ಬೆಂಗಳೂರು: ‘ಸಕಾಲ’ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ (Sakala scheme) ಆಗಿದ್ದು, ಸರ್ಕಾರಿ ಸೇವೆಗಳನ್ನು ಅಧಿಕಾರಿಗಳು ವಿಳಂಬವಿಲ್ಲದೆ ಜನರ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ವಿಧಾನಸೌಧದಲ್ಲಿ ನಡೆದ “ಸಕಾಲ ಪ್ರಗತಿ ಪರಿಶೀಲನಾ ಸಭೆ”ಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, “ಸರ್ಕಾರ ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಲು ಇರುವ ಏಕೈಕ ಮಾರ್ಗ ಸಕಾಲ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು, ಜನರಿಗೆ ವಿಳಂಬವಿಲ್ಲದೆ ಎಲ್ಲಾ ಸೇವೆಗಳೂ ಲಭ್ಯವಾಗುವಂತಿರಬೇಕು ಎಂಬುದೇ ಸರ್ಕಾರ ಉದ್ದೇಶ. ಆದರೆ, ಕೆಲವು ಸೇವೆಗಳು ವಿಳಂಭವಾಗುತ್ತಿರುವುದು ಸರಿಯಲ್ಲ” ಎಂದು ಎಚ್ಚರಿಕೆ ನೀಡಿದರು.
ಮುಂದುವರಿದು, “ಸಕಾಲ ಸೇವೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಆದರೆ, ಸುಧಾರಣೆಯಾಗಬೇಕಾದ್ದು ಇನ್ನೂ ಬಹಳಷ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಕಾಲ ಸೇವೆ ವಿಳಂಬವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ನಮಗೆ ವರ ಕೊಟ್ಟು ಇಲ್ಲಿ ಕೂರಿಸಿದವರನ್ನೇ ಮನೆಯ ಹೊರಗೆ ಕೂರಿಸಿ ಸತಾಯಿಸುವ ಕೆಲಸ ಆಗಬಾರದು. ಸಕಾಲ ಸೇವೆಯನ್ನು ಅಧಿಕಾರಿಗಳು ನಾಮಕಾವಸ್ತೆಯಂತೆ ಹಗುರವಾಗಿ ತೆಗೆದುಕೊಳ್ಳಬಾರದು” ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ | Congress Karnataka: ಅಪಪ್ರಚಾರ ಬಿಡಿ, ಸರ್ಕಾರದಲ್ಲಿ ದುಡ್ಡಿಲ್ಲ ಎನ್ನಬೇಡಿ: ಸ್ವಪಕ್ಷ ನಾಯಕರ ಮೇಲೆ ಸಿದ್ದರಾಮಯ್ಯ ಕಿಡಿ
“ಸರ್ಕಾರಿ ಸೇವೆ ಒದಗಿಸುವುದು ನಮ್ಮ ಕರ್ತವ್ಯ, ಸೇವೆಯನ್ನು ಪಡೆಯುವುದು ಜನರ ಮೂಲಭೂತ ಹಕ್ಕು. ಹೀಗಾಗಿ ಅಧಿಕಾರಿಗಳು ಸಕಾಲ ಸೇವೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಜನರ ಮನೆ ಬಾಗಿಲಿಗೆ ಸರ್ಕಾರವನ್ನು ತಲುಪಿಸಬೇಕು. ಸರ್ಕಾರದ ಜೊತೆ ಕೈಜೋಡಿಸಿ ಜನರಿಗೆ ಉತ್ತಮ ಸೇವೆ ನೀಡಲು ಮುಂದಾಗಬೇಕು” ಎಂದು ಅವರು ಕಿವಿಮಾತು ಹೇಳಿದರು.
ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಮಾತನಾಡಿ, “ಸಕಾಲ ಕಾಯ್ದೆಯ ಅಡಿಯಲ್ಲಿ 100 ಇಲಾಖೆಗಳಿಂದ ಒಟ್ಟು 1201 ಸೇವೆಗಳನ್ನು ಜನರಿಗೆ ನೀಡಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ 29 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ ಶೇ.5 ರಷ್ಟು ಸೇವೆಗಳನ್ನು ವಿಳಂಬವಾಗಿ ನೀಡಲಾಗಿದೆ. ಶೇ.07 ರಷ್ಟು ಅರ್ಜಿಗಳನ್ನು ತಿರಸ್ಕೃತಗೊಳಿಸಲಾಗಿದೆ. ಸಕಾಲ ಕಾಯ್ದೆ 5(2) ರ ಪ್ರಕಾರ ಯಾವುದೇ ಅರ್ಜಿಯನ್ನು ತಿರಸ್ಕರಿಸಬೇಕಾದರೆ ಸೂಕ್ತ ಕಾರಣವನ್ನು ನಮೂದಿಸಬೇಕು. ಆದರೆ, ಅನೇಕರು ಈ ನಿಯಮವನ್ನು ಪಾಲಿಸಿಲ್ಲ” ಎಂದು ಅಸಮಾಧಾನ ಹೊರಹಾಕಿದರು.
ಸಭೆಯಲ್ಲಿ ಕಂದಾಯ ಆಯುಕ್ತರಾದ ಸುನೀಲ್ ಕುಮಾರ್ ಸೇರಿದಂತೆ ಎಲ್ಲಾ ಇಲಾಖೆಯ ಕಾರ್ಯದರ್ಶಿಗಳೂ ಹಾಜರಿದ್ದರು.
‘ಸಕಾಲ’ ಸೇವೆಯೂ ಡಿಜಿಟಲ್
ಸಭೆಯಲ್ಲಿ ಸಕಾಲ ಸೇವೆಯನ್ನೂ ಡಿಜಿಟಲೀಕರಣಗೊಳಿಸುವ ಬಗ್ಗೆಯೂ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಂದಾಯ ಇಲಾಖೆಯಲ್ಲಿ ಈಗಾಗಲೇ ಎಲ್ಲಾ ಸೇವೆಯನ್ನೂ ಆನ್‌ಲೈನ್ ಮೂಲಕವೇ ನೀಡಲಾಗುತ್ತಿದೆ. ಸಕಾಲ ಸೇವೆಯನ್ನೂ ಏಕೆ ಆನ್‌ಲೈನ್ ಮೂಲಕ ನೀಡಬಾರದು? ಎಂದು ಪ್ರಶ್ನಿಸಿದ ಸಚಿವರು, ಸಮಾಜದಲ್ಲಿ ಡಿಜಿಟಲ್ ಸಾಕ್ಷರತೆ ಹೆಚ್ಚುತ್ತಿದೆ. ಹೀಗಾಗಿ ಆನ್ಲೈನ್ ಸೇವೆ ಜನರಿಗೆ ಸಮಸ್ಯೆ ಆಗುತ್ತಿದೆ ಎಂಬುದು ಸುಳ್ಳು ಹೇಳಿಕೆ. ಕಂದಾಯ ಇಲಾಖೆಯಲ್ಲೇ ಇದು ಸಾಧ್ಯವಾಗಿದೆ ಎಂದ ಮೇಲೆ ಉಳಿದ ಕಡೆ ಏಕೆ ಸಾಧ್ಯವಿಲ್ಲ. ಇನ್ಮುಂದೆ ಸಕಾಲ ಅರ್ಜಿಯನ್ನೂ ಆನ್‌ಲೈನ್ ಮೂಲಕವೇ ಸ್ವೀಕರಿಸಿ ಎಂದು ಸಲಹೆ ನೀಡಿದರು.
“ಪ್ರತಿ ಹಳ್ಳಿಯಲ್ಲೂ ಈಗ ಸೈಬರ್ ತಾಣಗಳಿವೆ. ಸರ್ಕಾರದ ಗ್ರಾಮ-1 ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಮತ್ತು ಮೊಬೈಲ್‌ಗೂ ನೀಡುವ ಉದ್ದೇಶ ಸರ್ಕಾರಕ್ಕಿದೆ. ಇದು ಸಾಧ್ಯವಾದರೆ ಜನ ಮೊಬೈಲ್ ಮೂಲಕವೇ ಸಕಾಲ ಅರ್ಜಿ ಸಲ್ಲಿಸಿ ಸೇವೆಯನ್ನೂ ಪಡೆಯಬಹುದು. ಸಕಾಲ ಸೇವೆ ಡಿಜಿಟಲೀಕರಣಗೊಂಡರೆ ಡಿಜಿಟಲ್ ಹೆಜ್ಜೆ ಗುರುತಿನ (ಫುಟ್ ಪ್ರಿಂಟ್) ಮೂಲಕ ಅರ್ಜಿ ಎಲ್ಲಿದೆ? ವಿಳಂಬಕ್ಕೆ ಕಾರಣವೇನು? ಎಂಬ ಕುರಿತ ಮಾಹಿತಿ ನಮಗೂ ಲಭ್ಯವಾಗುತ್ತದೆ. ಹೀಗಾಗಿ ಮುಂದಿನ 5 ವರ್ಷದಲ್ಲಿ ಸಕಾಲ ಸಂಪೂರ್ಣ ಡಿಜಿಟಲ್ ಆಗಬೇಕು” ಎಂದು ಸೂಚಿಸಿದರು.
