Site icon Vistara News

Kundapur News: ಸಮೃದ್ಧ ಬೈಂದೂರಿಗೆ ಚಾಲನೆ, ಡಾ.ಎಚ್‌.ಎಸ್‌. ಶೆಟ್ಟಿಗೆ ಅಭಿನಂದನೆ

Dr HS Shetty felicitated

ಉಡುಪಿ: ಉದ್ಯಮಿ ಡಾ. ಶ್ರೀನಿವಾಸ ಶೆಟ್ಟಿ ಹಾಲಾಡಿ (Dr HS Shetty) ಅವರಿಗೆ ಅಭಿನಂದನಾ ಸಮಾರಂಭ, ಸರ್ಕಾರಿ ಶಾಲೆಗಳ ಉಳಿವು ಮತ್ತು ಅಭಿವೃದ್ಧಿಗಾಗಿ ರೂಪಿಸಿರುವ ವಿಶಿಷ್ಟ ಯೋಜನೆ ‘300 Trees’ ಉದ್ಘಾಟನೆ ಹಾಗೂ ʼಸಮೃದ್ಧ ಬೈಂದೂರುʼ ಪರಿಕಲ್ಪನೆ ಅನಾವರಣ ಕಾರ್ಯಕ್ರಮವನ್ನು ಜಿಲ್ಲೆಯ ಕುಂದಾಪುರ (Kundapur News) ತಾಲೂಕಿನ ತ್ರಾಸಿಯ ಕೊಂಕಣ ಖಾರ್ವಿ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಸ್ತಾರ ನ್ಯೂಸ್‌ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಅವರು, ಇವತ್ತು ಬೈಂದೂರು ಶಾಸಕರಾಗಿ ನೋಡುತ್ತಿರುವ ಗುರುರಾಜ ಗಂಟಿಹೊಳೆ ಅವರನ್ನು ಒಬ್ಬ ಉತ್ತಮ ಸಹೃದಯರಾಗಿ ಯಲ್ಲಾಪುರದ ಜನರು ನೋಡಿದ್ದರು. ಆರ್‌ಎಸ್‌ಎಸ್‌ ಪ್ರಚಾರಕರಾಗಿ, ಹಲವು ಸಂಘಟನೆಗಳಲ್ಲಿ ಕೆಲಸ ಮಾಡಿದ್ದ ಅವರು, ನಂತರ ಶೈಕ್ಷಣಿಕ ಸಂಸ್ಥೆಯಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದರು. ಅವರಿಗೆ ಬೈಂದೂರು ಟಿಕೆಟ್‌ ಸಿಕ್ಕಾಗ, ಯಾಕೆ ನೀವು ಬೈಂದೂರಿಗೆ ಹೋಗುತ್ತೀರಿ ಎಂದು ನಾನು ಕೇಳಿದ್ದೆ. ಯಾಕೆಂದರೆ ಅವರು ತಮ್ಮ ವ್ಯಕ್ತಿತ್ವದ ಮೂಲಕ ಯಲ್ಲಾಪುರ, ಶಿರಸಿ, ಮುಂಡಗೋಡು ತಾಲೂಕು ಜನರ ಅಚ್ಚುಮೆಚ್ಚಿನ ಗುರೂಜಿ ಆಗಿದ್ದರು ಎಂದು ತಿಳಿಸಿದರು.

ಗುರುರಾಜ ಗಂಟಿಹೊಳೆ ಮಾದರಿ ಶಾಸಕ: ಹರಿಪ್ರಕಾಶ್‌ ಕೋಣೆಮನೆ

ಸಾಧಕ ಉದ್ಯಮಿಗೆ ಕುಂದಾಪುರದಲ್ಲಿ ಅಭಿನಂದನಾ ಸಮಾರಂಭ | Honorable tribute to Dr. H.S.Shetty In Kundapura

