ಬೆಂಗಳೂರು: ಬೆಂಗಳೂರಿನಲ್ಲಿ ವಾಸಕ್ಕೆ ಮನೆಯಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅಹವಾಲು ಸಲ್ಲಿಸಿದ್ದ ಸಾಲು ಮರದ ತಿಮ್ಮಕ್ಕ ಅವರಿಗೆ ಸರಕಾರದ ವತಿಯಿಂದ ನಿವೇಶನ ಕ್ರಯಪತ್ರ ಹಸ್ತಾಂತರಿಸಲಾಗಿದೆ. ಬೆಂಗಳೂರಿನ ಸಿಎಂ ನಿವಾಸದಲ್ಲಿ ಶನಿವಾರ ಸಿಎಂ ಬೊಮ್ಮಾಯಿ ಅವರು ಸಾಲು ಮರದ ತಿಮ್ಮಕ ಹಾಗೂ ಅವರ ಸಾಕು ಪುತ್ರ ಉಮೇಶ್‌ಗೆ ನಿವೇಶನ ಕ್ರಯಪತ್ರ ನೀಡಿದರು.
ಮೂಲತಃ ತಮಕೂರಿನ ಗುಬ್ಬಿ ತಾಲೂಕಿನವರದ ತಿಮ್ಮಕ್ಕ ವಿವಾಹದ ಬಳಿಕ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದಲ್ಲಿ ನೆಲೆಸಿದ್ದರು. ಮಕ್ಕಳಿಲ್ಲ ಎಂಬ ಕಾರಣಕ್ಕೆ ಗಿಡ ನೆಟ್ಟು ಅವು ಉತ್ತಮವಾಗಿ ಬೆಳೆಯುವಂತೆ ನೋಡಿಕೊಂಡು ಮರಗಳನ್ನೇ ಮಕ್ಕಳನ್ನಾಗಿ ಪೋಷಿಸಿದರು. ಇವರ ಪರಿಸರ ಕಾಳಜಿಗೆ ಅನೇಕ ಪ್ರಶಸ್ತಿ, ಗೌರವಗಳು ದೊರೆತಿದ್ದರೂ ತಮಗೆ ವಾಸಕ್ಕೆ ಬೆಂಗಳೂರಿನಲ್ಲಿ ಮನೆ ಇಲ್ಲವೆಂದು ಇತ್ತೀಚೆಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಬೇಸರ ತೋಡಿಕೊಂಡಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಬೊಮ್ಮಾಯಿ, ಶತಾಯುಷಿ ತಿಮ್ಮಕ್ಕಗೆ ಉಚಿತವಾಗಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ನಿವೇಶನವನ್ನು ಮಂಜೂರು ಮಾಡಿಸಿದ್ದಾರೆ. ನಾಡಪ್ರಭು ಕೆಂಪೇಗೌಡ ಬಡಾವಣೆಯ 7 ನೇ ಬ್ಲಾಕ್ ಜೆ ಸೆಕ್ಟರ್ ನಲ್ಲಿ 50×80 ಚದರ ಅಡಿಯ ನಿವೇಶನವನ್ನು ತಿಮ್ಮಕ್ಕಗೆ ಮೀಸಲಿರಿಸಲಾಗಿದ್ದು, ತಿಮ್ಮಕ್ಕ ಹಾಊ ಅವರ ಪುತ್ರ ಉಮೇಶ್‌ಗೆ ನಿವೇಶನ ಕ್ರಯಪತ್ರ ವಿತರಿಸಿದರು.
ಇದನ್ನೂ ಓದಿ: ಪರಿಸರ ರಕ್ಷಣೆಯ ಕಾಳಜಿ ವಹಿಸಿ : ಸಾಲು ಮರದ ತಿಮ್ಮಕ್ಕ ಕರೆ