ಬೆಂಗಳೂರು: ಕರ್ನಾಟಕದಲ್ಲಿರುವ ಖಾಸಗಿ ಕೈಗಾರಿಕೆಗಳು ಹಾಗೂ ಇತರ ಸಂಸ್ಥೆಗಳ ಆಡಳಿತಾತ್ಮಕ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ. 50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ. 75 ಮೀಸಲಾತಿ (Karnataka Jobs Reservation) ನಿಗದಿಪಡಿಸುವ ಕರಡು ಮಸೂದೆಗೆ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ. ಸದ್ಯ ಈ ಬಗ್ಗೆ ಪರ-ವಿರೋಧ ಅಬಿಪ್ರಾಯ ವ್ಯಕ್ತವಾಗುತ್ತಿದೆ. ಈ ಮಧ್ಯೆ ಫೋನ್‌ಪೇ (PhonePe) ಸಿಇಒ ಮತ್ತು ಸಹ ಸಂಸ್ಥಾಪಕ ಸಮೀರ್ ನಿಗಮ್ (Sameer Nigam) ಅವರು ಕರ್ನಾಟಕ ಸರ್ಕಾರದ ಖಾಸಗಿ ಉದ್ಯೋಗ ಕೋಟಾ ಮಸೂದೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, “ನನಗೆ 46 ವರ್ಷ ವಯಸ್ಸು. ನಾನು ಯಾವುದೇ ರಾಜ್ಯದಲ್ಲಿ 15 ವರ್ಷಕ್ಕೂ ಹೆಚ್ಚು ಕಾಲ ವಾಸಿಸಿಲ್ಲ. ನನ್ನ ತಂದೆ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ದೇಶಾದ್ಯಂತ ಕಾರ್ಯ ನಿರ್ವಹಿಸಿದ್ದಾರೆ. ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ನಾನು ಕಂಪನಿಗಳನ್ನು ಸ್ಥಾಪಿಸಿ ಭಾರತದಾದ್ಯಂತ 25,000+ ಉದ್ಯೋಗಗಳನ್ನು ಸೃಷ್ಟಿಸಿದ್ದೇನೆ. ಹಾಗಾದರೆ ನನ್ನ ಮಕ್ಕಳು ತಮ್ಮ ತವರು ನಗರದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ?ʼʼ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಈ ಮಸೂದೆಯನ್ನು ತಡೆಹಿಡಿಯುವ ಮೊದಲ ಅವರು ಈ ಅಭಿಪ್ರಾಯ ಹಂಚಿಕೊಂಡಿದ್ದರು.
I am 46 years old. Never lived in a state for 15+ yrs
— Sameer.Nigam (@_sameernigam) July 17, 2024
My father worked in the Indian Navy. Got posted all over the country. His kids don't deserve jobs in Karnataka?
I build companies. Have created 25000+ jobs across India! My kids dont deserve jobs in their home city?
Shame.
ನೆಟ್ಟಿಗರ ಪ್ರತಿಕ್ರಿಯೆ
ಅವರ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯನ್ನೇ ಹುಟ್ಟು ಹಾಕಿದೆ. ʼʼನೀವು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲ ಎಂದು ಯಾರು ಹೇಳಿದ್ದು? ನೀವು ಮಾಡಬೇಕಾಗಿರುವುದು ಭಾಷೆಯನ್ನು ಕಲಿಯುವ ಕೆಲಸ. ಇದಕ್ಕಾಗಿ ಇಷ್ಟೊಂದು ಅಳುವ ಅಗತ್ಯವಿಲ್ಲʼʼ ಎಂದು ಒಬ್ಬರು ಹೇಳಿದ್ದಾರೆ. ಇದಕ್ಕೆ ನಿಗಮ್ ಪ್ರತಿಕ್ರಿಯಿಸಿ, ʼʼನಾನು ಭಾರತದಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಬಹುದು. ನಾನು ಬಯಸುವ ಯಾವುದೇ ಭಾಷೆಯನ್ನು ಕಲಿಯಬಲ್ಲೆ. ಭಾರತದ ಸಂವಿಧಾನ ನನಗೆ ಈ ಹಕ್ಕು ನೀಡಿದೆ. ಇದು ನನ್ನ ಆಯ್ಕೆʼʼ ಎಂದಿದ್ದಾರೆ.
ಇನ್ನೊಬ್ಬರು ಕಮೆಂಟ್ ಮಾಡಿ, “ನಿಜ. ಉತ್ತಮ ಭವಿಷ್ಯಕ್ಕಾಗಿ ಬೆಂಗಳೂರಿಗೆ ಬಂದ ಜನರು ನಗರವನ್ನು, ಇಲ್ಲಿನ ಜನರನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದರೆ ಈ ಪರಿಸ್ಥಿತಿಯನ್ನು ತಪ್ಪಿಸಬಹುದಿತ್ತು!ʼʼ ಎಂದು ಹೇಳಿದ್ದಾರೆ. “ಭಾರತದ ಎಲ್ಲ ರಾಜ್ಯಗಳಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಇರಬೇಕುʼʼ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಯೂ ಟರ್ನ್
ಸದ್ಯ ಕರಡು ಮಸೂದೆಗೆ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ. ಸಂಪುಟ ಅನುಮೋದನೆ ನೀಡಲಾಗಿದ್ದ ಮಸೂದೆ ಕುರಿತು ಮುಂದಿನ ದಿನಗಳಲ್ಲಿ ಮತ್ತೊಂದು ಬಾರಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕಚೇರಿಯಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯ ಕರಡು ಮಸೂದೆ ಜಾರಿಗೆ ತರುವುದಾಗಿ ಘೋಷಿಸಿದ ತಕ್ಷಣವೇ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತಗೊಂಡಿತ್ತು. ಪ್ರಮುಖ ಉದ್ಯಮಿಗಳಾದ ಮೋಹನ್ ದಾಸ್ ಪೈ,ಕಿರಣ್ ಮಜುಂದಾರ್ ಅವರು ಈ ಬಗ್ಗೆ ಆಕ್ಷೇಪ ಎತ್ತಿದ್ದರು. ನೆರೆ ರಾಜ್ಯದ ಸರ್ಕಾರಗಳೂ ಇದರ ಬಗ್ಗೆ ತಕರಾರು ಎತ್ತಿದ್ದವು.