Site icon Vistara News

Sangolli Rayanna Statue | ಶ್ರವಣೂರಿನಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಲೋಕಾರ್ಪಣೆ ಮಾಡಿದ ಸಿದ್ದರಾಮಯ್ಯ

Sangolli Rayanna Statue

ಹಾಸನ: ಅನುಮತಿ ಪಡೆಯದೆ ಸಂಗೊಳ್ಳಿ ರಾಯಣ್ಣ ವೃತ್ತ ನಿರ್ಮಾಣದ ವಿವಾದ ಉಂಟಾಗಿದ್ದ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಶ್ರವಣೂರು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ (Sangolli Rayanna Statue) ಅನಾವರಣ ಮಾಡಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು.

ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸಂಗೊಳ್ಳಿ ರಾಯಣ್ಣ ಕಿತ್ತೂರು ರಾಣಿ ಚೆನ್ನಮ್ಮಳ ಬಲಗೈ ಬಂಟ. ಬ್ರಿಟಿಷರ ವಿರುದ್ಧ ಹೋರಾಡಿ ಮೊದಲು ಯುದ್ಧ ಗೆಲ್ಲುತ್ತಾನೆ. ನಂತರ ಕಿತ್ತೂರು ಚನ್ನಮ್ಮ ಬಂಧನರಾಗಿ ಜೈಲಿನಲ್ಲಿ ನಿಧನರಾಗುತ್ತಾರೆ. ಆದರೆ, ಸಂಗೊಳ್ಳಿ ರಾಯಣ್ಣ ತಪ್ಪಿಸಿಕೊಂಡು ಸೈನ್ಯ ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ. ಬಳಿಕ ಮಲ್ಲಪ್ಪಶೆಟ್ಟಿ ಎಂಬಾತನಿಂದ ಆತ ಸೆರೆಯಾದ. ಮಲ್ಲಪ್ಪಶೆಟ್ಟಿಯಂತಹ ದ್ರೋಹಿಗಳು ನಮ್ಮ ನಡುವೆ ಯಾವಾಗಲೂ ಇರುತ್ತಾರೆ, ಹೀಗಾಗಿ ಹುಷಾರಾಗಿರಬೇಕು ಎಂದು ಹೇಳಿದರು.

ಸಂಗೊಳ್ಳಿ ರಾಯಣ್ಣ ಇದ್ದಿದ್ದರೆ ಮೊಘಲರ ಕೈಗೆ 600 ವರ್ಷ, ಬ್ರಿಟಿಷರಿಗೆ 200 ವರ್ಷ ದೇಶದ ಆಡಳಿತ ಹೋಗುತ್ತಿರಲಿಲ್ಲ. ಅವರನ್ನು ಗಲ್ಲಿಗೇರಿಸಿದ ನಂದಗಢದಲ್ಲಿ 272 ಕೋಟಿ ರೂಪಾಯಿ ಕೊಟ್ಟು ಅಭಿವೃದ್ಧಿ ಮಾಡುತ್ತಿದ್ದೇವೆ. ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಆರಂಭ ಮಾಡಲಾಗುತ್ತಿದೆ. ಈಗ ಇಂತಹ ಮಹಾನ್ ವ್ಯಕ್ತಿ, ದಾರ್ಶನಿಕ, ದೇಶಪ್ರೇಮಿ ಪ್ರತಿಮೆಗಳನ್ನು ಅನಾವರಣ ಮಾಡಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ | Basavanna-Kempegowda | ವಿಧಾನಸೌಧದ ಎದುರು ಬಸವಣ್ಣ, ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ

ಸ್ವಾತಂತ್ರ್ಯಪೂರ್ವದಲ್ಲಿ 562 ರಾಜರು ದೇಶದಲ್ಲಿ ಇದ್ದರು. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ. ಒಬ್ಬರ ಕಾಲನ್ನು ಇಬ್ಬರು‌ ಎಳೆಯುತ್ತಿದ್ದರು. ಈಗ ನೋಡಿ ನನ್ನ ಮೇಲೆ ಎಲ್ಲ ಬಿದ್ದಿದ್ದಾರೆ. ಆದರೆ ನನ್ನನ್ನು ಇವರಾರೂ ಏನೂ ಮಾಡಲಿಕ್ಕೆ ಸಾಧ್ಯವಿಲ್ಲ ಎಂದ ಅವರು, ನಾನು ಬಸವಣ್ಣ, ಕನಕದಾಸ, ಅಂಬೇಡ್ಕರ್, ಗಾಂಧಿ ಅನುಯಾಯಿ ಆಗಿರುವುದರಿಂದ ಬಿಜೆಪಿ, ಆರ್‌ಎಸ್‌ಎಸ್‌ನವರಿಗೆ ನನ್ನ ಕಂಡರೆ ಭಯ, ನನ್ನನ್ನು ಟಾರ್ಗೆಟ್ ಮಾಡುತ್ತಾರೆ ಎಂದರು.

ಈ ರಾಜ್ಯದ ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ರೈತರ ಆಶೀರ್ವಾದ ಇರುವುದರಿಂದ ನನ್ನನ್ನ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಆದರೆ ನಮ್ಮಲ್ಲಿ ಒಡಕು‌ ಉಂಟುಮಾಡಿ, ನಮ್ಮವರನ್ನೇ ಎತ್ತಿಕಟ್ಟಲು ನೋಡುತ್ತಾರೆ ಹುಷಾರಾಗಿರಬೇಕು ಎಂದು ತಿಳಿಸಿದರು.

ಹಾಗೆಯೇ ಭಕ್ತ ಕನಕದಾಸರು ೧೫ ಶತಮಾನದಲ್ಲಿ ಬದುಕಿದಂತವರು. ಈ ವರ್ಷ ಕನಕದಾಸರ 535ನೇ ಜಯಂತಿಯನ್ನು ರಾಜ್ಯಾದ್ಯಂತ ಆಚರಣೆ ಮಾಡಿದ್ದೇವೆ. ಎಸ್.ಆರ್.ಬೊಮ್ಮಯಿ ಮುಖ್ಯಮಂತ್ರಿಯಾಗಿದ್ದಾಗ ನಾನು‌ ಸಾರಿಗೆ ಸಚಿವನಾಗಿದ್ದೆ. ಆಗ 500ನೇ ಕನಕದಾಸರ ಜಯಂತಿ ಆಚರಣೆ ಮಾಡಿದ್ದೆವು. ನಂತರ ಎಲ್ಲೆಡೆ ಕನಕಜಯಂತಿ ಆಚರಣೆ ಮಾಡಲು ಆರಂಭಿಸಲಾಯಿತು ಎಂದು ಹೇಳಿದರು.

ಕನ್ನಡನಾಡಿನ ಸಾಹಿತ್ಯದಲ್ಲಿ ಎರಡು ಪ್ರಮುಖ ಘಟ್ಟಗಳನ್ನು ನೋಡುತ್ತೇವೆ. ಒಂದು ವಚನ ಸಾಹಿತ್ಯ, ಇನ್ನೊಂದು ದಾಸ ಸಾಹಿತ್ಯ. ಜನರ ಭಾಷೆಯಲ್ಲಿ ಧರ್ಮವನ್ನು ಬೋಧನೆ ಮಾಡಿದವರು ಬಸವಾದಿ ಶರಣರು ಮತ್ತು ಕನಕದಾಸರು. ಸಂಸ್ಕೃತದಲ್ಲಿ ಧರ್ಮ ಯಾರಿಗೂ ಅರ್ಥವಾಗುತ್ತಿರಲಿಲ್ಲ. ಅದಕ್ಕಾಗಿ ಜನರ ಭಾಷೆಯಲ್ಲಿ ಜೀವನ ತತ್ವಗಳನ್ನು ಬಸವಾದಿ ಶರಣರು ಹಾಗೂ ದಾಸರು ಬೋಧನೆ ಮಾಡಿ ಸಮಾನತೆ ಸಾರಿದರು ಎಂದು ತಿಳಿಸಿದರು.

ಇದನ್ನೂ ಓದಿ | Karnataka Election : ನಾನು ಎರಡು ಕಡೆ ಸ್ಪರ್ಧೆ ಮಾಡಲ್ಲ, ಒಂದೇ ಕಡೆ ನಿಲ್ಲೋದು: ಸಿದ್ದರಾಮಯ್ಯ ಸ್ಪಷ್ಟನೆ

Exit mobile version