ಬೈಂದೂರು ಕ್ಷೇತ್ರದಲ್ಲಿ ಸದ್ಯ ಗುರು ಅಣ್ಣ ಆಗಿ ಖ್ಯಾತಿಯಾಗಿರುವ ಗುರುರಾಜ ಗಂಟಿಹೊಳೆ ಅವರು ಶಾಸಕರಾಗಿ, ಸಮೃದ್ಧ ಬೈಂದೂರು ಪರಿಕಲ್ಪನೆಯನ್ನು ಕ್ಷೇತ್ರದ ಜನರ ಮುಂದೆ ಇಟ್ಟಿದ್ದಾರೆ. ಇವತ್ತು ರಾಜ್ಯ ಸಂಕೀರ್ಣ ಸನ್ನಿವೇಶದಲ್ಲಿದೆ. ಯಾಕೆಂದರೆ 224 ಶಾಸಕರಲ್ಲಿ 223 ಶಾಸಕರು ಬಹಳ ಆತಂಕದಲ್ಲಿದ್ದಾರೆ. ಬೆಂಗಳೂರಿನಿಂದ ಕ್ಷೇತ್ರಕ್ಕೆ ಹೋಗಿ ಜನರಿಗೆ ಮುಖ ತೋರಿಸುವುದು ಹೇಗೆ ಎಂಬ ಆಲೋಚನೆಯಲ್ಲಿದ್ದಾರೆ. ಭಾಗ್ಯಗಳನ್ನು ಕೊಡುವ ಮೂಲಕ ಆಡಳಿತ ಪಕ್ಷದ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೇ ಅನುದಾನ ಸಿಗುತ್ತಿಲ್ಲ. ಇನ್ನು ವಿರೋಧ ಪಕ್ಷದ ಶಾಸಕರು ಕ್ಷೇತ್ರದ ಅಭಿವೃದ್ಧಿ ಮಾಡುವುದು ಸಾಧ್ಯವೇ?, ಇಂತಹ ಸಂದರ್ಭದಲ್ಲಿ ಕ್ಷೇತ್ರದಲ್ಲೇ ಇದ್ದುಕೊಂಡು, ನಿಮ್ಮ ಜತೆಗೂಡಿ ಬೈಂದೂರನ್ನು ಹೇಗೆ ಅಭಿವೃದ್ಧಿ ಮಾಡುವುದು ಎಂದು ಶಾಸಕರು ಚಿಂತನೆ ಮಾಡುತ್ತಿದ್ದಾರೆ. ಹೀಗಾಗಿ ಎಲ್ಲ ಶಾಸಕರ ಪೈಕಿ ಗುರುರಾಜ ಗಂಟಿಹೊಳೆ ಅವರು ಮಾದರಿಯಾಗಿದ್ದಾರೆ ಎಂದು ಹರಿಪ್ರಕಾಶ್‌ ಕೋಣೆಮನೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ | ಪ್ರಧಾನಿ ಮೋದಿ ಲೇಖನ: ಭಾರತದ ಆಧುನಿಕ, ಪ್ರಗತಿಪರ ಕೃಷಿಗೆ ಎಂ ಎಸ್ ಸ್ವಾಮಿನಾಥನ್ ಅಡಿಪಾಯ

ಬೈಂದೂರಿಗೆ ಇನ್ನೂ ಎರಡು ಬಿರುದುಗಳಿವೆ

ಶಾಸಕರು ಸಮೃದ್ಧ ಬೈಂದೂರು ಪರಿಕಲ್ಪನೆ ನೀಡಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಕ್ಷೇತ್ರಕ್ಕೆ ಇನ್ನೂ ಎರಡು ಬಿರುದುಗಳಿವೆ. ಮೊದಲನೆಯದು ʼಸುಂದರ ಬೈಂದೂರುʼ. ಹೇಗೆಂದರೆ ಪ್ರಕೃತಿ ಸೌಂದರ್ಯ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಈ ಕ್ಷೇತ್ರ ಬಹಳ ಮುಂಚೂಣಿಯಲ್ಲಿದೆ. ಮತ್ತೊಂದು ಬಿರುದು ಎಂದರೆ ʼಸಮರ್ಥ ಬೈಂದೂರುʼ. ಯಾಕೆಂದರೆ, ಬರಿಗಾಲಿನಲ್ಲಿ ಓಡಾಡುವ ಒಬ್ಬ ಸಾಮಾನ್ಯ ಕಾರ್ಯಕರ್ತ, ಹಣ, ಆಸ್ತಿ-ಅಂತಸ್ತು ಯಾವುದೂ ಇಲ್ಲದೆ, ಆತ್ಮವಿಶ್ವಾಸ ಹಾಗೂ ಒಡನಾಟದ ಬಲ ಇಟ್ಟುಕೊಂಡು ಈ ಕ್ಷೇತ್ರಕ್ಕೆ ಬಂದಾಗ ಜನರು ಅವರನ್ನು ಗೆಲ್ಲಿಸಿದ್ದರಿಂದ ಇದು ಸಮರ್ಥ ಬೈಂದೂರು ಅಗಿದೆ. ಈ ಮಾದರಿ ಇಡೀ ರಾಜ್ಯಕ್ಕೆ ಮಾದರಿಯಾಗಲಿ ಎಂದು ತಿಳಿಸಿದರು.

