ಬೆಳಗಾವಿ: ಬೆಳಗಾವಿ ಗ್ರಾಮಾಂತರ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ (Sanjay Patil) ಶುಕ್ರವಾರ (ಜ.೧೩) ಮಾಧ್ಯಮದವರ ವಿರುದ್ಧ ಅಕ್ಷರಶಃ ಮುಗಿಬಿದ್ದಿದ್ದರು. ಉಡುಗೊರೆ ಪಾಲಿಟಿಕ್ಸ್ ಬಗ್ಗೆ ಮಾತನಾಡಿರುವ ಅವರು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೊಟ್ಟ ಉಡುಗೊರೆಯ ಬಗ್ಗೆ ಸುದ್ದಿಯನ್ನೇ ಬಿತ್ತರಿಸುವುದಿಲ್ಲ ಎಂದು ಮಾಧ್ಯಮದವರ ಮೇಲೆಯೇ ಹರಿಹಾಯ್ದರು. ನೀವೂ ಕೊಟ್ಟಿಲ್ಲವೇ ಎಂದು ಪ್ರಶ್ನೆ ಮಾಡಿದ್ದಕ್ಕೆ ಮಾಧ್ಯಮದವರನ್ನೇ ಗೂಂಡಾಗಳೂ ಎಂದೂ ಕರೆದರು. ಅಂತಿಮವಾಗಿ ಕ್ಷಮೆಯಾಚಿಸಿದರು.
ನಗರದಲ್ಲಿ ಶುಕ್ರವಾರ ಬಿಜೆಪಿಯಿಂದ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಮತ ಪಡೆಯಲು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಉಡುಗೊರೆ ನೀಡುವ ಜತೆಗೆ ತೆಂಗಿನ ಕಾಯಿ ಮೇಲೆ ಆಣೆ ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಎಲ್ಲೂ ಸುದ್ದಿ ಬಂದಿಲ್ಲ ಎಂದು ಸಂಜಯ್ ಪಾಟೀಲ್ ಹೇಳಿದರು. ಇದಕ್ಕೆ ವರದಿಗಾರರು, ನೀವು ಕೂಡ ಜನರಿಗೆ ಉಡುಗೊರೆ ಕೊಟ್ಟಿಲ್ಲವೇ ಎಂದು ಹೇಳಿದ್ದಕ್ಕೆ ಮಾಜಿ ಶಾಸಕ ಗರಂ ಆಗಿದ್ದಾರೆ.
ಸುದ್ದಿ ಪ್ರಸಾರ ಮಾಡಿದ್ದೇವೆ, ಸುಳ್ಳು ಆರೋಪ ಮಾಡಬೇಡಿ ಎಂದು ಮಾಧ್ಯಮ ಪ್ರತಿನಿಧಿಗಳು ಹೇಳಿದ್ದಕ್ಕೆ ಕೋಪಗೊಂಡ ಸಂಜಯ್ ಪಾಟೀಲ್, ಇದು ಪ್ರೆಸ್ ಕಾನ್ಫರೆನ್ಸೋ ಅಥವಾ ದಾದಾಗಿರಿಯೋ ಎಂದು ಕಿರುಚಾಡುತ್ತಾ, ನನಗೆ ಮಾತನಾಡಲು ಅವಕಾಶ ಕೊಡಿ ಎಂದು ಹೇಳಿದ್ದಾರೆ. ನೀವು ದಾದಾಗಿರಿ ಮಾಡಿದರೆ ಸುದ್ದಿಗೋಷ್ಠಿ ನಡೆಸಲ್ಲ, ನೀವು ಮೀಡಿಯಾದವರೋ ದಾದಾಗಿರಿ ಮಾಡುವ ಗೂಂಡಾಗಳೋ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | Santro Ravi Case | ಸ್ಯಾಂಟ್ರೋ ರವಿ ಸಿಕ್ಕಿಬಿದ್ದಿದ್ದು ಗುಜರಾತ್‌ನಲ್ಲಿ: 1500 ಕಿ.ಮೀ ಚೇಸ್ ಮಾಡಿ ಹಿಡಿದ ಪೊಲೀಸರು
