Site icon Vistara News

Samartha Bharata | ಜ.12ರಿಂದ ಸಮರ್ಥ ಭಾರತದಿಂದ ರಾಜ್ಯಾದ್ಯಂತ Be Good Do Good ಅಭಿಯಾನ

Samartha Bharata

ಬೆಂಗಳೂರು: ಸ್ವಾಮಿ ವಿವೇಕಾನಂದರ ೧೬೦ನೇ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನದ ಅಂಗವಾಗಿ ನಗರದ ಸಾಮಾಜಿಕ ಸಂಸ್ಥೆ ‘ಸಮರ್ಥ ಭಾರತ’ (Samartha Bharata) ವತಿಯಿಂದ ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸುವ ʼಉತ್ತಮನಾಗು-ಉಪಕಾರಿಯಾಗು’ ಎಂಬ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಸಾರುವ ʼBe Good Do Good-೨೦೨೩ ಬೃಹತ್ ಯುವ ಅಭಿಯಾನವನ್ನು ಜನವರಿ ೧೨ರಿಂದ ೨೬ರವರೆಗೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ.

ಜನವರಿ ೧೨ರಂದು ಅಭಿಯಾನಕ್ಕೆ ಚಾಲನೆ ದೊರೆಯಲಿದ್ದು, ಯುವಕ-ಯುವತಿಯರು ಸ್ವಾಮಿ ವಿವೇಕಾನಂದರು ಯುವಜನರಿಗೆ ನೀಡಿದ ʼಉತ್ತಮನಾಗು-ಉಪಕಾರಿಯಾಗು’ (Be Good Do Good) ಎಂಬ ಸಂದೇಶವನ್ನು ಪಾಲಿಸುವ ಸಂಕಲ್ಪ ಮಾಡಲಿದ್ದಾರೆ. ೨ ವಾರ ನಡೆಯಲಿರುವ ಈ ಬೃಹತ್ ಯುವ ಅಭಿಯಾನದಲ್ಲಿ ಸುಮಾರು ೬ ಲಕ್ಷ ಯುವಕ-ಯುವತಿಯರು ಭಾಗವಹಿಸಲಿದ್ದಾರೆ.

ಕಾಲೇಜು ವಿದ್ಯಾರ್ಥಿಗಳು, ಯುವ ಉದ್ಯೋಗಿಗಳು ಸೇರಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ತಮ್ಮ ವೈಯಕ್ತಿಕ ಜೀವನದಲ್ಲಿ ಉತ್ತಮ ಗುಣಸ್ವಭಾವಗಳನ್ನು ಮೈಗೂಡಿಸುವುದರ ಜತೆಗೆ ಸಾಮಾಜಿಕವಾಗಿ ಉಪಯೋಗವಾಗುವ ಸೇವಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಹೆಚ್ಚಿನ ಯುವ ಜನತೆಯನ್ನು ಸ್ಫೂರ್ತಿದಾಯಕ ಕಾರ್ಯಗಳಿಗೆ ಪ್ರೇರೇಪಿಸುವ ಮೂಲಕ ಅನೇಕರಿಗೆ ಆದರ್ಶ ವ್ಯಕ್ತಿಗಳಾಗುವ ಮೂಲಕ “ಉತ್ತಮನಾಗು-ಉಪಕಾರಿಯಾಗು” ಎಂಬ ಪರಂಪರೆಯನ್ನು ನಿರ್ಮಿಸುವ ಆಶಯವನ್ನು ಈ ಅಭಿಯಾನ ಹೊಂದಿದೆ.

ಇದನ್ನೂ ಓದಿ | ವಿಸ್ತಾರ ಅಂಕಣ | ಈ ಇಬ್ಬರು ಭಾರತದ ಸಾಮಾಜಿಕ ಬದುಕಿನ ರಾಯಭಾರಿಗಳು!

