ಬೆಂಗಳೂರು: 2023-2024ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಪರಿಷ್ಕರಣೆ ಬಗ್ಗೆ ಪ್ರಸ್ತಾಪಿಸದಿರುವ ಹಿನ್ನೆಲೆಯಲ್ಲಿ ಮುಂದಿನ ಹೋರಾಟ ರೂಪುರೇಷೆಗಳ ಕುರಿತು ಚರ್ಚಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಫೆ.21 ರಂದು ಸಂಜೆ 5 ಗಂಟೆಗೆ ಮಹತ್ವದ ಸಭೆ ಏರ್ಪಡಿಸಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳಾದ ವೇತನ, ಭತ್ಯೆಗಳ ಪರಿಷ್ಕರಣೆ ಹಾಗೂ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಬಗ್ಗೆ ಯಾವುದೇ ಘೋಷಣೆಗಳನ್ನು ಸರ್ಕಾರವು ರಾಜ್ಯ ಆಯವ್ಯಯದಲ್ಲಿ ಪ್ರಸ್ತಾಪಿಸದೇ ಇರುವುದರಿಂದ ರಾಜ್ಯ ಸರ್ಕಾರಿ ನೌಕರರಲ್ಲಿ ನಿರಾಶೆ ಮೂಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದ್ದಾರೆ.
ಇದನ್ನೂ ಓದಿ | Education News : ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ವೈದ್ಯಕೀಯ ಧನಸಹಾಯ ಪರಿಷ್ಕರಣೆ
ನಗರದ ಕಬ್ಬನ್ ಪಾರ್ಕ್‌ನಲ್ಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಫೆ.21ರಂದು ಸಂಜೆ 5 ಗಂಟೆಗೆ ಜಿಲ್ಲೆ, ತಾಲೂಕು ಯೋಜನಾ ಶಾಖೆಗಳ ಚುನಾಯಿತ ಪ್ರತಿನಿಧಿಗಳ ಹಾಗೂ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳ ತುರ್ತು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆ, ತಾಲೂಕು ಹಾಗೂ ಕೇಂದ್ರ ಸ್ಥಾನದ ಪದಾಧಿಕಾರಿಗಳೂ ಸೇರಿ ಸುಮಾರು 7000 ಚುನಾಯಿತ ಪ್ರತಿನಿಧಿಗಳು ಹಾಗೂ ವೃಂದ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಭೆಯು ಕೈಗೊಳ್ಳುವ ಅಂತಿಮ ನಿರ್ಣಯವನ್ನು ಸರ್ಕಾರಕ್ಕೆ ತಿಳಿಸಿ ಮುಂದಿನ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.