ಈ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಏನು ಕೊಡುತ್ತಾರೋ ಅದರ ಡಬಲ್ ಕೊಡುತ್ತೇನೆ ಎಂದ ಹೇಳಿದ ನಿಮಗೆ ಏನು ನೈತಿಕತೆ ಇದೆ ಎಂದು ವರದಿಗಾರರು ಪ್ರಶ್ನಿಸುತ್ತಿದ್ದಂತೆ ಮಾಜಿ ಶಾಸಕ, ನೀವು ನನಗೆ ಮಾತನಾಡಲು ಬಿಡುತ್ತಿಲ್ಲ, ಈ ರೀತಿ ಸುದ್ದಿಗೋಷ್ಠಿ ಬೆಳಗಾವಿಯಲ್ಲಿ ಮಾತ್ರ ನೋಡುತ್ತಿದ್ದೇನೆ. ನಾನು ರಾಜಕೀಯ ಬಿಟ್ಟು, ಮನೆಯಲ್ಲಿ ಕೂರಲು ಸಿದ್ಧನಿದ್ದೇನೆ. ಆದರೆ, ಹೆದರಲ್ಲ ಎಂದು ಕಿಡಿಕಾರಿದರು.
ಇಷ್ಟೊಂದು ಸಿಟ್ಟು ಒಳ್ಳೆಯದಲ್ಲ ಎಂದು ಸಂಜಯ್ ಪಾಟೀಲ್‌ಗೆ ಮಾಧ್ಯಮ ಪ್ರತಿನಿಧಿಗಳು ಈ ವೇಳೆ ಹೇಳಿದರು. ಆಗ ಮಾಧ್ಯಮ ಪ್ರತಿನಿಧಿಗಳು ಹಾಗೂ ಸಂಜಯ್ ಪಾಟೀಲ್ ಮಧ್ಯೆ ತೀವ್ರ ವಾಗ್ವಾದ ನಡೆಯಿತು. ಬಳಿಕ ಮಾತನಾಡಿದ ಸಂಜಯ್, ನಾನು ಸುದ್ದಿ ಮಾಡಿಲ್ಲ ಎಂದು ಹೇಳಿಲ್ಲ, ಸ್ಪೆಷಲ್ ನ್ಯೂಸ್ ಏಕೆ ಮಾಡಿಲ್ಲ, ಸ್ಟಿಂಗ್ ಆಪರೇಷನ್ ಏಕೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು.
ಆಗ ಸಿಟ್ಟಾಗಿದ್ದ ಮಾಧ್ಯಮ ಪ್ರತಿನಿಧಿಗಳು, ನಾವು ಏನು ದಾದಾಗಿರಿ ಮಾಡಿದ್ದೇವೆ ತೋರಿಸಿ ಎಂದು ಕೇಳಿದ್ದಕ್ಕೆ ಉತ್ತರಿಸಿದ ಮಾಜಿ ಶಾಸಕ, ನೀವು ಏನು ಮಾತನಾಡುತ್ತೀರೋ ಅದನ್ನು ನಾವು ಕೇಳಬೇಕು, ನಿಮ್ಮ ಆಳಾಗಿದ್ದೇವೆ ಎಂದು ಹೇಳಿ, ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ ಎಂದು ಹೇಳಿದ್ದಾರೆ.
ಇದನ್ನೂ ಓದಿ | Shivamogga News | ವೈಯಕ್ತಿಕ ವಿಷಯಕ್ಕೆ ನಡೆದ ಹಲ್ಲೆಗೆ ಕೋಮು ಬಣ್ಣ; ನಿಷ್ಪಕ್ಷಪಾತ ತನಿಖೆಗೆ ಕಾಂಗ್ರೆಸ್ ಮನವಿ