ಈ ಸಮರ್ಥ ಬೈಂದೂರು ಕ್ಷೇತ್ರದ ಜನತೆಗೆ ನಾನು ವಿಶೇಷವಾಗಿ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಅಭಿವೃದ್ಧಿ ಎಂದ ತಕ್ಷಣ ನಾವೆಲ್ಲರೂ ಸರ್ಕಾರದ ಕಡೆ ಮುಖ ಮಾಡುತ್ತೇವೆ. ಎಲೆಕ್ಷನ್‌ನಲ್ಲಿ ಹೋಗಿ ಓಟು ಹಾಕಿ ಬಂದರೆ ನಮ್ಮ ಕರ್ತವ್ಯ ಮುಗಿಯಿತು ಎಂದು ತಿಳಿದಿರುವ ಸಂದರ್ಭದಲ್ಲಿ, ಕ್ಷೇತ್ರವನ್ನು ಹೇಗೆ ಸಮೃದ್ಧವಾಗಿ ಮಾಡಬಹುದು ಎಂಬುವುದಕ್ಕೆ ಜನರ ಸಹಭಾಗಿತ್ವಕ್ಕೆ ಅವಕಾಶ ಮಾಡಿಕೊಟ್ಟಿರುವ ಶಾಸಕರು ಹಾಗೂ ಇದಕ್ಕೆ ಸಹಕಾರ ನೀಡಲು ಮುಂದಾಗಿರುವ ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸುವೆ ಎಂದು ಹೇಳಿದರು.

ನಾವೆಲ್ಲರೂ ಕೂಡ ಒಂದು ದೊಡ್ಡ ಪರಿವಾರಕ್ಕೆ ಸೇರಿದವರು. ಅದರಲ್ಲಿ ನಮ್ಮದೇ ಆದ ಒಂದು ಪುಟ್ಟ ಪರಿವಾರವಿದೆ. ಅ ಪುಟ್ಟ ಪರಿವಾರಕ್ಕೆ ಸೇರಿದ ನಾವು ಇಲ್ಲಿ ಸೇರಿದ್ದೇವೆ. ಈ ಪುಟ್ಟ ಪರಿವಾರಕ್ಕೆ ಸಚಿವರಾಗಿದ್ದಾಗ ಕೋಟ ಶ್ರೀನಿವಾಸ ಪೂಜಾರಿ ಅವರು ಪರಿಚಯವಾಗಿತ್ತು. ನಂತರ ಪರಿವಾರಕ್ಕೆ ಜನಪ್ರಿಯ ಶಾಸಕ ಗುರುರಾಜ ಗಂಟಿಹೊಳೆ ಅವರ ಪ್ರವೇಶವಾಯಿತು. ನಮ್ಮ ಪುಟ್ಟ ಪರಿವಾರ ಎಂದರೆ ಯಲ್ಲಾಪುರ, ಬೈಂದೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಾಗಿದೆ ಬೇರೆನೂ ಅಲ್ಲ. ಡಾ. ಶ್ರೀನಿವಾಸ ಶೆಟ್ಟಿ ಹಾಲಾಡಿ ಅವರು ಉದ್ಯಮಿಯಾಗಿ ನಮಗೆ ಪರಿಚಯವಾಗಿ ಈಗ ಮಾರ್ಗದರ್ಶನ ನೀಡುತ್ತಿದ್ದಾರೆ. ಹಾಗೆಯೇ ಶಾಂತಾರಾಮ್ ಶೆಟ್ಟಿ, ರಾಮಕೃಷ್ಣ ಶೇರಿಗಾರ್, ಪ್ರೊಫೆಸರ್ ಡಾ. ಅಣ್ಣಪ್ಪ ಶೆಟ್ಟಿ ಸೇರಿ ಹಲವರು ನಮ್ಮ ಪರಿವಾರದವರಾಗಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | ಮೊಗಸಾಲೆ ಅಂಕಣ: ಶಾಸಕರ ಸಿಟ್ಟಿನ ನಡುವೆ ಸಬೂಬುಗಳ ತಲಾಶೆ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವದಲ್ಲಿ ಡಾಕ್ಟರ್‌ ಆಫ್‌ ಸೈನ್ಸ್‌ (Doctor of Science) ಗೌರವ ಪಡೆದ ಹಿನ್ನೆಲೆಯಲ್ಲಿ ಉದ್ಯಮಿ ಡಾ. ಶ್ರೀನಿವಾಸ ಶೆಟ್ಟಿ ಹಾಲಾಡಿ ಅವರನ್ನು ಸನ್ಮಾನಿಸಲಾಯಿತು.

Exit mobile version