ಸಕಾಲಕ್ಕೆ ಮತ್ತಷ್ಟು ಹೊಸ ಸೇವೆ ಸೇರ್ಪಡೆ!
ಸಕಾಲ ಕಾಯ್ದೆಯ ಅಡಿಯಲ್ಲಿ ಈಗಾಗಲೇ ಹಲವಾರು ಸೇವೆಗಳನ್ನು ಜನರಿಗೆ ಒದಗಿಸಲಾಗುತ್ತಿದೆ. ಇದರ ಜೊತೆಗೆ ಮತ್ತಷ್ಟು ಸೇವೆಗಳನ್ನು ಹೊಸದಾಗಿ ಸೇರಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಅಧೀನ ಇಲಾಖೆಗಳಾದ ಕರ್ನಾಟಕ ರಾಜ್ಯ ಶುಶ್ರೂಷೆ ಪರಿಷತ್ತು, ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿ, ಕರ್ನಾಟಕ ರಾಜ್ಯ ಶುಶ್ರೂಷೆ ಪರೀಕ್ಷಾ ಮಂಡಳಿ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 130 ಹೊಸ ಸೇವೆಗಳನ್ನು ನೀಡಲು ಪ್ರಸ್ತಾವನೆ ಸಲ್ಲಿಸಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂ ಅಧೀನ ಇಲಾಖೆಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಂಶೋಧನೆ ಮತ್ತು ತರಬೇತಿ ಇಲಾಖೆ ಈಗಾಗಲೇ 65 ಸೇವೆಗಳನ್ನು ನೀಡುತ್ತಿದ್ದು, ಹೊಸದಾಗಿ 63 ಸೇವೆಗಳನ್ನು ನೀಡಲು ಮುಂದಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈಗಾಗಲೇ 22 ಸೇವೆಗಳನ್ನು ನೀಡುತ್ತಿದ್ದು, ಹೊಸದಾಗಿ 16 ಸೇವೆಗಳನ್ನು ನೀಡಲು ಪ್ರಸ್ತಾವನೆ ಸಲ್ಲಿಸಿದೆ.
ಇದನ್ನೂ ಓದಿ | Congress Karnataka: ಮನೆ ಮನೆಗೆ 4.30 ಕೋಟಿ ಗ್ಯಾರಂಟಿ ಕಾರ್ಡ್; ಲೋಕಸಭೆ ಎಲೆಕ್ಷನ್‌ಗೆ ಸುರ್ಜೇವಾಲ ಸರಣಿ ಟಾಸ್ಕ್!
ಇದೇ ರೀತಿ ಕೃಷಿ ಇಲಾಖೆ, ಪಶುಸಂಗೋಪನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕಾನೂನು ಇಲಾಖೆ, ಸಾರಿಗೆ ಇಲಾಖೆ, ಒಳಾಡಳಿತ ಇಲಾಖೆ, ವಸತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಸಹಕಾರ ಇಲಾಖೆ, ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಆರ್ಥಿಕ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಯೂ ಹೊಸ ಸೇವೆಗಳ ಪ್ರಸ್ತಾವನೆ ಸಲ್ಲಿಸಿದ್ದು, 500ಕ್ಕೂ ಹೆಚ್ಚು ಹೊಸ ಸೇವೆಗಳ ಜನರಿಗೆ ಶೀಘ್ರದಲ್ಲೇ ಲಭ್ಯವಾಗಲಿದೆ.