ಮಂಡ್ಯ: ಶ್ರೀರಂಗಪಟ್ಟಣದಲ್ಲಿ ನಾಳೆ (ಡಿಸೆಂಬರ್ 4)ರಂದು ಹನುಮಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ, ಇಡೀ ಪಟ್ಟಣದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಸದ್ಯ ಆಂಜನೇಯ ಸ್ವಾಮಿ ದೇಗುಲ ಮತ್ತು ಜಾಮಿಯಾ ಮಸೀದಿ ವಿವಾದದ ಕಾರಣಕ್ಕೆ ಶ್ರೀರಂಗಪಟ್ಟಣ ಒಂದು ಸೂಕ್ಷ್ಮ ಪ್ರದೇಶ ಆಗಿರುವ ಹಿನ್ನೆಲೆಯಲ್ಲಿ, ಹನುಮಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಬಿಗಿ ಭದ್ರತೆಯಲ್ಲಿ ನಡೆಯಲಿದೆ.
ಇನ್ನು ಜಾಮಿಯಾ ಮಸೀದಿ ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿದೆ ಮತ್ತು ಅಲ್ಲೆಲ್ಲ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಬಾಂಬ್ ಶೋಧ ದಳದಿಂದ ಪಟ್ಟಣದ ಎಲ್ಲ ಕಡೆ ತಪಾಸಣೆ ನಡೆಸಲಾಗಿದೆ. ಸಾವಿರಾರು ಹನುಮಮಾಲಾಧಾರಿಗಳು ಸಂಕೀರ್ತನೆ ಯಾತ್ರೆ ಹೋಗುವ ಮಾರ್ಗದ ಉದ್ದಕ್ಕೂ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.
ಶ್ರೀರಂಗಪಟ್ಟಣದಲ್ಲಿ ಆಂಜನೇಯಸ್ವಾಮಿ ದೇಗುಲ-ಜಾಮಿಯಾ ಮಸೀದಿ ವಿವಾದ ಶುರುವಾಗಿ ಆರೇಳು ತಿಂಗಳುಗಳೇ ಆಗಿವೆ. ಇಲ್ಲಿದ್ದ ಮೂಡಲ ಬಾಗಿಲ ಆಂಜನೇಯಸ್ವಾಮಿ ದೇವಸ್ಥಾನವನ್ನು ಟಿಪ್ಪು ಸುಲ್ತಾನ್ ಜಾಮಿಯಾ ಮಸೀದಿಯಾಗಿ ಪರಿವರ್ತನೆ ಮಾಡಿದ್ದಾನೆ. 1782ರಿಂದ 1799ರವರೆಗೆ ಆಡಳಿತ ನಡೆಸಿದ್ದ ಟಿಪ್ಪು, 1784ರಲ್ಲಿ ಹಿಂದುಗಳ ದೇವಸ್ಥಾನ ಕೆಡವಿ, ಮಸೀದಿ ನಿರ್ಮಿಸಿದ. ಇಲ್ಲಿ ಆಂಜನೇಯ ದೇಗುಲ ಇತ್ತು ಎಂಬುದಕ್ಕೆ ಸಾಕ್ಷಿ ಇದೆ. ಉತ್ಕನನ ನಡೆಸಬೇಕು. ಈ ಮಸೀದಿ ತೆರವುಗೊಳಿಸಬೇಕು ಎಂಬುದು ಹಿಂದುಪರ ಸಂಘಟನೆಗಳ ವಾದ. ಮಂಡ್ಯ ಜಿಲ್ಲೆಯ ಹಾಲಹಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಜರಂಗ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಬಿ ಮಂಜುನಾಥ್ ಮತ್ತು ಸುಮಾರು 108 ಹನುಮ ಭಕ್ತರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೂಡ ಸಲ್ಲಿಸಿದ್ದಾರೆ.
ಮಸೀದಿ ಈ ಹಿಂದೆ ಹನುಮ ದೇವಾಲಯ ಆಗಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಇದ್ದಾವೆ. ಮೈಸೂರು ಗೆಜೆಟ್ನಲ್ಲೂ ಉಲ್ಲೇಖವಿದೆ. ಹಲವು ಬ್ರಿಟಿಷ್ ಬರಹಗಾರರ ಬರಹದಲ್ಲೂ ಆ ಬಗ್ಗೆ ಮಾಹಿತಿ ಇದೆ ಎಂದು ವಾದಿಸುತ್ತಿರುವ ಹನುಮ ಭಕ್ತರು, ಈ ಕೇಸ್ ಗೆಲ್ಲಿಸುಕೊಡುವಂತೆ ಆಂಜನೇಯನಿಗೆ ಹರಕೆ ಕಟ್ಟಿಕೊಂಡು, ಅಕ್ಟೋಬರ್ 24ರಂದು ಆ ಹರಕೆ ಪೂಜೆಯನ್ನೂ ಸಲ್ಲಿಸಿದ್ದಾರೆ.
ಇದನ್ನೂ ಓದಿ: Tunnel Found | ಶ್ರೀರಂಗಪಟ್ಟಣದ ಮಸೀದಿ ಹಿಂಭಾಗ ಸುರಂಗ ಮಾರ್ಗ ಪತ್ತೆ