್ಷಿಯನ್ನರು

ಕೇರಳದ ಕಾಸರಗೋಡು ಜಿಲ್ಲೆಯ ಪಾತನಡ್ಕ ಎನ್ನುವ ಹಳ್ಳಿಯಲ್ಲಿ ಜನಿಸಿದ ಕೆ.ಕೆ. ಗಂಗಾಧರನ್‌ ಅವರು ಬಾಲ್ಯವನ್ನು ಕೊಡಗಿನ ಸೋಮವಾರಪೇಟೆಯ ಸಮೀಪದ ಕಬ್ಬಿಣಸೇತುವೆಯಲ್ಲಿ ಕಳೆದರು. ಕಾಜೂರು, ಸೋಮವಾರಪೇಟೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಿಂದ ಬಿಎಸ್‌ಸಿ ಪದವಿ ಪಡೆದಿದ್ದಾರೆ. ಹಾಸನದ ಕೊಥಾರಿ ಕಾಫಿ ಕ್ಯೂರಿಂಗ್‌ ವರ್ಕ್ಸ್‌ನಲ್ಲಿ ವೃತ್ತಿ (1970) ಆರಂಭಿಸಿದ ಅವರು ನಂತರ ಅಂಚೆ ಇಲಾಖೆಯ ರೈಲ್ವೆ ಮೇಲ್‌ ಸರ್ವಿಸ್‌ ವಿಭಾಗದಲ್ಲಿ (1974) ಉದ್ಯೋಗದಲ್ಲಿರುವ ಅರಸೀಕೆರೆ, ತುಮಕೂರು, ಮೈಸೂರು, ಮಡಿಕೇರಿ ಹಾಗೂ ಬೆಂಗಳೂರುಗಳಲ್ಲಿ ಕೆಲಸ ಮಾಡಿದ ಅವರು 2009ರಲ್ಲಿ ನಿವೃತ್ತರಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

Exit mobile version