ಈ ಸಂದೇಶವು ಹೆಚ್ಚಿನ ಯುವಜನತೆಗೆ ತಲುಪಲು ಸಮರ್ಥ ಭಾರತ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ #BeGoodDoGood ಅಭಿಯಾನದ ಪ್ರಚಾರವನ್ನು ನಡೆಸಲಾಗುತ್ತಿದೆ. ಈ ವರ್ಷ ಅಭಿಯಾನವು ವೈಯಕ್ತಿಕ ಹಾಗೂ ಸಾಮಾಜಿಕ ಜೀವನಕ್ಕೆ ಸಂಬಂಧಪಟ್ಟ ಮೂರು ವಿಷಯಗಳ ಕುರಿತು ಜಾಗೃತಿಯನ್ನು ಮೂಡಿಸಿ, ಯುವಜನರು ಸಾಮಾಜಿಕವಾಗಿ ಉಪಯೋಗವಾಗುವ ಸೇವಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದೆ.

೧. ರಕ್ತದಾನ ಮಾಡಿ-Donate blood
೨. ಆರೋಗ್ಯಕರ ಜೀವನ ಶೈಲಿ- healthy Life style
೩. ಎಲ್ಲರನ್ನೂ ಗೌರವಿಸಿ- Respect Everyone

ಅಭಿಯಾನಕ್ಕೆ ಚಾಲನೆ
ಜನವರಿ ೧೨ರಂದು ಬೆಳಗ್ಗೆ ೧೧ ಗಂಟೆಗೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಮರ್ಥ ಭಾರತದ ಪ್ರಧಾನ ಮಾರ್ಗದರ್ಶಕ ನಾ. ತಿಪ್ಪೇಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಜನವರಿ ೨೬ರ ತನಕ ೧೫ ದಿನಗಳ ಕಾಲ ನಡೆಯಲಿರುವ ಈ ಯುವ ಅಭಿಯಾನದ ಭಾಗವಾಗಿ ರಾಜ್ಯದ ೫೦೦ಕ್ಕೂ ಹೆಚ್ಚು ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿದೆ.

ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

ವಿಷಯ: ಯುವಜನತೆಯ ವ್ಯಕ್ತಿತ್ವ ಅರಳಿಸುವಲ್ಲಿ ಸ್ವಾಮಿ ವಿವೇಕಾನಂದರ ಪ್ರೇರಣೆ.
Inspiration of Swami Vivekananda in Enriching the Personality of Youth.
ವಿದ್ಯಾರ್ಹತೆ: ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ, ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಬಹುಮಾನ:
▪ ಪ್ರಥಮ: ೧೦,೦೦೦ ರೂ. ಮತ್ತು ಪ್ರಮಾಣ ಪತ್ರ
▪ ದ್ವಿತೀಯ: ೭,೫೦೦ ರೂ. ಮತ್ತು ಪ್ರಮಾಣ ಪತ್ರ
▪ ತೃತೀಯ ೫,೦೦೦ ರೂ. ಮತ್ತು ಪ್ರಮಾಣ ಪತ್ರ
▪ ತಲಾ ೧,೦೦೦ ರೂಪಾಯಿಯಂತೆ ೨೦ ಸಮಾಧಾನಕರ ಬಹುಮಾನಗಳು
▪ ಮೇಲೆ ತಿಳಿಸಿದ ವಿಷಯಗಳ ಪೈಕಿ ಯಾವುದಾದರೂ ಒಂದು ವಿಷಯದ ಕುರಿತು, ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ೨೫೦೦ ಪದಗಳ ಮಿತಿಯಲ್ಲಿ ಪ್ರಬಂಧವನ್ನು ಸ್ವಹಸ್ತಾಕ್ಷರದಲ್ಲಿ ಬರೆದು, ಈ ಕೆಳಗಿನ ವಿಳಾಸಕ್ಕೆ ಫೆಬ್ರವರಿ ೧೦ರೊಳಗೆ ಒಳಗಾಗಿ ಕಳುಹಿಸಬೇಕು.
▪ ಕಾಲೇಜಿನ ಪ್ರಾಂಶುಪಾಲರಿಂದ ಅಥವಾ ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಲ್ಪಟ್ಟ ವ್ಯಾಸಂಗ ಪ್ರಮಾಣ ಪತ್ರ (Study Certificate) ವನ್ನು ಕಡ್ಡಾಯವಾಗಿ ಜತೆಗಿರಿಸಬೇಕು.

ವಿಳಾಸ: ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ, ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಕೆ.ಆರ್.ವೃತ್ತದ ಬಳಿ, ಬೆಂಗಳೂರು ೫೬೦೦೦೧. ಮಾಹಿತಿಗಾಗಿ:- ೯೧೧೩೨೬೩೩೪೨, ೯೪೮೩೧೫೦೫೨೭

ವಾಕಥಾನ್
ಜನವರಿ ೮ರಂದು ಬೆಳಗ್ಗೆ ೭.೩೦ಕ್ಕೆ ಕಂಠೀರವ ಕ್ರೀಡಾಂಗಣ ಬಳಿಯ ಕಬ್ಬನ್ ಪಾರ್ಕ್ ಪರಿಸರದಲ್ಲಿ ಕಾಲ್ನಡಿಗೆ (ವಾಕಥಾನ್) ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾವಿರಾರು ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮಾಹಿತಿಗಾಗಿ: ೯೧೧೩೨೬೩೩೪೨ ಸಂಪರ್ಕಿಸಬಹುದು.

ಫೇಸ್‌ಬುಕ್ ಲೈವ್ ಉಪನ್ಯಾಸ ಸರಣಿ
ಜನವರಿ ೧೨ ರಿಂದ ೨೬ರ ತನಕ ಪ್ರತಿದಿನ ಸಂಜೆ ೭ಕ್ಕೆ ವಿವೇಕಾನಂದರ ಕುರಿತು ವಿಷಯ ತಜ್ಞರು ಉಪನ್ಯಾಸ ನೀಡಲಿದ್ದಾರೆ. ಜೆಎನ್‌ಯು ಕುಲಪತಿ ಪ್ರೊ. ಶಾಂತಿಶ್ರೀ ಪಂಡಿತ್, ಯುವ ಸಂಸದ ತೇಜಸ್ವಿ ಸೂರ್ಯ ಸೇರಿ ಹಲವಾರು ತಜ್ಞರು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮವು ಸಮರ್ಥ ಭಾರತ ಫೇಸ್‌ಬುಕ್ ಪೇಜ್ www.facebook.com/SamarthaBharata ಮೂಲಕ ನೇರಪ್ರಸಾರವಾಗಲಿದೆ.

ವಿವೇಕ ರಥ
ವಿವೇಕಾನಂದರ ಸಂದೇಶವನ್ನು ಸಾರುವ ‘ವಿವೇಕ ರಥ’ವು ರಾಜ್ಯಾದ್ಯಂತ ಸಂಚರಿಸಲಿದೆ. ಜನವರಿ ೧೨ರಂದು ಬೆಂಗಳೂರಿನ ದೊಡ್ಡಗಣಪತಿ ದೇವಸ್ಥಾನದಿಂದ ಹೊರಡಲಿರುವ ವಿವೇಕ ರಥವು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಜನವರಿ ೨೬ರಂದು ಸಂಪನ್ನಗೊಳ್ಳಲಿದೆ.

ಅನೇಕ ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು, ಸಾಂಸ್ಕೃತಿಕ ಸಂಘಗಳು, ಸಮಾಜದ ವಿವಿಧ ಕ್ಷೇತ್ರಗಳ ಹೆಸರಾಂತ ಗಣ್ಯರು ಈ ಅಭಿಯಾನಕ್ಕೆ ದನಿಗೂಡಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ೯೧೧೩೨೬೩೩೪೨,
ಎಲ್ಲ ವಿವರಗಳು ಸಮರ್ಥ ಭಾರತ ವೆಬ್‌ಸೈಟ್‌ www.samarthabharata.org/ ನಲ್ಲಿ ಲಭ್ಯವಿರುತ್ತದೆ.

ಇದನ್ನೂ ಓದಿ | ವಿಸ್ತಾರ Explainer | ಮೋದಿ ಅವಧಿಯಲ್ಲಿ ಅಧಿಕಾರಶಾಹಿ ವ್ಯವಸ್ಥೆ ಕ್ರಾಂತಿಕಾರಕವಾಗಿ ಬದಲಾಗಿದ್ದು ಹೇಗೆ? ಏನಿದು 360 ಡಿಗ್ರಿ ಪ್ರಯೋಗ?

Exit mobile version